ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಸಾವು; ವೈದ್ಯರ ವಿರುದ್ಧ ಕುಟುಂಬಸ್ಥರ ಧರಣಿ
ವೈದ್ಯರು ಗುರುವಾರ ಸಂಜೆಯವರೆಗು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು. ನಂತರ ನರದ ಸಮಸ್ಯೆ ಇದೆ ಬೇರೆ ಆಸ್ಪತ್ರೆಗೆ ಕರೆದುಕೊಂಡುಹೋಗಿ ಎಂದು ಕುಟುಂಬಸ್ಥರಿಗೆ ಹೇಳಿದ್ದಾರೆ. ಆಂಬುಲೆನ್ಸ್ನಲ್ಲಿ ಬೇರೆ ಆಸ್ಪತ್ರೆಗೆ ತೆರಳುತ್ತಿದ್ದರು. ಮುಂದೇನಾಯ್ತು ಈ ಸ್ಟೋರಿ ಓದಿ

ಬೆಂಗಳೂರು ನ.17: ಹೊಟ್ಟೆ ನೋವಿನಿಂದ (Stomach Pain) ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೃತಪಟ್ಟಿದ್ದಾಳೆ. ನಾಜ್ನಿ (34) ಮೃತ ಮಹಿಳೆ. ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ನಿಧನಳಾಗಿದ್ದಾಳೆ ಎಂದು ಸಂಬಂಧಿಕರು ಆರೋಪಿಸುತ್ತಿದ್ದು, ಆಸ್ಪತ್ರೆಯ (Hospital) ಮುಂದೆ ಮಹಿಳೆಯ ಶವವಿಟ್ಟು ಪ್ರತಿಭಟನೆ ಮಾಡಿದ್ದಾರೆ. ನಾಜ್ನಿ ಮೂರು ದಿನಗಳ ಹಿಂದೆ ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನವಾದರೂ ವೈದರು ಚಿಕಿತ್ಸೆ ನೀಡಿಲ್ಲ. ಮೂರನೇ ದಿನ ಹೊಟ್ಟೆಯಲ್ಲಿ ಗಡ್ಡೆ ಆಗಿದೆ, ಕೂಡಲೇ ಆಪರೇಷನ್ ಮಾಡಬೇಕೆಂದು ವೈದ್ಯರು ಹೇಳಿದ್ದಾರೆ.
ವೈದ್ಯರು ಗುರುವಾರ (ನ.17) ಸಂಜೆಯವರೆಗು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು. ನಂತರ ನರದ ಸಮಸ್ಯೆ ಇದೆ ಬೇರೆ ಆಸ್ಪತ್ರೆಗೆ ಕರೆದುಕೊಂಡುಹೋಗಿ ಎಂದು ಕುಟುಂಬಸ್ಥರಿಗೆ ಹೇಳಿದ್ದಾರೆ. ಆಂಬುಲೆನ್ಸ್ನಲ್ಲಿ ಬೇರೆ ಆಸ್ಪತ್ರೆಗೆ ತೆರಳುವ ವೇಳೆ ಮಹಿಳೆ ಮೃತಪಟ್ಟಿದ್ದಾಳೆ.
ಮಹಿಳೆ ಮೊದಲೇ ಮೃತಪಟ್ಟಿದ್ದಾಳೆ, ವೈದ್ಯರು ಸುಮ್ಮನೆ ವೆಂಟಿಲೇಟರ್ ಹಾಕಿ ತಮ್ಮ ಆಸ್ಪತ್ರೆಯಿಂದ ಕಳುಹಿಸಿದ್ದಾರೆಂದು ಸಂಬಂಧಿಕರು ಆರೋಪ ಮಾಡಿದ್ದಾರೆ. ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡದಿರುವುದೇ ಮಹಿಳೆ ಸಾವಿಗೆ ಕಾರಣವೆಂದು ಆರೋಪಿಸಿ, ವೈದ್ಯರ ವಿರುದ್ಧ ಮೃತ ಮಹಿಳೆಯ ಸಂಬಂಧಿಕರು ಪ್ರತಿಭಟನೆ ಮಾಡಿದರು. ಆಸ್ಪತ್ರೆ ಮುಂಭಾಗ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಇದನ್ನೂ ಓದಿ: ಮಂಗಳೂರು: ಚಿಕ್ಕಪ್ಪನ ಕಾರಿನ ಚಕ್ರದಡಿಗೆ ಸಿಲುಕಿ ಮಗು ಮೃತ್ಯು
ಕೌಟುಂಬಿಕ ಕಲಹದಿಂದ ಮನನೊಂದು ವ್ಯಕ್ತಿ ನೇಣಿಗೆ ಶರಣು
ಮೈಸೂರು: ಕೌಟುಂಬಿಕ ಕಲಹದಿಂದ ಮನನೊಂದು ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಹದಿನಾರು ಮೋಳೆ ಗ್ರಾಮದಲ್ಲಿ ನಡೆದಿದೆ. ಮಾದೇಶ್ (34) ಮೃತ ವ್ಯಕ್ತಿ. ಗಂಡ-ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಈ ಬಗ್ಗೆ ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ಮಾಡಲಾಗಿತ್ತು.
ಆದರೆ ಮಾದೇಶ್ ಕೌಟುಂಬಿಕ ಕಲಹದಿಂದ ಮನನೊಂದಿದ್ದನು. ಹೀಗಾಗಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಸಿ ಸಾಂಬಾರ್ ಬಿದ್ದು ಚಾಮುಂಡಿ ಬೆಟ್ಟದ ದಾಸೋಹ ಭವನದ ಅಡುಗೆ ಸಿಬ್ಬಂದಿಗೆ ಗಾಯ
ಬಿಸಿ ಸಾಂಬಾರ್ ಬಿದ್ದು ಅಡುಗೆ ಸಿಬ್ಬಂದಿ ಗಾಯಗೊಂಡಿರುವ ಘಟನೆ ಚಾಮುಂಡಿ ಬೆಟ್ಟದ ದಾಸೋಹ ಭವನದಲ್ಲಿ ನಡೆದಿದೆ. ಚಿನ್ನಸ್ವಾಮಿ (29) ಗಾಯಗೊಂಡ ಸಿಬ್ಬಂದಿ. ಲಿಫ್ಟ್ನಲಿ ಸಾಂಬಾರ್ ಪಾತ್ರೆ ಸಾಗಿಸುವಾಗ ಘಟನೆ ನಡೆದಿದೆ. ಗಾಯಾಳು ಚಿನ್ನಸ್ವಾಮಿಯನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಹಾವು ಕಡಿದು ಮಹಿಳೆ ಮೃತ
ಚಿಕ್ಕಮಗಳೂರು: ಹಾವು ಕಡಿದು ಮಹಿಳೆ ಮೃತಪಟ್ಟಿರುವ ಘಟನೆ ಎನ್.ಆರ್ ಪುರ ತಾಲೂಕಿನ ಅಂಡವಾನೆ ಗ್ರಾಮದಲ್ಲಿ ನಡೆದಿದೆ. ಅಂಡವಾನೆ ಗ್ರಾಮದ ಸುಜಾತಾ (50) ಮೃತ ಮಹಿಳೆ. ತೋಟದಲ್ಲಿ ಕೆಲಸ ಮಾಡುವಾಗ ಸುಜಾತಾ ಅವರಿಗೆ ಹಾವು ಕಡಿದ ಪರಿಣಾಮ ಮೃತಪಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ