
ಬೆಂಗಳೂರು, ನವೆಂಬರ್ 06: ಸ್ಲಿಮ್ ಆಗಬೇಕು, ಫಿಟ್ ಆಗಿ ಕಾಣಬೇಕು, ಕಡಿಮೆ ಸಮಯದಲ್ಲಿ ತೂಕ ಇಳಿಸಿಕೊಳ್ಳಬೇಕು ಎಂಬ ಆಸೆ ನಿಮಗಿದೆಯಾ? ಹಾಗಾದರೆ ಎಚ್ಚರ. ಏಕೆಂದರೆ ರಾಜಧಾನಿ ಬೆಂಗಳೂರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುವ ನಕಲಿ ವೈದ್ಯರ ಜಾಲ ಸಕ್ರಿಯವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಣ್ಣಬಣ್ಣದ ವಿಡಿಯೋ ಹಾಕಿ, ಸ್ಟಾರ್ ಹೋಟೆಲ್‌ಗಳಲ್ಲೇ ಇಂಜೆಕ್ಷನ್ ಚಿಕಿತ್ಸೆ ನೀಡುವ ಆಮಿಷವೊಡ್ಡುತ್ತಿದ್ದಾರೆ.
ಸ್ಲಿಮ್ ಆಗುವ ಹಾಗೂ ಫಿಟ್ ಆಗಿ ಕಾಣುವ ಕನಸು ಹಲವರದ್ದು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಖದೀಮರು ಇನ್ಸ್ಟಾಗ್ರಾಮ್ನಲ್ಲಿ ಆಕರ್ಷಕ ವಿಡಿಯೋಗಳ ಮೂಲಕ ಜನರನ್ನ ಸೆಳೆಯುವ ಹೊಸ ದಂಧೆ ಶುರುವಾಗಿದೆ. ಮೆಡಿಸಿನ್ ಮತ್ತು ಇಂಜೆಕ್ಷನ್ ಮೂಲಕ ಕಡಿಮೆ ಸಮಯದಲ್ಲಿ ತೂಕ ಇಳಿಸುತ್ತೇವೆ ಅಥವಾ ದಪ್ಪ ಮಾಡುತ್ತೇವೆ ಅಂತ ಪ್ರಚಾರ ಮಾಡಲಾಗುತ್ತಿದೆ. ವೈದ್ಯಕೀಯ ಅರ್ಹತೆ ಮತ್ತು ಅಗತ್ಯ ಪ್ರಮಾಣಪತ್ರಗಳಿಲ್ಲದ ವ್ಯಕ್ತಿಗಳೇ ವೈದ್ಯರ ಸೋಗಿನಲ್ಲಿ ಚಿಕಿತ್ಸೆ ನೀಡುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.
ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳ ಮೂಲಕ ಜನರನ್ನ ನಂಬಿಸುತ್ತಾರೆ. ಬಳಿಕ ಸ್ಟಾರ್ ಹೋಟೆಲ್‌ಗಳಲ್ಲಿ ನಿರ್ದಿಷ್ಟ ದಿನಾಂಕ, ಸಮಯ ನಿಗದಿಪಡಿಸಿ ಇಂಜೆಕ್ಷನ್ ಚಿಕಿತ್ಸೆ ನೀಡುವ ಆಮಿಷವೊಡ್ಡುತ್ತಾರೆ. ಇದಕ್ಕಾಗಿ ಜನರಿಂದ ದೊಡ್ಡ ಮೊತ್ತದ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ಇನ್ನು ಬೆಂಗಳೂರಿನ ಸ್ಟಾರ್ ಹೋಟೆಲ್‌ನಲ್ಲಿ ಇಂತಹದ್ದೊಂದು ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಈ ಜಾಲದ ಹಿಂದೆ ಇನ್ನೂ ಹಲವರು ಇರುವ ಶಂಕೆಯೂ ವ್ಯಕ್ತವಾಗಿದೆ. ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ. ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಹಾಗೂ ಬೆಂಗಳೂರು ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿದೆ. ಕೇವಲ ಒಂದೇ ಪ್ರಕರಣವಲ್ಲ, ಇಂತಹ ರೀತಿಯಲ್ಲಿ ಬೇರೆ ಬೇರೆ ಕಡೆ ಚಿಕಿತ್ಸೆ ನೀಡುತ್ತಿರುವವರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.
ನಕಲಿ ವೈದ್ಯರ ಹಾವಳಿಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಜನರು ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತುಗಳನ್ನು ನಂಬಿ ಇಂತಹ ಚಿಕಿತ್ಸೆಗೆ ಒಳಗಾಗಬಾರದು. ವೈದ್ಯರ ಅರ್ಹತೆ, ನೋಂದಣಿ ಮತ್ತು ಚಿಕಿತ್ಸೆಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ ಮುಂದುವರಿಯಬೇಕು ಎಂಬುದು ಇಲಾಖೆ ಮನವಿ ಮಾಡಿದೆ. ಆರೋಗ್ಯ ಇಲಾಖೆ ಸಾಮಾಜಿಕ ಜಾಲತಣದಲ್ಲಿ ಸುಳು ಮಾಹಿತಿ ಹಾಕುವ ಕಳ್ಳರ ಹಿಂದೆ ಬಿದ್ದಿದೆ.
ಇದನ್ನೂ ಓದಿ: ಪೀಣ್ಯ ಫ್ಲೈ ಓವರ್ ಮೇಲೆ ಚೆಲ್ಲಾಪಿಲ್ಲಿಯಾದ ಲಗ್ನ ಪತ್ರಿಕೆಗಳು, ಸಾರ್ವಜನಿಕರ ಸಹಾಯಕ್ಕೆ ಎಲ್ಲೆಡೆ ಶಾಘ್ಲನೆ
ಒಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ಪ್ರತಿಯೊಂದು ಜಾಹೀರಾತು ಸತ್ಯವಲ್ಲ. ವೈದ್ಯರ ಅರ್ಹತೆ ಪರಿಶೀಲಿಸದೆ ಇಂಜೆಕ್ಷನ್ ಅಥವಾ ಔಷಧಿ ಚಿಕಿತ್ಸೆ ಪಡೆಯಬಾರದು. ನಕಲಿ ವೈದ್ಯರ ಜಾಲದ ಪತ್ತೆಗೆ ಆರೋಗ್ಯ ಇಲಾಖೆ ತನಿಖೆ ಚುರುಕುಗೊಳಿಸಿದ್ದು, ಇನ್ನೆಷ್ಟು ಮಂದಿ ಈ ದಂಧೆಯ ಹಿಂದೆ ಇದ್ದಾರೆ ಅನ್ನೋದು ತನಿಖೆಯಿಂದಷ್ಟೇ ಹೊರಬರಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.