Ramabai Ambedkar: ದೇಶದಲ್ಲಿ ಏನಾಗ್ತಿದೆ ಅಂತ ನಿಮಗೇ ಗೊತ್ತು; ಸಂವಿಧಾನದ ಪರಿಸ್ಥಿತಿ ಬಗ್ಗೆ ಅಂಬೇಡ್ಕರ್ ಮೊಮ್ಮಗಳ ಆತಂಕ
ನಾನು ಸಂವಿಧಾನವನ್ನೇನೋ ಬರೆದು ಕೊಟ್ಟಿದ್ದೇನೆ. ಆದರೆ ಈ ಸಂವಿಧಾನವನ್ನು ಹೇಗೆ ಬಳಸಬೇಕು ಎನ್ನುವುದು ಸರ್ಕಾರಗಳ ವಿವೇಚನೆಯನ್ನು ಅವಲಂಬಿಸಿರುತ್ತದೆ ಎನ್ನುವ ಅಂಬೇಡ್ಕರ್ ಅವರ ಮಾತುಗಳನ್ನು ಅವರು ನೆನಪಿಸಿಕೊಂಡರು.
ಬೆಂಗಳೂರು: ಕಳೆದ ಆರೇಳು ವರ್ಷಗಳಿಂದ ಸಂವಿಧಾನದ ಪರಿಸ್ಥಿತಿ ಏನಾಗುತ್ತಿದೆ ಎನ್ನುವುದು ನಿಮ್ಮ ಅರಿವಿಗೇ ಬರುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ (Dr BR Ambedkar) ಅವರು ನಮಗೆ ಉತ್ತಮ ಸಂವಿಧಾನವನ್ನೇ ಕೊಟ್ಟಿದ್ದಾರೆ. ಅದರಲ್ಲಿ ಯಾವುದೇ ತೊಡಕುಗಳು ಇಲ್ಲ ಎಂದು ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗಳು ರಮಾಬಾಯಿ ಅಂಬೇಡ್ಕರ್ ಹೇಳಿದರು. ನಗರದಲ್ಲಿ ಶುಕ್ರವಾರ (ಆಗಸ್ಟ್ 12) ನಡೆದ ರಾಜ್ಯಮಟ್ಟದ ಶೋಷಿತರ ಐಕ್ಯತಾ ಸಮಾವೇಶದಲ್ಲಿ ಅವರು ಮಾತನಾಡಿದರು.
ನಾನು ಸಂವಿಧಾನವನ್ನೇನೋ ಬರೆದು ಕೊಟ್ಟಿದ್ದೇನೆ. ಆದರೆ ಈ ಸಂವಿಧಾನವನ್ನು ಹೇಗೆ ಬಳಸಬೇಕು ಎನ್ನುವುದು ಸರ್ಕಾರಗಳ ವಿವೇಚನೆಯನ್ನು ಅವಲಂಬಿಸಿರುತ್ತದೆ. ಒಳ್ಳೆಯ ಸರ್ಕಾರ ಇದ್ದರೆ ನನ್ನ ಸಂವಿಧಾನ ಉತ್ತಮವಾಗಿ ಕಾಣಿಸುತ್ತದೆ. ಕೆಟ್ಟ ಸರ್ಕಾರ ಬಂದರೆ ಅವರಿಗೆ ನನ್ನ ಸಂವಿಧಾನ ಕೆಟ್ಟದಾಗಿ ಕಾಣಿಸುತ್ತದೆ ಎನ್ನುವ ಅಂಬೇಡ್ಕರ್ ಅವರ ಮಾತುಗಳನ್ನು ರಮಾಬಾಯಿ ನೆನಪಿಸಿಕೊಂಡರು. ಈ ಮಾತುಗಳನ್ನು ಅಂಬೇಡ್ಕರ್ ಅವರು ಸಂವಿಧಾನಕ್ಕೆ ಸಂಬಂಧಿಸಿದ ಚರ್ಚೆಯ ವೇಳೆ ಸಂಸತ್ತಿನಲ್ಲಿ ಆಡಿದ್ದರು.
ಅಂಬೇಡ್ಕರ್ ಅವರು ತಮ್ಮ ಸಂವಿಧಾನದಲ್ಲಿ ಯಾವುದೇ ತಪ್ಪುಗಳಿಲ್ಲ ಎಂದು ಹೇಳಿದ್ದರು. ಭಾರತೀಯರಿಗೆ ಸಿಗಬೇಕಾದ ಎಲ್ಲ ನ್ಯಾಯವನ್ನೂ ಸಂವಿಧಾನದ ಮೂಲಕ ನೀಡಿದ್ದೇನೆ ಎಂದು ಅಂಬೇಡ್ಕರ್ ಹೇಳಿದ್ದರು ಎಂದು ನೆನಪಿಸಿಕೊಂಡರು. ಮನುಸ್ಮೃತಿಯಿಂದ ಮಹಿಳೆಯರಿಗೆ ಹಲವು ಸಮಸ್ಯೆಗಳು ಉಂಟಾಗಿವೆ. ಸಂವಿಧಾನದಿಂದ ಮಹಿಳೆಯರಿಗೆ ನ್ಯಾಯ ಸಿಕ್ಕಿದೆ. ಭಾರತದ ಎಲ್ಲ ಸಮುದಾಯಗಳ ಮಹಿಳೆಯರೂ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಭಾರತವು 75ನೇ ಸ್ವಾತಂತ್ರೋತ್ಸವದ ಹೊಸಿಲಲ್ಲಿದೆ. ಆದರೆ ಜಾತಿ ವ್ಯವಸ್ಥೆಯ ಕಾಠಿಣ್ಯ ಮಾತ್ರ ಕಡಿಮೆಯಾಗಿಲ್ಲ. ಭೀಮಾ ಕೋರೆಗಾಂವ್ ಬಗ್ಗೆ ಎಲ್ಲರಿಗೂ ಗೊತ್ತಾಗಬೇಕು. ಅಂಬೇಡ್ಕರ್ ಅವರು ಭೀಮಾ ಕೋರೆಗಾವ್ಗೇ ಭೇಟಿ ನೀಡಿದ್ದರು. ಅದು ದಲಿತರ ಶೌರ್ಯದ ಪ್ರತೀಕ. ಅಂಬೇಡ್ಕರ್ ಹಿಂದುಳಿದ ವರ್ಗಗಳಿಗೆ ಕೇವಲ 10 ವರ್ಷ ಮೀಸಲಾತಿ ನೀಡಿದ್ದರು. ರಾಜಕೀಯ ಮಿಸಲಾತಿಯನ್ನು ಕೂಡ 10 ವರ್ಷ ಕೊಡಬೇಕು ಎಂದು ಹೇಳಿದ್ದರು. ಆದರೆ ಇದಕ್ಕೆ ರಾಜಕೀಯವಾಗಿ ಬಹಳಷ್ಟು ವಿರೋಧಗಳು ವ್ಯಕ್ತವಾಗಿದ್ದವು ಎಂದು ನೆನಪಿಸಿಕೊಂಡರು.
Published On - 2:36 pm, Fri, 12 August 22