
ಬೆಂಗಳೂರು, ಆಗಸ್ಟ್ 28: ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪ ಮಾಡಿದ್ದು, ಅವರು ಈ ಹಿಂದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾಗಿದ್ದ ವೇಳೆ ಅವ್ಯವಹಾರ ನಡೆದಿದೆ. ತರಾತುರಿಯಲ್ಲಿ ಎಇಇಗಳ ನೇಮಕಾತಿ ಮಾಡಿಕೊಂಡಿದ್ದು, ಈ ಅಕ್ರಮ ಸಂಬಂಧ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ತರಾತುರಿಯಲ್ಲಿ 24 ಎಇಇ ನೇಮಕ ಮಾಡಿದ್ದು ಯಾಕೆ ಎಂದ ಹೆಚ್ಡಿಕೆ, ಈ ಸಂಬಂಧ ಒಎಮ್ಆರ್ ಶೀಟ್ ಮತ್ತು ದಾಖಲೆಯನ್ನೂ ಬಿಡುಗಡೆ ಮಾಡಿದ್ದಾರೆ. ತರಾತುರಿಯಲ್ಲಿ ಕೊಡಬಾರದೆಂದು ಕೋರ್ಟ್ ಆದೇಶವಿದೆ. ಹೀಗಿದ್ದರೂ ಏಕೆ ಅಪಾಯಿಂಟ್ಮೆಂಟ್ ಕೊಟ್ರಿ? ಎಂದು ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಎಲ್ಲದರಲ್ಲೂ ನಾನು ಪಾರದರ್ಶಕ, ಪರಿಶುದ್ಧವಾಗಿ ಇದ್ದೇನೆ ಅಂತ ಹೇಳುತ್ತಾರೆ. ನಾನು ಅಧಿಕಾರಕ್ಕೆ ಬಂದ್ರೆ ಎಲ್ಲವೂ ಕ್ಲೀನ್ ಮಾಡ್ತೇನೆ ಅಂದವರು ಸರ್ಕಾರದ ವಿರುದ್ಧ ಮಾತನಾಡುವವರ ಧ್ವನಿ ಅಡಗಿಸಲು ಯತ್ನಿಸುತ್ತಿದ್ದಾರೆ. ಪ್ರಿಯಾಂಕ್ ಖರ್ಗೆಯವರೇ ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಆರ್ಎಸ್ಎಸ್ ಅಕೌಂಟ್ ಬಗ್ಗೆ ದಿನಾ ಕೇಳುವ ನೀವು ನಿಮ್ಮ ನಾಲಗೆ ಸರಿ ಇಟ್ಟುಕೊಳ್ಳಿ. ಆಡುಮುಟ್ಟಿದ ಸೊಪ್ಪಿಲ್ಲ ಅನ್ನೋ ಹಾಗೆ ನೀವು ಚರ್ಚಿಸದ ವಿಚಾರವೇ ಇಲ್ಲ. ಕೆಪಿಎಸ್ಸಿ ಹಗರಣ ಸಂಬಂಧ ಎಕ್ಸಾಂ ಕಂಟ್ರೋಲರ್ ಜ್ಞಾನೇಂದ್ರ ಕುಮಾರ್ ಆರೋಗ್ಯ ಸರಿಯಿಲ್ಲ ಎಂದು ಸಚಿವರೇ ಹೇಳಿದ್ದರು. ಊರಿಗೆ ಹೋಗಿದ್ದಾರೆ ಇನ್ನೆರಡು ದಿನಗಳಲ್ಲಿ ವಾಪಸ್ ಬರುತ್ತಾರೆ ಅಂದಿದ್ದರು. ಆ ಬಳಿಕ ಅವರೇ ಜ್ಞಾನೇಂದ್ರ ಎಲ್ಲಿದ್ದಾರೋ ಗೊತ್ತಿಲ್ಲ ಅಂತಾರೆ. ಗೊತ್ತಿಲ್ಲ ಅಂದಮೇಲೆ ಗೃಹ ಇಲಾಖೆ ಯಾಕೆ ನಡೆಸುತ್ತೀರಿ ಎಂದು ಹೆಚ್ಡಿಕೆ ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ಹೆಚ್.ಡಿ. ಕುಮಾರಸ್ವಾಮಿ ಮತ್ತೆ ರಾಜ್ಯ ರಾಜಕಾರಣಕ್ಕೆ?: ಮೋದಿ-ಕೇಂದ್ರ ಸಚಿವರ ಭೇಟಿ ಬೆನ್ನಲ್ಲೇ ಹೆಚ್ಚಿದ ಚರ್ಚೆ
ಇನ್ನು ತಮ್ಮ ಮೇಲೆ ಕೇಂದ್ರ ಸಚಿವರು ಮಾಡಿರುವ ಆರೋಪಗಳಿಗೆ ಕೌಂಟರ್ ನೀಡಿರುವ ಪ್ರಿಯಾಂಕ್ ಖರ್ಗೆ, ನನ್ನ ನಾಲಿಗೆ ಬಗ್ಗೆ ಮಾತನಾಡುವವರ ಜೆಡಿಎಸ್ ನವರು ಯಾರು? ನಿಮ್ಮ ಪಕ್ಷದ ಅಸ್ತಿತ್ವ ಉಲಿಸಿಕೊಳ್ಳಲು ಪ್ರಿಯಾಂಕ ಖರ್ಗೆ ಬೇಕಾಗಿದೆಯಾ ಎಂದು ಪ್ರಶ್ನಿಸಿದ್ದಾರೆ. ನನ್ನಿಂದ ರಾಜಕೀಯ ಅಸ್ತಿತ್ವ ಉಳಿಯುತ್ತೆ ಅನದನೋದಾದ್ರೆ ಮಾತನಾಡಲಿ. ಅಧಿಕಾರಕ್ಕಾಗಿ ತತ್ತ್ವ ಸಿದ್ದಾಂತ ಬಿಟ್ಟು ಹೋಗುವವರ ಬಗ್ಗೆ ನಾನು ಏನು ಹೇಳಲಿ? ಜೆಡಿಎಸ್, ಬಿಜೆಪಿಯಿಂದ ನಾನು ಕಲಿಯಬೇಕಾಗಿರುವುದು ಏನೂ ಇಲ್ಲ ಎಂದವರು ಕಿಡಿ ಕಾರಿದ್ದಾರೆ. ಐಎಎಸ್ ಅಧಿಕಾರಿ ನಾಪತ್ತೆಯಾಗಿದ್ದ ವಿಚಾರವಾಗಿಯೂ ಉತ್ತರಿಸಿರುವ ಅವರು, ಆ ಐಎಎಸ್ ಅಧಿಕಾರಿ ಎಲ್ಲಿದ್ದಾರೆ ಎಂದು ನನಗೆ ಗೊತ್ತಿದೆ. ಅದನ್ನು ಕುಮಾರಸ್ವಾಮಿಗೆ, ಬಿಜೆಪಿಯವರಿಗೆ ಹೇಳುವ ಅಗತ್ಯವಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:43 pm, Fri, 28 August 26