ಮಹಿಳೆಯರ ವಿರುದ್ಧದ ಅಪರಾಧ: ದೇಶದ ಮೆಟ್ರೋ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 3ನೇ ಸ್ಥಾನ
2024ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ (ಎನ್‌ಸಿಆರ್‌ಬಿ) ವರದಿಯ ಪ್ರಕಾರ, ಮಹಿಳೆಯರ ವಿರುದ್ಧದ ಅಪರಾಧದಲ್ಲಿ ಬೆಂಗಳೂರು ದೇಶದಲ್ಲೇ 3ನೇ ಸ್ಥಾನದಲ್ಲಿದೆ. ಮಹಿಳೆಯರ ಮಾನಭಂಗಕ್ಕೆ ಯತ್ನಿಸಿದ ಪ್ರಕರಣಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಮಹಿಳಾ ಸುರಕ್ಷತೆಗೆ ಅನೇಕ ಕ್ರಮಗಳನ್ನು ಕೈಗೊಂಡ ನಂತರವೂ ಈ ರೀತಿಯ ಅಂಕಿಅಂಶ ಕಂಡುಬಂದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರು, ಮೇ 8: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮಹಿಳೆಯರ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣಿಸುತ್ತಿಲ್ಲ. ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ನಗರವು ಇಂದಿಗೂ ದೇಶದ ಮೊದಲ ಮೂರು ಸ್ಥಾನಗಳಲ್ಲೇ ಮುಂದುವರಿದಿದೆ. ಎನ್‌ಸಿಆರ್‌ಬಿ (NCRB) ಬಿಡುಗಡೆ ಮಾಡಿರುವ 2024ರ ವರದಿಯ ಪ್ರಕಾರ, ದೇಶದ 19 ಪ್ರಮುಖ ಮೆಟ್ರೋಪಾಲಿಟನ್ ನಗರಗಳ ಪೈಕಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ದೆಹಲಿ ಮತ್ತು ಮುಂಬೈ ಮೊದಲ ಎರಡು ಸ್ಥಾನಗಳಲ್ಲಿವೆ. ನಂತರದ ಸ್ಥಾನದಲ್ಲಿ ಬೆಂಗಳೂರು ಇದೆ.
ಮುಖ್ಯಾಂಶಗಳು
- 2024ರಲ್ಲಿ ಬೆಂಗಳೂರಿನಲ್ಲಿ ದಾಖಲಾದ ಒಟ್ಟು ಮಹಿಳಾ ದೌರ್ಜನ್ಯ ಪ್ರಕರಣಗಳು 4,748.
- ಮಹಿಳೆಯರ ಮಾನಭಂಗಕ್ಕೆ ಯತ್ನಿಸಿದ ಪ್ರಕರಣಗಳಲ್ಲಿ ಬೆಂಗಳೂರಿಗೆ ದೇಶದಲ್ಲೇ ಮೊದಲ ಸ್ಥಾನ.
- ವರದಕ್ಷಿಣೆ ಸಾವು ಪ್ರಕರಣಗಳಲ್ಲಿ ಜೈಪುರದೊಂದಿಗೆ ಬೆಂಗಳೂರು ದೇಶದಲ್ಲಿ 4ನೇ ಸ್ಥಾನದಲ್ಲಿದೆ.
2023ಕ್ಕೆ ಹೋಲಿಸಿದರೆ ಮಹಿಳೆಯರ ವಿರುದ್ಧದ ಒಟ್ಟು ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಅಲ್ಪ ಇಳಿಕೆ ಕಂಡುಬಂದಿದ್ದರೂ, ಮಹಿಳೆಯರ ಮೇಲಿನ ದೌರ್ಜನ್ಯದ ತೀವ್ರತೆ ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ ಎಂಬುದು ವರದಿಯಿಂದ ತಿಳಿದುಬಂದಿದೆ.
ಅಪರಾಧ ಪ್ರಕರಣಗಳ ಅಂಕಿ-ಅಂಶ
ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಬದಲಾವಣೆಯಾಗಿಲ್ಲ. 2023ರಲ್ಲಿ 169 ಪ್ರಕರಣಗಳಿದ್ದರೆ, 2024ರಲ್ಲಿ 168 ಪ್ರಕರಣಗಳು ದಾಖಲಾಗಿವೆ. ಲೈಂಗಿಕ ಕಿರುಕುಳದ ಪ್ರಕರಣಗಳು ಕಳೆದ ವರ್ಷಕ್ಕಿಂತ 30ರಷ್ಟು ಕಡಿಮೆಯಾಗಿದ್ದು, ಒಟ್ಟು 180 ಪ್ರಕರಣಗಳು ವರದಿಯಾಗಿವೆ. ಆದರೆ, ಮಹಿಳೆಯರ ಮಾನಭಂಗಕ್ಕೆ ಯತ್ನಿಸಿದ ಕ್ರಿಮಿನಲ್ ದೌರ್ಜನ್ಯದ ಪ್ರಕರಣಗಳಲ್ಲಿ ಬೆಂಗಳೂರು ದೇಶಕ್ಕೆ 3ನೇ ಸ್ಥಾನದಲ್ಲಿದೆ (66 ಪ್ರಕರಣಗಳು).
ವರದಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಹೋರಾಟಗಾರರು
ಈ ಅಂಕಿ-ಅಂಶಗಳ ಬಗ್ಗೆ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆಯ ಹಿರಿಯ ನಾಯಕಿ ವಿಮಲಾ ಕೆ.ಎಸ್. ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮೆಟ್ರೋ ನಗರಗಳಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗಿದೆ ಎಂಬ ವರದಿಯನ್ನು ನಂಬಲು ಸಾಧ್ಯವಿಲ್ಲ. ಪ್ರತಿದಿನ ದಿನಪತ್ರಿಕೆಗಳಲ್ಲಿ ಅತ್ಯಾಚಾರ, ಕಿರುಕುಳದಂತಹ ಹತ್ತಾರು ಸುದ್ದಿಗಳು ಪ್ರಕಟವಾಗುತ್ತಲೇ ಇರುತ್ತವೆ. ಪ್ರಕರಣಗಳು ದಾಖಲಾಗದೆ ಹತ್ತಿಕ್ಕಲಾಗುತ್ತಿರಬಹುದು ಅಥವಾ ವರದಿ ಮಾಡುವ ವಿಧಾನದಲ್ಲಿ ದೋಷವಿರಬಹುದು. ಅಪರಾಧ ಸಾಬೀತಾಗುವ (Conviction rate) ಪ್ರಮಾಣ ಕಡಿಮೆಯಿರುವುದರಿಂದ ಜನರು ನ್ಯಾಯದ ಮೇಲಿನ ಭರವಸೆ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ದೇಶದ ಮೆಟ್ರೋ ನಗರಗಳ ಒಟ್ಟಾರೆ ಚಿತ್ರಣ
ವರದಿಯ ಪ್ರಕಾರ, 19 ಮೆಟ್ರೋ ನಗರಗಳಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಪೈಕಿ ಪತಿಯಿಂದ ಅಥವಾ ಆತನ ಸಂಬಂಧಿಕರಿಂದ ನಡೆಯುವ ಕ್ರೌರ್ಯದ ಪ್ರಕರಣಗಳು ಅತಿ ಹೆಚ್ಚು (ಶೇ 28.4) ಇವೆ. ಉಳಿದಂತೆ ಮಹಿಳೆಯರ ಅಪಹರಣ (ಶೇ 20.1) ಹಾಗೂ ಮಾನಭಂಗದ ಉದ್ದೇಶದಿಂದ ನಡೆಯುವ ಹಲ್ಲೆ ಪ್ರಕರಣಗಳು (ಶೇ 9.2) ನಂತರದ ಸ್ಥಾನದಲ್ಲಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




