
ಬೆಂಗಳೂರು, ಸೆಪ್ಟೆಂಬರ್ 04: ‘ಆಪರೇಷನ್ ಮುಕ್ತ’ ಕಾರ್ಯಾಚರಣೆಯಡಿ ಬೆಂಗಳೂರಿನ ಪೊಲೀಸರು ವಶಕ್ಕೆ ಪಡೆದಿದ್ದ ಬಾಂಗ್ಲಾದೇಶದ 22 ವರ್ಷದ ಗರ್ಭಿಣಿ ಮಹಿಳೆಗೆ ಸುಸೂತ್ರ ಹೆರಿಗೆಗೆ ಅಗತ್ಯ ವ್ಯವಸ್ಥೆ ಜೊತೆಗೆ, ಗಡಿಪಾರು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಆಕೆಯ ನವಜಾತ ಹೆಣ್ಣು ಮಗುವಿನ ಆರೈಕೆಯನ್ನೂ ಮಾಡಿರುವ ಘಟನೆ ನಡೆದಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅವರು ಅಕ್ರಮವಾಗಿ ವಾಸಿಸುತ್ತಿದ್ದಾರೆಂಬ ಆರೋಪದ ಹಿನ್ನೆಲೆ ರಬಿಬುಲ್ ಬಾದ್ಶಾ ಅವರ ಪತ್ನಿಯಾಗಿರುವ ಖತೂನ್ ಅವರನ್ನು ಜುಲೈ 17ರಂದು ವಶಕ್ಕೆ ಪಡೆಯಲಾಗಿತ್ತು. ಬಳಿಕ ಅವರನ್ನು ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಮುಂದೆ ಹಾಜರುಪಡಿಸಲಾಗಿದ್ದು, ಅದರ ನಿರ್ದೇಶನದಂತೆ ಬಂಧನ ಕೇಂದ್ರದ ವಿಶೇಷ ವಾರ್ಡ್‌ನಲ್ಲಿ ಇರಿಸಲಾಗಿತ್ತು.
ಇನ್ನು ಪ್ರಕರಣ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ವೈದ್ಯಕೀಯ ತಪಾಸಣೆಗಳಿಗೆ ಆಕೆಯೊಂದಿಗೆ ತೆರಳಿ, ಅಗತ್ಯ ವಸ್ತುಗಳನ್ನು ವ್ಯವಸ್ಥೆ ಮಾಡುತ್ತಿದ್ದರು. ಪ್ರಸವಪೂರ್ವ ಆರೈಕೆಯೂ ಸರಿಯಾಗಿ ದೊರೆಯುವಂತೆ ನೋಡಿಕೊಳ್ಳುತ್ತಿದ್ದರು. ಒಂದು ತಿಂಗಳಿಗೂ ಸ್ವಲ್ಪ ಹೆಚ್ಚು ಸಮಯದ ಬಳಿಕ, ಆಗಸ್ಟ್ 24ರಂದು ಖತೂನ್ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಮ್ಮ ಎರಡನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದರಿಂದಾಗಿ, ನಾಲ್ಕು ವರ್ಷದ ಮಗಳೊಂದಿಗೆ ಖತೂನ್ ಅವರನ್ನು ಗಡಿಪಾರು ಮಾಡುವ ಜವಾಬ್ದಾರಿಯ ಜೊತೆಗೆ, ನವಜಾತ ಶಿಶುವಿನ ಆರೈಕೆಯ ಜವಾಬ್ದಾರಿಯೂ ಪೊಲೀಸರ ಮೇಲಿತ್ತು.
ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಜೈಲು ಬಂಧಿಗಳ ಪುಂಡಾಟ: ವಾರ್ಡರ್ ಕೊಲೆಗೆ ಯತ್ನ
ಬಂಧಿತ ವಲಸಿಗರ ಪ್ರಕರಣವನ್ನು ನಿರ್ವಹಿಸುತ್ತಿದ್ದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಮತ್ತು ಸ್ವತಃ ಆರು ತಿಂಗಳ ಗರ್ಭಿಣಿಯಾಗಿರುವ ಕಲಾವತಿ ಅವರಿಗೆ ಖತೂನ್ ಅಗತ್ಯ ಆರೈಕೆ ಪಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ನೀಡಲಾಗಿತ್ತು. ಖತೂನ್ ಅವರನ್ನು ಬಂಧನ ಕೇಂದ್ರದ ವಿಶೇಷ ವಾರ್ಡ್‌ನಲ್ಲಿ ಇರಿಸಲಾಗಿದ್ದು, ಮಹಿಳಾ ಪೊಲೀಸ್ ಸಿಬ್ಬಂದಿ ಸರದಿಯಂತೆ ಆಕೆಯ ಆರೈಕೆ ಮಾಡುತ್ತಿದ್ದರು. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕವೂ ಮಹಿಳೆ ಮತ್ತು ಮಗುವನ್ನು ಮತ್ತೆ ಕೇಂದ್ರಕ್ಕೆ ಕರೆತರಲಾಗಿತ್ತು. FRRO ಗಡಿಪಾರು ಆದೇಶ ಜಾರಿಯಾಗುವವರೆಗೆ ಪೊಲೀಸ್ ಸಿಬ್ಬಂದಿ ವ್ಯವಸ್ಥೆಗಳ ಮೇಲೆ ನಿಗಾ ಮುಂದುವರಿಸಿದ್ದರು.
ಅಂತಿಮವಾಗಿ ಅವರನ್ನು ಪಶ್ಚಿಮ ಬಂಗಾಳದ ಮಾಲ್ಡಾಗೆ ಕರೆದೊಯ್ದು, ಅಲ್ಲಿಂದ ಬಾಂಗ್ಲಾದೇಶಕ್ಕೆ ಕಳುಹಿಸಬೇಕಾಗಿದ್ದ ಹಿನ್ನೆಲೆ ಆಗಸ್ಟ್ 30ರಂದು ಅವರನ್ನು ರೈಲಿನ ಮೂಲಕ ಕರದೊಯ್ಯಲಾಗಿತ್ತು. ಮಗು ಕೇವಲ ಒಂಬತ್ತು ದಿನಗಳಾಗಿದ್ದರಿಂದ, ತಾಯಿ ಮತ್ತು ಮಗುವನ್ನು ಕರೆದೊಯ್ಯಲು ಹೆಚ್ಚುವರಿ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರ ಪ್ರಕಾರ, ತಾಯಿ ಮತ್ತು ಮಗು ಸುರಕ್ಷಿತವಾಗಿ ಮಾಲ್ಡಾ ತಲುಪಿದ್ದು, ಬಳಿಕ ಅವರನ್ನು ಪಶ್ಚಿಮ ಬಂಗಾಳ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:40 pm, Fri, 4 September 26