
ಬೆಂಗಳೂರು, ಸೆಪ್ಟೆಂಬರ್ 16: 2020ರ ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿತನಾಗಿ, ಜೈಲಿನಲ್ಲಿರುವ ಉಮರ್ ಖಾಲಿದ್ ಕುರಿತು ನಿರ್ಮಿಸಿರುವ ಡಾಕ್ಯುಮೆಂಟರಿ ಪ್ರದರ್ಶನದ ವಿಚಾರವಾಗಿ ಕರ್ನಾಟಕದಲ್ಲಿ ನಡೆಯುತ್ತಿರುವ ವಿವಾದಕ್ಕೆ ರಾಜಕೀಯ ತಿರುವು ಸಿಕ್ಕಿದೆ. ಉಮರ್ ಖಾಲಿದ್ ದೇಶಪ್ರೇಮಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಬಣ್ಣಿಸಿದ್ದು, ಡಾಕ್ಯುಮೆಂಟರಿ ಪ್ರದರ್ಶನ ವಿರೋಧಿಸುತ್ತಿರುವ ಆರ್‌ಎಸ್‌ಎಸ್ ಸಂಯೋಜಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU)ಯಲ್ಲಿ ಉಮರ್ ಖಾಲಿದ್ ಕುರಿತ ‘ಪ್ರಿಸನರ್ ನಂ 626710 ಈಸ್ ಪ್ರಸೆಂಟ್ (Prisoner No 626710 is Present)’ ಡಾಕ್ಯುಮೆಂಟರಿ ಪ್ರದರ್ಶನಕ್ಕೆ ಎಬಿವಿಪಿ ವಿರೋಧ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಪ್ರದರ್ಶನವನ್ನು ಶಾಶ್ವತವಾಗಿ ರದ್ದುಪಡಿಸಬೇಕು ಹಾಗೂ ವಿಶ್ವವಿದ್ಯಾಲಯದ ಆಡಳಿತದ ವಿರುದ್ಧ ತನಿಖೆ ನಡೆಸಬೇಕು ಎಂದು ಸಂಘಟನೆ ಒತ್ತಾಯಿಸಿತ್ತು. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿ.ಕೆ. ಹರಿಪ್ರಸಾದ್, ‘ಉಮರ್ ಖಾಲಿದ್ ದೇಶಪ್ರೇಮಿ. ಅವರ ಬಗ್ಗೆ ಮಾತನಾಡುವ ಹಕ್ಕು ಎಬಿವಿಪಿಗೆ ಇಲ್ಲ. ಅವರು ನಾಥೂರಾಮ್ ಗೋಡ್ಸೆಯನ್ನು ಆರಾಧಿಸುತ್ತಾರೆ. ಗೋಡ್ಸೆ ದೇಶವಿರೋಧಿ ಹಾಗೂ ದೇಶದ ಮೊದಲ ಭಯೋತ್ಪಾದಕ. ಹೀಗಾಗಿ ಎಬಿವಿಪಿಗೆ ನೈತಿಕ ಹಕ್ಕಿಲ್ಲ’ ಎಂದು ಹೇಳಿದ್ದಾರೆ.
#WATCH | Bengaluru, Karnataka: On ABVP seeking the Centre’s intervention for the permanent cancellation of a proposed screening of a documentary on Umar Khalid at the National Law School of India University (NLSIU), Congress leader BK Hariprasad says, “Umar Khalid is a… pic.twitter.com/6eYNmlorvQ
— ANI (@ANI) September 15, 2026
ಲಲಿತ್ ವಚಾನಿ ನಿರ್ದೇಶನದ ‘Prisoner No 626710 is Present’ ಡಾಕ್ಯುಮೆಂಟರಿಯನ್ನು ಸೆಪ್ಟೆಂಬರ್ 14ರಂದು ಸಂಜೆ 7 ಗಂಟೆಗೆ ಪ್ರದರ್ಶಿಸಲು ಉದ್ದೇಶಿಸಲಾಗಿತ್ತು. ಆದರೆ, ಎನ್‌ಎಲ್‌ಎಸ್‌ಐಯುನ ಕಾನೂನು ಮತ್ತು ಸಮಾಜ ಸಮಿತಿ ಭದ್ರತೆ ಹಾಗೂ ಆಡಳಿತಾತ್ಮಕ ಕಾರಣಗಳನ್ನು ಉಲ್ಲೇಖಿಸಿ ಕಾರ್ಯಕ್ರಮವನ್ನು ಮುಂದೂಡಿದೆ. ರಾಜಕೀಯ ಕೈದಿಗಳ ದಿನದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಾಕ್ಯುಮೆಂಟರಿ ಪ್ರದರ್ಶನದ ಜತೆಗೆ ವಿಚಾರಣೆಗೆ ಮುನ್ನದ ಬಂಧನ, ಜಾಮೀನು, ಭಿನ್ನಮತ, ರಾಜಕೀಯ ಬಂಧನ ಹಾಗೂ ಅಪರಾಧ ಕಾನೂನು ಮತ್ತು ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳ ನಡುವಿನ ಸಂಬಂಧದ ಕುರಿತು ಚರ್ಚೆ ನಡೆಸಲು ಸಮಿತಿ ಯೋಜಿಸಿತ್ತು.
ಡಾಕ್ಯುಮೆಂಟರಿ ಪ್ರದರ್ಶನವನ್ನು ಶಾಶ್ವತವಾಗಿ ರದ್ದುಪಡಿಸುವಂತೆ ಎಬಿವಿಪಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರಿಗೆ ಮನವಿ ಸಲ್ಲಿಸಿದೆ ಎಂದು ವರದಿಯಾಗಿದೆ. ಎನ್‌ಎಲ್‌ಎಸ್‌ಐಯು ಆಡಳಿತ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸುವಂತೆಯೂ ಸಂಘಟನೆ ಒತ್ತಾಯಿಸಿದೆ.
ಇದನ್ನೂ ಓದಿ: ದೇಶದ್ರೋಹ ಆರೋಪಿ ಉಮರ್ ಖಾಲೀದ್ಗೆ ನ್ಯೂಯಾರ್ಕ್ ಮೇಯರ್ ಕಾಳಜಿ ಪತ್ರ; 8 ಅಮೆರಿಕನ್ ಜನಪ್ರತಿನಿಧಿಗಳಿಂದಲೂ ಬೆಂಬಲ
ಶೈಕ್ಷಣಿಕ ಸ್ವಾತಂತ್ರ್ಯ ಮತ್ತು ಮುಕ್ತ ಚರ್ಚೆ ಸಂವಿಧಾನಾತ್ಮಕ ಹಕ್ಕುಗಳಾದರೂ, ರಾಷ್ಟ್ರೀಯ ಭದ್ರತೆ, ಸಾರ್ವಭೌಮತ್ವ ಹಾಗೂ ಶಿಕ್ಷಣ ಸಂಸ್ಥೆಯ ಘನತೆಗೆ ಧಕ್ಕೆಯಾಗುವ ರೀತಿಯಲ್ಲಿ ಅವುಗಳನ್ನು ಬಳಸಬಾರದು ಎಂದು ಎಬಿವಿಪಿ ಹೇಳಿದೆ. ಮತ್ತೊಂದೆಡೆ, ಡಾಕ್ಯುಮೆಂಟರಿ ಪ್ರದರ್ಶನವನ್ನು ಭದ್ರತೆ ಮತ್ತು ಆಡಳಿತಾತ್ಮಕ ಕಾರಣಗಳಿಂದ ಮಾತ್ರ ಮುಂದೂಡಲಾಗಿದೆ ಎಂದು ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ.
2020ರ ಈಶಾನ್ಯ ದೆಹಲಿ ಗಲಭೆಗಳಿಗೆ ಸಂಬಂಧಿಸಿದ ದೊಡ್ಡ ಸಂಚು ಪ್ರಕರಣದಲ್ಲಿ ಸೆಪ್ಟೆಂಬರ್ 2020ರಲ್ಲಿ ಉಮರ್ ಖಾಲಿದ್ ಬಂಧನವಾಗಿತ್ತು. ಖಾಲಿದ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಸೇರಿದಂತೆ ವಿವಿಧ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ