
ಬೆಂಗಳೂರು, ಮೇ 08: ಕೇಂದ್ರದ ಎಸ್‌ಐಆರ್ (SIR) ಜಾರಿ ವಿಚಾರದಲ್ಲಿ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ತುರ್ತು ಸಭೆ ನಡೆಸುತ್ತಿದ್ದಾರೆ. ಅದಲ್ಲದೆ ಸಿಲಿಕಾನ್ ಸಿಟಿಯಲ್ಲಿ ಮಹಿಳಾ ಸುರಕ್ಷತೆಯ ಪ್ರಶ್ನೆ ಮತ್ತೆ ಎದ್ದಿದ್ದು, ಎನ್‌ಸಿಆರ್‌ಬಿ (NCRB) ಬಿಡುಗಡೆ ಮಾಡಿರುವ 2024ರ ವರದಿಯ ಪ್ರಕಾರ, ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಬೆಂಗಳೂರು 3ನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಪಶ್ಚಿಮ ಬಂಗಾಳದ ಹತ್ಯೆ ಪ್ರಕರಣದ ತನಿಖೆ ದಿಗಿಲು ಹುಟ್ಟಿಸಿದೆ.
ಕೇಂದ್ರ ಸರ್ಕಾರ ರಾಜ್ಯದಲ್ಲಿ ಎಸ್‌ಐಆರ್ ಜಾರಿಗೊಳಿಸಲು ಮುಂದಾಗಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ತುರ್ತು ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ಸಚಿವರು ಭಾಗವಹಿಸಿದ್ದಾರೆ. ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶದ ಮೇಲೆ ಎಸ್‌ಐಆರ್ ಬೀರಿದ ಪ್ರಭಾವವನ್ನು ಗಮನಿಸಿರುವ ಸಿಎಂ, ರಾಜ್ಯದಲ್ಲಿ ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲಿದ್ದಾರೆ. ಡಿಎಸ್ಎಸ್, ಎದ್ದೇಳು ಕರ್ನಾಟಕ ಹಾಗೂ ವಿವಿಧ ಅಲ್ಪಸಂಖ್ಯಾತ ಮತ್ತು ರೈತ ಸಂಘಟನೆಗಳ ನಾಯಕರು ಎಸ್‌ಐಆರ್‌ನಿಂದ ಆಗುವ ಆಕ್ಷೇಪಾರ್ಹ ನಡೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಸರ್ಕಾರ ಈ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಲು ನಿರ್ಧರಿಸಿದೆ.
ಬೆಂಗಳೂರು ಪೊಲೀಸರು ಮಹಿಳೆಯರ ರಕ್ಷಣೆಗಾಗಿ ಎಷ್ಟೇ ಕ್ರಮ ಕೈಗೊಂಡರೂ ಅಪರಾಧ ಪ್ರಕರಣಗಳು ಇಳಿಮುಖವಾಗುತ್ತಿಲ್ಲ. ಎನ್‌ಸಿಆರ್‌ಬಿ (NCRB) ಬಿಡುಗಡೆ ಮಾಡಿರುವ 2024ರ ವರದಿಯ ಪ್ರಕಾರ, ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಬೆಂಗಳೂರು ದೇಶದ 19 ಮೆಟ್ರೋಪಾಲಿಟನ್ ನಗರಗಳ ಪೈಕಿ 3ನೇ ಸ್ಥಾನದಲ್ಲಿದೆ. ದೆಹಲಿ ಮತ್ತು ಮುಂಬೈ ಮೊದಲ ಎರಡು ಸ್ಥಾನಗಳಲ್ಲಿವೆ. ನಗರದಲ್ಲಿ ಕಳೆದ ವರ್ಷ 169 ಅತ್ಯಾಚಾರ ಪ್ರಕರಣಗಳಿದ್ದರೆ, ಈ ವರ್ಷ 168 ಪ್ರಕರಣಗಳು ದಾಖಲಾಗಿವೆ. ವಿಶೇಷವಾಗಿ ಮಹಿಳೆಯರ ಮಾನಭಂಗಕ್ಕೆ ಯತ್ನಿಸಿದ ಕ್ರಿಮಿನಲ್ ದೌರ್ಜನ್ಯ ಪ್ರಕರಣಗಳಲ್ಲಿ ಬೆಂಗಳೂರು ರಾಷ್ಟ್ರಮಟ್ಟದಲ್ಲಿ 3ನೇ ಸ್ಥಾನ ಪಡೆದಿದ್ದು, ಐಟಿ ಹಬ್‌ನಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ.
ಇದನ್ನೂ ಓದಿ ಮಹಿಳೆಯರ ವಿರುದ್ಧದ ಅಪರಾಧ: ದೇಶದ ಮೆಟ್ರೋ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 3ನೇ ಸ್ಥಾನ
ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಕಾರ್ಯದರ್ಶಿ ಚಂದ್ರನಾಥ್ ರಥ್ ಹತ್ಯೆ ಪ್ರಕರಣ ಈಗ ದಿಗಿಲು ಹುಟ್ಟಿಸುವ ತಿರುವು ಪಡೆದಿದೆ. ತನಿಖೆಯ ಪ್ರಕಾರ, ಈ ಹತ್ಯೆಗಾಗಿ ಬಿಹಾರದಿಂದ ಶಾರ್ಪ್ ಶೂಟರ್‌ಗಳನ್ನು ಕರೆಸಿ ಬರೋಬ್ಬರಿ 40 ಲಕ್ಷ ರೂ.ಗಳ ಸುಪಾರಿ ನೀಡಲಾಗಿತ್ತು. ಮಳೆಯಿಂದಾಗಿ ಕಾರಿನ ವೇಗ ಕಡಿಮೆಯಾದ ಸಮಯವನ್ನು ಹೊಂಚು ಹಾಕಿದ್ದ ಹಂತಕರು, ಅತ್ಯಂತ ಸಮೀಪದಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಕಳೆದ ಐದು ದಿನಗಳಿಂದ ಹಂತಕರು ಚಂದ್ರನಾಥ್ ಚಲನವಲನದ ಮೇಲೆ ಕಣ್ಣಿಟ್ಟಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಬಂಗಾಳದ ರಾಜಕೀಯ ವಲಯದಲ್ಲಿ ಈ ಘಟನೆ ಭಾರೀ ಸಂಚಲನ ಮೂಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:43 pm, Fri, 8 May 26