
Breaking News Today Live Updates in Kannada: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ನೀಟ್ (NEET) ಪರೀಕ್ಷಾ ಅಕ್ರಮದ ಕುರಿತು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂದೇಶ ನೀಡಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರ ವೇದನೆಗೆ ಧ್ವನಿಯಾಗಿದ್ದಾರೆ. ಇನ್ನೊಂದೆಡೆ, ನೀಟ್ ಅಕ್ರಮ ಖಂಡಿಸಿ 26 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಲಡಾಖ್‌ನ ಸೋನಂ ವಾಂಗ್ಚುಕ್, ಕೇಂದ್ರ ಸಚಿವರ ಸಮ್ಮುಖದಲ್ಲಿ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ. ಇತ್ತ ಕರ್ನಾಟಕದಲ್ಲಿ ಮುಂಗಾರು ಚುರುಕುಗೊಂಡಿದ್ದು, ಉತ್ತರ ಕನ್ನಡ ಜಿಲ್ಲೆಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಶಿರಸಿ ಮತ್ತು ಸಿದ್ದಾಪುರ ತಾಲೂಕುಗಳ ಶಾಲೆ-ಅಂಗನವಾಡಿಗಳಿಗೆ ಜಿಲ್ಲಾಧಿಕಾರಿ ರಜೆ ಪ್ರಕಟಿಸಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಗೆ ನಾಳೆ (ಜುಲೈ 25) ಆರೆಂಜ್ ಅಲರ್ಟ್ ನೀಡಲಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನಾಳೆ(ಶನಿವಾರ) ಉಡುಪಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಟಿ.ಕೆ.ಸ್ವರೂಪ್ ಆದೇಶ ಹೊರಡಿಸಿದ್ದಾರೆ.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ರವನೀತ್ ಸಿಂಗ್ ಬಿಟ್ಟು ಅವರ ರಾಜೀನಾಮೆ ಅಂಗೀಕಾರವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಜುಲೈ 24) ರವನೀತ್ ಸಿಂಗ್ ಬಿಟ್ಟು ರಾಜೀನಾಮೆ ಅಂಗೀಕಾರ ಮಾಡಿದ್ದಾರೆ. ರಾಜ್ಯಸಭಾ ಸದಸ್ಯತ್ವ ಸ್ಥಾನ ಜೂನ್‌ನಲ್ಲಿ ಕೊನೆಗೊಂಡಿತ್ತು. ಹೀಗಾಗಿ ಅವರು ರಾಜೀನಾಮೆ ನೀಡಿದ್ದು, ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆಗಳಿವೆ.
ನೀಟ್ ಪ್ರಶ್ನೆ ಪತ್ರಿಕೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕೇಂದ್ರ ಸರ್ಕಾರವು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ವಿನೀತ್ ಜೋಶಿ ಅವರನ್ನು ಆ ಹುದ್ದೆಯಿಂದ ಮುಕ್ತಗೊಳಿಸಿ ಪಂಚಾಯತ್ ರಾಜ್ ಸಚಿವಾಲಯಕ್ಕೆ ವರ್ಗಾಯಿಸಿದೆ. ಇದರ ಬೆನ್ನಲ್ಲೇ ಇದೀಗ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ 47 ಅಧಿಕಾರಿಗಳ ವಜಾ ಮಾಡಲಾಗಿದೆ. NTAಯಿಂದ 47 ಅಧಿಕಾರಿಗಳನ್ನ ವಜಾಗೊಳಿಸಿರುವ ಕೇಂದ್ರ ಸರ್ಕಾರ, ವಜಾಗೊಂಡ ಕೆಲವರ ವಿರುದ್ಧ ಕಠಿಣ ಕಾನೂನು ಕ್ರಮಕೈಗಳ್ಳೊವು ಸಾಧ್ಯತೆಗಳಿವೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ವಿಪಕ್ಷಗಳು ಹಾಗೂ ಸಿಜೆಪಿ ಭಾರೀ ಪ್ರತಿಭಟನೆ ನಡೆಸಿದ್ದು, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು ಹಿಡಿದಿವೆ. ಇದರ ಮಧ್ಯೆ ಇದೀಗ ಕೇಂದ್ರ ಸರ್ಕಾರ, ಶಿಕ್ಷಣ ಸಚಿವಾಲಯದಲ್ಲಿನ ಸುಧಾರಣೆಗಳ ಬಗ್ಗೆ ಪಟ್ಟಿ ಪ್ರಕಟಿಸಲಿದೆ. ಇಂದು (ಜುಲೈ 24) ರಾತ್ರಿ 8 ಗಂಟೆಗೆ 8 ಗಂಟೆಗೆ ಎನ್ಟಿಎ, ಸುಧಾರಣೆಗಳ ಪಟ್ಟಿ ಪ್ರಕಟಿಸಲಿದೆ.
ಚಾಮುಂಡಿಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಸಿ.ಜಿ.ಕೃಷ್ಣ ಅವರನ್ನು ಚಾಮುಂಡಿಬೆಟ್ಟ ಪ್ರಾಧಿಕಾರದ ನೂತನ ಕಾರ್ಯದರ್ಶಿಯಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಿ.ಜಿ.ಕೃಷ್ಣ ಅವರು ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಇಒ ಆಗಿದ್ದರು.
ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರ ನಿವಾಸಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಭೇಟಿ ನೀಡಿದ್ದಾರೆ. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ್ದು, ಚೆನ್ನಮ್ಮ ನಿಧನ ಹಿನ್ನೆಲೆ ದೇವೇಗೌಡರ ಕುಟುಂಬಕ್ಕೆ ಸಾಂತ್ವಾನ ಹೇಳಿ ಆತ್ಮಸ್ಥೈರ್ಯ ತುಂಬಿದ್ದಾರೆ.
ನೀಟ್ ಅಕ್ರಮ ಖಂಡಿಸಿ ಜುಲೈ 24ರಂದು ದೇಶಾದ್ಯಂತ ಮೋಂಬತ್ತಿ ಮೆರವಣಿಗೆ ಮಾಡಲು ಕಾಂಗ್ರೆಸ್ ಕರೆ ನೀಡಿದೆ. ಈ ದೇಶಾದ್ಯಂತ ಮೋಂಬತ್ತಿ ಮೆರವಣಿಗೆಗೆ ಮಾಡಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಎಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳಿಗೆ ಸಂದೇಶ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಇಂದು (ಜುಲೈ 24) ನಡೆದ ಸಚಿವ ಸಂಪುಟದಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಬಳ್ಳಾರಿ-ಗುಂತಕಲ್ ನಡುವಿನ ರೈಲು ಮಾರ್ಗಕ್ಕೆ ಅನುಮೋದನೆ ನೀಡಲಾಗಿದೆ. ಹಾಗೇ ವೇದಾವತಿ ನದಿ ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ. ಇನ್ನು ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಅಶ್ವಿನ್ ವೈಷ್ಣವ್, ಉತ್ತರ ಕರ್ನಾಟಕ ಭಾಗದಲ್ಲಿ ರೈಲ್ವೆ ಯೋಜನೆ ಪೂರ್ಣವಾಗಿದೆ. ಸರಕು ಸಾಗಣೆಗೆ ಶೇಕಡಾ 89ರಷ್ಟು ರೈಲನ್ನೇ ಅವಲಂಬಿಸಲಾಗಿದ್ದು, ವಿಶ್ವದಲ್ಲೇ ಅತಿಹೆಚ್ಚು ರೈಲು ಸಂಪರ್ಕ ಹೊಂದಿರುವ ದೇಶ ಭಾರತವಾಗಿದೆ. ಹೈಡ್ರೋಜನ್ ರೈಲು ಒಂದು ಸಾವಿರ ಕಿ.ಮೀ. ಸಂಚಾರ ನಡೆಸಿದೆ. ದೇಶದಲ್ಲಿ ಹೈಡ್ರೋಜನ್ ರೈಲು ಸಂಚಾರ ಯಶಸ್ವಿಯಾಗಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಧರಣಿನಿರತ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರಕ್ಕೆ ನಿಗದಿಪಡಿಸಿದೆ.ಪರಿಸ್ಥಿತಿ ಗಂಭೀರವಾಗಿದೆ, ತಕ್ಷಣ ಗಮನಹರಿಸಬೇಕಾಗಿದೆ. ವಿದ್ಯಾರ್ಥಿಗಳ ಮೇಲೆ ಪೊಲೀಸರ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಹಿರಿಯ ವಕೀಲ ಗೋಪಾಲ ಶಂಕರನಾರಾಯಣ ಮನವಿ ಮಾಡಿದರು. ಇದನ್ನು ಆಲಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ಜುಲೈ 27ರಂದು 2 ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲೇಬೇಕು. ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದೆ. ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್‌ಗಳಿಂದ ದಾಳಿ ಮಾಡಲಾಗಿದೆ. ವಿದ್ಯಾರ್ಥಿಗಳ ಮೇಲೆ ಹಲ್ಲೆ, ಧಮ್ಕಿ ಹಾಕುವುದನ್ನು ಕೂಡಲೇ ನಿಲ್ಲಿಸಬೇಕು. ವಿದ್ಯಾರ್ಥಿಗಳ ಎಲ್ಲ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಬೇಕು ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಪ್ರತಿಭಟನಾನಿರತ ಸಿಜೆಪಿ ಮುಖಂಡರ ಜೊತೆಗಿನ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಸಚಿವ ಜೆ.ಪಿ.ನಡ್ಡಾ, ಪ್ರತಿಭಟನಾನಿರತ ಸಿಜೆಪಿ ಮುಖಂಡರ ಬೇಡಿಕೆಗಳನ್ನು ಆಲಿಸಿದ್ದು, ವಿದ್ಯಾರ್ಥಿಗಳು ಪ್ರಮುಖ 5 ಸುಧಾರಣೆಗೆ ಮನವಿ ಮಾಡಿದ್ದಾರೆ. ಸಿಜೆಪಿಯವರು ಪ್ರಮುಖ ಮೂರು ಬೇಡಿಕೆಗಳನ್ನು ಇಟ್ಟಿದ್ದಾರೆ. ಕೆಲ ಬೇಡಿಕೆ ಈಡೇರಿಕೆಗೆ ನಾಳೆವರೆಗೆ ಸಮಯ ತೆಗೆದುಕೊಂಡಿದ್ದು, ವಿದ್ಯಾರ್ಥಿಗಳ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸಚಿವರು ಹಾಗೂ ಸಿಜೆಪಿ ನಾಯಕರ ಸಂಧಾನ ಸಭೆ ನಡೆದಿದ್ದು, ಸಭೆಯಲ್ಲಿ ಪ್ರಮುಖವಾಗಿ ಮೂರು ಬೇಡಿಕೆಗಳನ್ನು ಸಿಜೆಪಿ ಇಟ್ಟಿದೆ. ಇದರಲ್ಲಿ ಪ್ರಮುಖವಾಗಿ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆಯಬೇಕೆಂಬ ಬೇಡಿಕೆ ಇಟ್ಟಿದ್ದು, ಇದಕ್ಕೆ ಕೇಂದ್ರ ಸಚಿವರು ನಾಳೆ(ಜುಲೈ 25)ವರೆಗೂ ಸಮಯ ಕೇಳಿದ್ದಾರೆ. ಈ ಸಂಬಂಧ ಸಭೆ ಬಳಿಕ ಸಿಜೆಪಿ ಮಾಹಿತಿ ಹಂಚಿಕೊಂಡಿದ್ದು, ಕೇಂದ್ರ ಸರ್ಕಾರದ ಮುಂದೆ ಮೂರು ಬೇಡಿಕೆಗಳನ್ನು ಇಡಲಾಗಿತ್ತು.ಈ ಪೈಕಿ ಕೇಂದ್ರ ಸರ್ಕಾರ ಎರಡು ಬೇಡಿಕೆಗಳನ್ನು ಪರಿಗಣಿಸಿದೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವ ಬಗ್ಗೆ ನಾಳೆವರೆಗೂ ಕಾಲಾವಕಾಶ ಕೇಳಿದೆ. ನಾಳೆ ಕೇಂದ್ರ ಸರ್ಕಾರದ ಜೊತೆ 3ನೇ ಸುತ್ತಿನ ಮಾತುಕತೆ ನಡೆಯಲಿದೆ ಎಂದು ತಿಳಿಸಿದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಸಚಿವ ಧರ್ಮೆಂದ್ರ ಪ್ರಧಾನ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಸಿಜೆಪಿ ಪ್ರತಿನಿಧಿಗಳ ಜೊತೆ ಕೇಂದ್ರ ಸಚಿವದ್ವಯರು ನಡೆಸಿದ ಸಭೆ ಅಂತ್ಯವಾಗಿದೆ. ಇಂದು (ಜುಲೈ 24) ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ಕೇಂದ್ರ ಸಚಿವರಾದ ನಡ್ಡಾ, ಜಿತೇಂದ್ರ ಸಿಂಗ್ ಜೊತೆ ಸುಮಾರು ಒಂದು ಗಂಟೆಗಳ ಕಾಲ ಸಭೆ ನಡೆದಿದ್ದು, ಈ ವೇಳೆ ಸಿಜೆಪಿ ವಕ್ತಾರರಾದ ಸೌರವ್, ಅಶುತೋಷ್ ಅವರು ಕೆಲ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮಸೂದೆಗೆ ಮೋದಿ ಸಂಪುಟ ಅನುಮೋದನೆ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿಕ್ಷಗಳು ಭಾರೀ ಪ್ರತಿಭಟನೆ ನಡೆಸಿದ್ದು ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸುತ್ತಿವೆ. ಇದರ ಮಧ್ಯೆ ಸಾರ್ವಜನಿಕ ಪರೀಕ್ಷೆಗಳ(ಅಕ್ರಮ ಮಾರ್ಗಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆಗೆ-2024 ಪ್ರಧಾನಿ ಮೋದಿ ಸಂಪುಟ ಅನುಮೋದನೆ ನೀಡಿದ್ದು, ಸಚಿವ ಜಿತೇಂದ್ರ ಸಿಂಗ್ ಅವರು ಸಂಸತ್‌ನಲ್ಲಿ ತಿದ್ದುಪಡಿ ಮಸೂದೆ ಮಂಡಿಸಲಿದ್ದಾರೆ.
ನೀಟ್ ಸೇರಿದಂತೆ ಪ್ರಮುಖ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕೇಂದ್ರ ಸರ್ಕಾರ ‘ಸಾರ್ವಜನಿಕ ಪರೀಕ್ಷೆಗಳ ಕಾಯ್ದೆ’ಗೆ ಕಠಿಣ ತಿದ್ದುಪಡಿ ತರುತ್ತಿದೆ. ಹೊಸ ನಿಯಮದಂತೆ ಅಪರಾಧಿಗಳಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 1 ಕೋಟಿ ರೂ. ದಂಡ ವಿಧಿಸಲಾಗುವುದು. ಸೇವಾ ಪೂರೈಕೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತಿದ್ದು, ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳ ಮೂಲಕ ಶೀಘ್ರ ತೀರ್ಪು ನೀಡಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ. ಮತ್ತಷ್ಟು ಓದಿ
ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನ ಅಧಿಕೃತ ಉದ್ಘಾಟನೆಗೂ ಮುನ್ನವೇ ಭಾರತಕ್ಕೆ ಶುಭಾರಂಭ ಸಿಕ್ಕಿದ್ದು, ತಾರಾ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ 75 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಕನಿಷ್ಠ ಕಂಚಿನ ಪದಕ ಖಚಿತಪಡಿಸಿದ್ದಾರೆ. ಪ್ರಮುಖ ಕ್ರೀಡೆಗಳ ಅನುಪಸ್ಥಿತಿಯ ನಡುವೆಯೂ ಲವ್ಲಿನಾ ಅವರ ಈ ಸಾಧನೆ ಭಾರತೀಯ ಕ್ರೀಡಾಭಿಮಾನಿಗಳಲ್ಲಿ ಸಂಭ್ರಮ ತಂದಿದ್ದು, ಭಾರತದ ಒಟ್ಟು ಪದಕಗಳ ಸಂಖ್ಯೆ 30ಕ್ಕೂ ಹೆಚ್ಚಾಗುವ ಭರವಸೆ ಮೂಡಿಸಿದೆ. ಮತ್ತಷ್ಟು ಓದಿ
ಹಾಸನ ಹೊರವಲಯದ ದೊಡ್ಡಪುರ ಬಳಿ ತಡರಾತ್ರಿ ಟಯರ್ ಬ್ಲಾಸ್ಟ್ ಆಗಿ 1,100 ಕೇಸ್ ಬಿಯರ್ ಹೊತ್ತೊಯ್ಯುತ್ತಿದ್ದ ಲಾರಿ ಪಲ್ಟಿಯಾಗಿದೆ. ವುಡ್ ಪಿಕರ್ ಡಿಸ್ಟಿಲರೀಸ್‌ನಿಂದ ಕೊಪ್ಪಳಕ್ಕೆ ತೆರಳುತ್ತಿದ್ದ ಲಾರಿಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮದ್ಯ ರಸ್ತೆ ಪಾಲಾಗಿದ್ದು, ಸ್ಥಳೀಯರು ಸಿಕ್ಕಷ್ಟು ಬಾಟಲಿಗಳನ್ನು ಕೊಂಡೊಯ್ದಿದ್ದಾರೆ. ಪೊಲೀಸರು ಮಾರ್ಗ ಬಂದ್ ಮಾಡಿದ್ದು, ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೀಡಿಯೋ ನೋಡಿ
ನೀಟ್ ಅಕ್ರಮ ಖಂಡಿಸಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸಂಸತ್ತಿನ ಮಕರ ದ್ವಾರದಲ್ಲಿ ವಿಪಕ್ಷಗಳು ಧರಣಿ ನಡೆಸಿದವು. ಇದರಿಂದ ಲೋಕಸಭೆ ಕಲಾಪ ಮುಂದೂಡಲ್ಪಟ್ಟಿದೆ. ಇನ್ನೊಂದೆಡೆ, ಕಾಂಗ್ರೆಸ್ ಕರೆಯಂತೆ ದೆಹಲಿಯ ಜಂತರ್ ಮಂತರ್‌ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಜಮಾಯಿಸಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತಷ್ಟು ಓದಿ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು 15 ದಿನಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿರುವುದನ್ನು ಡಿ.ಕೆ. ಶಿವಕುಮಾರ್ ಸ್ವಾಗತಿಸಿದ್ದಾರೆ. ವಿದ್ಯಾರ್ಥಿಗಳು ಹಾಗೂ ಯುವಕರ ಭವಿಷ್ಯದ ದೃಷ್ಟಿಯಿಂದ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಮತ್ತು ದೇಶದ ಗಮನ ಸೆಳೆದಿರುವುದು ಒಳ್ಳೆಯ ಬೆಳವಣಿಗೆ ಎಂದು ಬೆಂಗಳೂರಿನಲ್ಲಿ ಹೇಳಿದ್ದಾರೆ.
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಎರಡನೇ ಆಷಾಢ ಶುಕ್ರವಾರದ ಅಂಗವಾಗಿ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ವಿಜೃಂಭಣೆಯ ಪೂಜಾ ಕೈಂಕರ್ಯಗಳು ನೆರವೇರುತ್ತಿವೆ. ದೇವಾಲಯವನ್ನು ತೋತಾಪುರಿ ಮಾವು, ಡ್ರ್ಯಾಗನ್ ಫ್ರೂಟ್ಸ್ ಹಾಗೂ ವಿವಿಧ ಫಲ-ಪುಷ್ಪಗಳಿಂದ ಮನಮೋಹಕವಾಗಿ ಅಲಂಕರಿಸಲಾಗಿದೆ. ಇಂದು ಶ್ರೀ ದೇವಿಯು ಗುಲಾಬಿ ಬಣ್ಣದ ರೇಷ್ಮೆ ಸೀರೆಯುಟ್ಟು, ಸಕಲ ಆಭರಣಗಳೊಂದಿಗೆ ‘ಮಹಾಲಕ್ಷ್ಮಿ’ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದು, ಸಹಸ್ರಾರು ಭಕ್ತರು ಸುದೀರ್ಘ ಸರತಿ ಸಾಲಿನಲ್ಲಿ ನಿಂತು ತಾಯಿಯ ದಿವ್ಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ವೀಡಿಯೋ ನೋಡಿ
ಉತ್ತರ ಪ್ರದೇಶದ ಭಾರತ-ನೇಪಾಳ ಗಡಿಯಲ್ಲಿ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದ ಅಮೆರಿಕದ ಪ್ರಜೆ ಹಾಗೂ ‘ವಾರಿಸ್ ಪಂಜಾಬ್ ದೇ’ ಖಲಿಸ್ತಾನಿ ಸಂಘಟನೆಯ ವಾಂಟೆಡ್ ಉಗ್ರ ಸೇರಿದಂತೆ ಐವರನ್ನು ಭದ್ರತಾ ಪಡೆಗಳು ಬಂಧಿಸಿವೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ವಿಚಾರಣೆ ಕಾಯ್ದುಕೊಳ್ಳಲಾಗಿದೆ. ಮತ್ತಷ್ಟು ಓದಿ
ಚಾಮರಾಜನಗರದ ಹೆಗ್ಗೊಠಾರ ಗ್ರಾಮದ ಬಳಿ ಅಳವಿನಂಚಿನಲ್ಲಿರುವ ಚಿಪ್ಪುಹಂದಿಯ 2.8 ಕೆಜಿ ಚಿಪ್ಪು ಮಾರಾಟ ಮಾಡಲು ಯತ್ನಿಸುತ್ತಿದ್ದ ಮಹೇಶ್ ನಾಯಕ (27) ಎಂಬಾತನನ್ನು ಅರಣ್ಯ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 4 ನಾಡಬಂದೂಕು ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣಾ ನದಿಗೆ 60,000 ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದುಬರುತ್ತಿದ್ದು, ನದಿ ಮುಂಗಾರಿನ ಆರ್ಭಟದೊಂದಿಗೆ ಬೊಬ್ಬೆರೆದು ಹರಿಯುತ್ತಿದೆ. ನೀರಿನ ಸೆಳವು ತೀವ್ರಗೊಂಡ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿಯ ಮಹಿಷವಾಡಗಿ ಹಾಗೂ ಬಾಗಲಕೋಟೆಯ ರಬಕವಿ ನಡುವಿನ ಬೋಟ್ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಮೂಡಿಗೆರೆ ಪಟ್ಟಣದ ನೂತನ ಲೇಔಟ್‌ನಲ್ಲಿ 200 ರೂ. ಮುಖಬೆಲೆಯ ಖೋಟಾ ನೋಟು ಚಲಾವಣೆಗೆ ಯತ್ನಿಸುತ್ತಿದ್ದ ಮಂಗಳೂರಿನ ಮಹಮದ್ ಅಲಿ ಹಾಗೂ ಮೂಡಿಗೆರೆಯ ಮಹೇಶ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ‘ಬಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ನಮೂದಿಸಲಾಗಿದ್ದ ಒಟ್ಟು 18,000 ರೂ. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್‌ಐಆರ್ (SIR) ಕಾರ್ಯದಲ್ಲಿ ನಿರತರಾಗಿದ್ದ ಕುರುಬರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಶಮಂತಾಕುಮಾರಿ (44) ಹೃದಯಾಘಾತದಿಂದ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಮೇಲಾಧಿಕಾರಿಗಳ ಅತಿಯಾದ ಒತ್ತಡವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ತೀವ್ರ ಬಿಪಿ, ಶುಗರ್ ಹಾಗೂ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು, ‘ಈ ಕೆಲಸದ ಒತ್ತಡದಿಂದ ನನ್ನನ್ನು ಬಿಡುಗಡೆ ಮಾಡಲು ಸಾಧ್ಯವೇ’ ಎಂದು ಮುನ್ನವೇ ಅಳಲು ತೋಡಿಕೊಂಡಿದ್ದರೆನ್ನಲಾಗಿದೆ.
ಕೋಲಾರದ ಮಾಜಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ್ ಬಾಬು ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು, 485 ಎಕರೆ ಅಕ್ರಮ ಭೂ ಮಂಜೂರಾತಿಯಿಂದ ಸರ್ಕಾರಕ್ಕೆ 768 ಕೋಟಿ ರೂ. ನಷ್ಟವಾಗಿರುವ ಕಳವಳಕಾರಿ ವರದಿ ಬಿಡುಗಡೆ ಮಾಡಿದ್ದಾರೆ. ದಾಳಿ ವೇಳೆ 128 ಮೂಲ ಸರ್ಕಾರಿ ದಾಖಲೆಗಳು, ನಕಲಿ ಸೀಲುಗಳು ಪತ್ತೆಯಾಗಿದ್ದು, ಆಗಸ್ಟ್ 21 ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಕೋಲಾರ ಜಿಲ್ಲಾಧಿಕಾರಿಗೆ ಲೋಕಾಯುಕ್ತ ಸಮನ್ಸ್ ಜಾರಿ ಮಾಡಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್’ ಅನ್ನು ತಕ್ಷಣವೇ ನಿಷೇಧಿಸಬೇಕೆಂದು ತಮಿಳುನಾಡಿನ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಎಕ್ಸ್ (X) ಪೋಸ್ಟ್ ಮೂಲಕ ಕೇಂದ್ರ ಸರ್ಕಾರವನ್ನು ಪುನಃ ಒತ್ತಾಯಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಂದು (ಜುಲೈ 24) ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಆದೇಶ ಹೊರಡಿಸಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಟಿ.ನರಸೀಪುರ ತಾಲೂಕಿನ ಟಿ.ದೊಡ್ಡಪುರ ಗ್ರಾಮದ ಬಳಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಹುಣಸೂರಿನ ಅಜರ್ ವಾಸೀಮ್ ಎಂಬಾತನನ್ನು ತಲಕಾಡು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯಿಂದ 4 ಕೆಜಿ 400 ಗ್ರಾಂ ಗಾಂಜಾವನ್ನು ಜಪ್ತಿ ಮಾಡಿದ್ದು, ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಂಧ್ರದ ಕಾಣಿಪಾಕಂ ದೇವಾಲಯಕ್ಕೆ ಬುಲೆಟ್‌ನಲ್ಲಿ ತೆರಳುತ್ತಿದ್ದಾಗ ಕ್ಯಾಂಟರ್ ವಾಹನ ಡಿಕ್ಕಿಯಾಗಿ ಇಬ್ಬರು ಸ್ನೇಹಿತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅರಿಕೆರೆ ಗೇಟ್ ಬಳಿ ಬೆಳ್ಳಂಬೆಳಿಗ್ಗೆ ಈ ದುರಂತ ಸಂಭವಿಸಿದೆ. ಮೃತರನ್ನು ಚಿಂತಾಮಣಿಯ ಶಶಿ (25) ಮತ್ತು ನೆಲಮಂಗಲದ ತನುಷ್ (25) ಎಂದು ಗುರುತಿಸಲಾಗಿದೆ. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಮಧ್ಯಾಹ್ನ 12:30ಕ್ಕೆ ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಕೇಂದ್ರ ಸಚಿವರನ್ನು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಿಯೋಗ ಭೇಟಿಯಾಗಲಿದೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಶಾಂತಿಯುತ ಧರಣಿ ಜೊತೆಗೆ ದೇಶಾದ್ಯಂತ ಪ್ರತಿಭಟನೆಗೆ CJP ಕರೆ ನೀಡಿದೆ.
ನೀಟ್ ಪೇಪರ್ ಲೀಕ್ ತಡೆಯಲು ಪ್ರಧಾನಿ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ಇಂದು ಕಠಿಣ ಕರಡು ಮಸೂದೆಗೆ ಅಂತಿಮ ರೂಪ ಸಿಗಲಿದೆ. ಅಪರಾಧಿಗಳಿಗೆ ತಕ್ಷಣ ಶಿಕ್ಷೆ ನೀಡಲು ಫಾಸ್ಟ್ ಟ್ರ್ಯಾಕ್ ಕೋರ್ಟ್ ರಚನೆ ಸಾಧ್ಯತೆಯಿದ್ದು, ಈ ಮುಂಗಾರು ಅಧಿವೇಶನದಲ್ಲೇ ಮಸೂದೆ ಮಂಡಿಸಿ ಪಾಸ್ ಮಾಡಲು ಕೇಂದ್ರ ನಿರ್ಧರಿಸಿದೆ.
Published On - 8:22 am, Fri, 24 July 26