ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳಕ್ಕೆ ವ್ಯಾಪಕ ಆಕ್ರೋಶ: ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ
ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆಗೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ಮೆಟ್ರೋ ದರ ಅತಿ ಹೆಚ್ಚು ಎಂಬುದು ಅವರ ವಾದ. ಟ್ವಿಟರ್ನಲ್ಲಿ #RevokeMetroFareHike ಅಭಿಯಾನದ ಮೂಲಕ ಸಾರ್ವಜನಿಕರಿಂದ ಪ್ರತಿಭಟನೆ ನಡೆಯುತ್ತಿದೆ. ಇದಕ್ಕೆ ಸಂಸದರೂ ದನಿಗೂಡಿಸಿದ್ದಾರೆ.

ಬೆಂಗಳೂರು, ಫೆಬ್ರವರಿ 10: ಬೆಂಗಳೂರು ನಮ್ಮ ಮೆಟ್ರೋ ರೈಲು ಟಿಕೆಟ್ ದರ ಏರಿಕೆ ವಿರುದ್ಧ ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ದೇಶದ ಇತರ ನಗರಗಳ ಮೆಟ್ರೋ ಪ್ರಯಾಣ ದರಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲೇ ಅತಿಹೆಚ್ಚು ದರ ವಸೂಲಿ ಮಾಡಲಾಗುತ್ತಿದೆ ಎಂದು ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ವಿರುದ್ಧ ಸಾರ್ವಜನಿಕರು ಸಾಮಾಜಿಕ ಮಾಧ್ಯಮಗಳಲ್ಲಿ #RevokeMetroFareHike ಅಭಿಯಾನ ಆರಂಭಿಸಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಸಹ, ಮೆಟ್ರೋ ದರ ಏರಿಕೆ ನ್ಯಾಯಸಮ್ಮತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಕರ್ನಾಟಕ ಸರ್ಕಾರವು ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸುವ ಮತ್ತು ಖಾಸಗಿ ವಾಹನಗಳನ್ನು ನಿರುತ್ಸಾಹಗೊಳಿಸುವ ಬದಲು, ಮೆಟ್ರೋ ದರ ಹೆಚ್ಚಳದ ಮೂಲಕ ಅದಕ್ಕೆ ತದ್ವಿರುದ್ಧವಾದದ್ದನ್ನು ಮಾಡುತ್ತಿದೆ. ಬೆಂಗಳೂರು ಮೆಟ್ರೋ ಪ್ರಯಾನ ದರ ದೇಶದ ಇತರ ಮೆಟ್ರೋಗಳಿಗೆ ಸಮನಾಗಿರಬೇಕು. ದೆಹಲಿಯಲ್ಲಿ ಪ್ರಯಾಣಿಕರು 12 ಕಿ.ಮೀ ಪ್ರಯಾಣಕ್ಕೆ 30 ರೂ. ಪಾವತಿಸಿದರೆ, ಬೆಂಗಳೂರಿನಲ್ಲಿ 60 ರೂ. ಪಾವತಿಸಬೇಕಾಗುತ್ತದೆ. ಇದು ದುಪ್ಪಟ್ಟು ಮೊತ್ತವಾಗಿದೆ. ಗರಿಷ್ಠ ದರವನ್ನು 60 ರಿಂದ 90 ರೂ.ಗಳಿಗೆ ಹೆಚ್ಚಿಸುವ ಮೂಲಕ ಸರಿಸುಮಾರು ಶೇ 50 ಹೆಚ್ಚಳವು ನ್ಯಾಯಸಮ್ಮತವಲ್ಲ. ” ದೇಶದ ಬೇರೆ ಯಾವುದೇ ಮೆಟ್ರೋ ಇಷ್ಟು ಹೆಚ್ಚಿನ ಶುಲ್ಕ ವಿಧಿಸುವುದಿಲ್ಲ. 60 ರೂ.ಗಿಂತ ಹೆಚ್ಚಿನ ದರ ಏರಿಕೆ ತುಂಬಾ ಹೆಚ್ಚಾಗಿದೆ’ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.
ತೇಜಸ್ವಿ ಸೂರ್ಯ ಟ್ವೀಟ್
Karnataka Govt, instead of incentivising public transport and discouraging private vehicles, is doing the exact opposite with the Metro Fare Hike.
Bengaluru metro fares should be at par with other metros in the country.
While commuters in Delhi pay ₹30 for a 12 km ride,… pic.twitter.com/WDvguMuSVS
— Tejasvi Surya (@Tejasvi_Surya) February 9, 2025
ಮೆಟ್ರೋ ದರ ಏರಿಕೆ ಜನರಿಗೆ “ಅನ್ಯಾಯದ ಹೊರೆ” ಎಂದು ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್ ಟೀಕಿಸಿದ್ದಾರೆ. ಅವರು ಮೆಟ್ರೋ ದರ ನಿಗದಿಯಲ್ಲಿ ಪಾರದರ್ಶಕತೆಯನ್ನು ಒತ್ತಾಯಿಸಿದ್ದರ ಜತೆಗೆದರ ನಿಗದಿ ಸಮಿತಿ ವರದಿಯನ್ನು ಪ್ರಕಟಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರಯಾಣಿಕರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಬಿಎಂಆರ್‌ಸಿಎಲ್ ಮಾಸಿಕ, ತ್ರೈಮಾಸಿಕ ಮತ್ತು ವಾರ್ಷಿಕ ಪಾಸ್‌ಗಳನ್ನು ಪರಿಚಯಿಸಬೇಕು. ಇದು ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಓನ್ ಟು ಡಬಲ್ ಏರಿಕೆ ಮಾಡಲಾಗಿದ್ಯಾ? ಭುಗಿಲೆದ್ದ ಆಕ್ರೋಶ
ದೇಶದ ಪ್ರಮುಖ ಮೆಟ್ರೋ ಜಾಲಗಳಲ್ಲಿ, ಕೋಲ್ಕತ್ತಾ ಮೆಟ್ರೋ ಅತ್ಯಂತ ಅಗ್ಗದ ಪ್ರಯಾಣವನ್ನು ನೀಡುತ್ತದೆ. ಅಲ್ಲಿ ಕನಿಷ್ಠ 5 ರೂ. ಮತ್ತು ಗರಿಷ್ಠ 50 ರೂ. ದರದಲ್ಲಿ ಪ್ರಯಾಣ ದರ ನಿಗದಿಯಾಗಿದೆ. 25 ಕಿ.ಮೀ. ಮೀರಿ 30 ಕಿ.ಮೀ.ವರೆಗಿನ ಪ್ರಯಾಣಕ್ಕೆ ಗರಿಷ್ಠ 25 ರೂ. ಇದೆ. ಚೆನ್ನೈ ಮೆಟ್ರೋ 25 ಕಿ.ಮೀ.ಗೆ 50 ರೂ., ದೆಹಲಿ ಮೆಟ್ರೋ 60 ರೂ., ಬೆಂಗಳೂರು ಮೆಟ್ರೋದ ಹೊಸ ದರ ಈಗ 90 ರೂ. ಆಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:13 am, Mon, 10 February 25




