
ಬೆಂಗಳೂರು, ಅಕ್ಟೋಬರ್ 19: ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಎಕ್ಸ್ ಪೋಸ್ಟ್ ಮೂಲಕ ಜೆಡಿಎಸ್ ತೀವ್ರ ವಾಗ್ದಾಳಿ ನಡೆಸಿದೆ. ದಿನಬೆಳಗಾದರೆ ಸಂವಿಧಾನ, ಸಾಮಾಜಿಕ ನ್ಯಾಯ ಎಂದು ಉಪದೇಶ ನೀಡುವ ಪ್ರಿಯಾಂಕ್ ಅವರೇ, ಸಾಮಾನ್ಯ ಕ್ಷೇತ್ರವಾದ ತಕ್ಷಣ ಗುರುಮಠಕಲ್ನಲ್ಲಿ ಸ್ಪರ್ಧಿಸುವ ಧೈರ್ಯ ಮಾಡದೆ ಚಿತ್ತಾಪುರಕ್ಕೆ ಬಂದು, ಮತ್ತೊಬ್ಬ ಸಾಮಾನ್ಯ ದಲಿತನ ರಾಜಕೀಯ ಅವಕಾಶವನ್ನೇ ನುಂಗಿಹಾಕಿದ ನಿಮ್ಮದು ಯಾವ ಬಗೆಯ ಸಾಮಾಜಿಕ ನ್ಯಾಯ? ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಮೀಸಲಾತಿ ವ್ಯವಸ್ಥೆ ಇರುವುದು ಕೇವಲ ನಿಮ್ಮ ‘ಖರ್ಗೆ ಪ್ರೈವೇಟ್ ಲಿಮಿಟೆಡ್’ ಉದ್ಧಾರಕ್ಕಾ? ದಲಿತರ ಉದ್ಧಾರ ಎಂದರೆ ಕೇವಲ ನಿಮ್ಮ ಪರಿವಾರದ ಉದ್ಧಾರವೇ ? ಎಂದು ಪ್ರಶ್ನಿಸಿದೆ.
RDPR ಇಲಾಖೆಯ AEE ನೇಮಕಾತಿ ಕೆಪಿಎಸ್‌ಸಿ ಹಗರಣದಲ್ಲಿ ಬಡ ದಲಿತ ಹಾಗೂ ಹಿಂದುಳಿದ ವರ್ಗದ ಪ್ರತಿಭಾವಂತ ಯುವಕರ ಬೆನ್ನಿಗೆ ಚೂರಿ ಹಾಕಿದ್ದೀರಿ. ಹಗಲು-ರಾತ್ರಿ ಓದಿದವರ ಭವಿಷ್ಯವನ್ನು OMR ಶೀಟ್ ತಿದ್ದಿ ಮಾರಿಕೊಳ್ಳುವುದು ನಿಮ್ಮ ಆಡಳಿತ ವೈಖರಿಯೇ? ಕಳಂಕಿತರಿಗೆ ಷರತ್ತಿನ ನೇಮಕಾತಿ ಕೊಟ್ಟು ಈಗ “ನನಗೆ ಗೊತ್ತಿಲ್ಲ, ನಾನೇನ್ ಮಾಡಿಲ್ಲ” ಎಂದು ಸತ್ಯಹರಿಶ್ಚಂದ್ರನಂತೆ ನಟಿಸುತ್ತಿದ್ದೀರಲ್ಲ, ನಿಮ್ಮ ಆತ್ಮಸಾಕ್ಷಿಯನ್ನೊಮ್ಮೆ ತಟ್ಟಿ ನೋಡಿಕೊಳ್ಳಿ ಜೆಡಿಎಸ್ ಕಿಡಿ ಕಾರಿದೆ.
ಇದನ್ನೂ ಓದಿ: 2028ಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಶತಃಸಿದ್ಧ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
ಅಕ್ರಮ ನೇಮಕಾತಿ ಬಗ್ಗೆ ಕೇಳಿದ 10 ಪ್ರಶ್ನೆಗಳಿಗೆ ಉತ್ತರಿಸಲು ಧೈರ್ಯವಿಲ್ಲದೆ ಪಲಾಯನ ಮಾಡಿದ್ದೀರಿ. 50 ವರ್ಷಗಳಿಂದಲೂ ಶೋಷಿತರಿಗೆ ರಾಜಕೀಯವಾಗಿ ಸಿಗಬೇಕಾದ ಪ್ರಾತಿನಿಧ್ಯ ಕಸಿದಿರುವ ನೀವು, ಅಧಿಕಾರದ ಸ್ವಾರ್ಥಕ್ಕಾಗಿ ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ, ನಿಮ್ಮ ಬೇಳೆ ಬೇಯಿಸಿಕೊಳ್ಳುವ ಕುತಂತ್ರದ ನಾಟಕ ಬಿಡಿ. ಕುಟುಂಬಕ್ಕೊಂದು ಮೀಸಲು ಸೀಟು, ಭ್ರಷ್ಟಾಚಾರಕ್ಕೆ ಕ್ಲೀನ್ ಚಿಟ್, ಇದೇನಾ ನಿಮ್ಮ ಬೂಟಾಟಿಕೆಯ ಸಮಾಜವಾದ? ನಿಮ್ಮ ಪ್ರಹಸನಗಳನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ. ಮಣ್ಣಿನ ಮಕ್ಕಳು ಸಿನಿಮಾ ನಿರ್ಮಾಣ ಮಾಡಬಹುದಂತೆ, ಜಾಗ್ವಾರ್ ಆಗಬಹುದಂತೆ. ಆದರೆ ಓರ್ವ ದಲಿತ ಬಲಿತ ಆಗಬಾರದಂತೆ. ಏನ್ರೀ ಕುಮಾರಸ್ವಾಮಿ ಅವರ ಲೆಕ್ಕ ಎಂದು ನಿನ್ನೆಯಷ್ಟೇ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದರು ಎನ್ನುವುದಿಲ್ಲಿ ಗಮನಾರ್ಹ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:42 am, Mon, 19 October 26