ತಾವರೆಕೆರೆ ಮೆಟ್ರೋ ನಿಲ್ದಾಣದ ಕೆಳಗಿನ ರಸ್ತೆ ಅದ್ವಾನ: ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ!

Bangaluru News: ಬೆಂಗಳೂರಿನ ತಾವರೆಕೆರೆ ಮೆಟ್ರೋ ನಿಲ್ದಾಣದ ಕೆಳಗೆ ಹೊಸದಾಗಿ ನಿರ್ಮಿಸಿರುವ ರಸ್ತೆಯಲ್ಲಿ ಬೃಹತ್ ಗುಂಡಿಗಳು ಬಾಯಿ ತೆರೆದಿದ್ದು, ಪ್ರಯಾಣಿಕರಿಗೆ ಅಪಾಯ ತಂದೊಡ್ಡಿದೆ. ಅಭಿವೃದ್ಧಿಯ ಹೆಸರಿನಲ್ಲಿ ಮಾಡಿದ ಕಳಪೆ ಕಾಮಗಾರಿಯಿಂದಾಗಿ ಸಾವಿರಾರು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾವರೆಕೆರೆ ಮೆಟ್ರೋ ನಿಲ್ದಾಣದ ಕೆಳಗಿನ ರಸ್ತೆ ಅದ್ವಾನ: ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ!
ತಾವರೆಕೆರೆ ಮೆಟ್ರೋ
Image Credit source: tv9 kannada

Updated on: Jun 26, 2026 | 9:18 PM

ಮುಖ್ಯಾಂಶಗಳು

  • ತಾವರೆಕೆರೆ ಮೆಟ್ರೋ ಕೆಳಗೆ ರಸ್ತೆ ಅದ್ವಾನ
  • ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ
  • ಅಧಿಕಾರಿಗಳ ವಿರುದ್ಧ ಸ್ಥಳೀಯರು ಹಾಗೂ ವಾಹನ ಸವಾರರು ಆಕ್ರೋಶ

ಬೆಂಗಳೂರು, ಜೂನ್​​ 26: ಮೇಲೆ ಮೆಟ್ರೋ (Namma Metro), ಕೆಳಗೆ ಗುಂಡಿ ರಸ್ತೆ (potholes). ಅಭಿವೃದ್ಧಿಯ ಹೆಸರಿನಲ್ಲಿ ನಿರ್ಮಿಸಿದ ಹೊಸ ರಸ್ತೆ ಇದೀಗ ಜನರ ಆಕ್ರೋಶಕ್ಕೆ ಕಾರಣವಾಗಿದೆ. ತಾವರೆಕೆರೆ ಮೆಟ್ರೋ ನಿಲ್ದಾಣದ ಕೆಳಭಾಗದ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಲಿಗಾಗಿ ಬಾಯಿ ತೆರೆದಿದ್ದು, ಪ್ರತಿನಿತ್ಯ ಸಾವಿರಾರು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳಪೆ ಕಾಮಗಾರಿಯ ಬಂಡವಾಳ ಬಯಲು

ತಾವರೆಕೆರೆ ಮೆಟ್ರೋ ನಿಲ್ದಾಣದ ಬಳಿ ಹೊಸದಾಗಿ ನಿರ್ಮಾಣವಾದ ರಸ್ತೆಯಲ್ಲೇ ಇಂತಹ ಅವ್ಯವಸ್ಥೆ ಕಂಡು ಬಂದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೋಟ್ಯಂತರ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಿದ ಕೆಲವೇ ದಿನಗಳಲ್ಲಿ ಗುಂಡಿಗಳು ಬಿದ್ದಿರುವುದು ಕಳಪೆ ಕಾಮಗಾರಿಯ ಬಂಡವಾಳ ಬಯಲಾಗಿದೆ. ಪ್ರತಿದಿನ ಸಾವಿರಾರು ಜನ ಸಂಚರಿಸುವ ರಸ್ತೆ ಹಾಳಾಗಿರುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ: ಸರಣಿ ಸಮಸ್ಯೆ ಮಧ್ಯೆ ಮತ್ತೊಂದು ದುರಂತ: ಮೆಟ್ರೋ ಕಾಮಗಾರಿ ವೇಳೆ ಕಾರ್ಮಿಕ​ ಸಾವು

ಇನ್ನು ಸ್ವಲ್ಪ ಮಳೆ ಬಂದರೂ ಸಾಕು, ಈ ರಸ್ತೆಯ ದೊಡ್ಡ ದೊಡ್ಡ ಗುಂಡಿಗಳು ನೀರಿನಿಂದ ತುಂಬಿ ಕೆರೆಯಂತಾಗುತ್ತವೆ. ಪರಿಣಾಮ, ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಗುಂಡಿಗಳ ಆಳ ತಿಳಿಯದೆ ಆಕಸ್ಮಿಕವಾಗಿ ಬಿದ್ದು ಆಪತ್ತು ತಂದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಬಾರಿ ಮಳೆಯಾದಾಗಲೂ ಇಡೀ ಮೆಟ್ರೋ ನಿಲ್ದಾಣದ ಕೆಳಭಾಗ ಸಂಪೂರ್ಣ ಜಲಾವೃತಗೊಳ್ಳುತ್ತದೆ. ಇದರೊಂದಿಗೆ, ಮೆಟ್ರೋ ಬ್ರಿಡ್ಜ್‌ನಿಂದಾಗಿ ಹಗಲಿನಲ್ಲೇ ಕತ್ತಲೆಯ ವಾತಾವರಣ ಸೃಷ್ಟಿಯಾಗುತ್ತಿದ್ದು, ವಾಹನ ಸವಾರರು ಕಡ್ಡಾಯವಾಗಿ ಹೆಡ್‌ಲೈಟ್ ಆನ್ ಮಾಡಿಕೊಂಡೇ ಬರಬೇಕಾದ ಅನಿವಾರ್ಯತೆ ಇದೆ.

ಸ್ಥಳೀಯರು ಹಾಗೂ ವಾಹನ ಸವಾರರು ತೀವ್ರ ಆಕ್ರೋಶ

ಒಂದು ವೇಳೆ ಬೆಳಕಿನಲ್ಲೇ ಹೆಡ್‌ಲೈಟ್ ಹಾಕದಿದ್ದರೆ, ವಾಹನಗಳು ನೇರವಾಗಿ ಗುಂಡಿಗೆ ಬೀಳುವುದು ಗ್ಯಾರಂಟಿ ಎನ್ನುವಂತಾಗಿದೆ. ಕಣ್ಣೆದುರೇ ಇಷ್ಟೆಲ್ಲಾ ಅವ್ಯವಸ್ಥೆಗಳಿದ್ದರೂ ಕಣ್ಮುಚ್ಚಿ ಕುಳಿತಿರುವ ಜಿಬಿಎ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಸ್ಥಳೀಯರು ಹಾಗೂ ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಚೂರು ಹೆಚ್ಚು ಕಮ್ಮಿಯಾಗಿದ್ರು ದೊಡ್ಡ ಅನಾಹುತ: ಮೆಟ್ರೋನಲ್ಲಿ ತಾಂತ್ರಿಕ ದೋಷಕ್ಕೆ ಸ್ಫೋಟಕ ಕಾರಣ ಬಯಲು

ದೊಡ್ಡ ದೊಡ್ಡ ಗುಂಡಿಗಳನ್ನ ಮುಚ್ಚಿ, ಅಪಘಾತ ಸಂಭವಿಸುವ ಮುನ್ನವೇ ರಸ್ತೆ ಸರಿ ಮಾಡಬೇಕು. ಇಲ್ಲವಾದರೆ ಜನರಿಗೆ ಮತ್ತಷ್ಟು ಸಮಸ್ಯೆ ಉಂಟಾಗುವುದು ಗ್ಯಾರಂಟಿ.

ವರದಿ: ನಟರಾಜ್ ಟಿವಿ9 ಬೆಂಗಳೂರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us