ಯೋಗೇಶ್ ಗೌಡ ಕೊಲೆ ಕೇಸ್: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ
ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಶುಕ್ರವಾರ ಜನಪ್ರತಿನಿಧಿಗಳ ಕೋರ್ಟ್ಗೆ ಹಾಜರಾಗಿದ್ದಾರೆ. ನ್ಯಾಯಾಲಯದ ಸೂಚನೆ ಮೇರೆಗೆ ಅವರನ್ನು ಸಿಬಿಐ ವಶಕ್ಕೆ ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಅವರ ಜಾಮೀನನ್ನು ರದ್ದುಪಡಿಸಿತ್ತು.

ಬೆಂಗಳೂರು, ಜೂನ್ 13: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದ (yogesh gowda) ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ಇಂದು (ಶುಕ್ರವಾರ) ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಅವರ ಜಾಮೀನನ್ನು ರದ್ದುಪಡಿಸಿ, ಒಂದು ವಾರದೊಳಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿತ್ತು. ಈ ಹಿನ್ನೆಲೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಹಾಜರಾಗಿದ್ದು, ಕೋರ್ಟ್ ಅವರನ್ನು ಸಿಬಿಐ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.
2016 ರ ಜೂ. 15 ರಂದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯತಿ ಸದಸ್ಯನಾಗಿದ್ದ ಯೋಗೀಶಗೌಡನನ್ನು ಅವರದ್ದೇ ಮಾಲೀಕತ್ವದ ಜಿಮ್ನಲ್ಲಿ ಭೀಕರವಾಗಿ ಹತ್ಯೆಗೈಯ್ಯಲಾಗಿತ್ತು. ಇದರಲ್ಲಿ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಕೈವಾಡ ಇದೆ ಎಂದು ಆರೋಪಿಸಿ, ಅವರನ್ನು 2020 ನವೆಂಬರ್ 5 ರಂದು ಸಿಬಿಐ ಬಂಧಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸುಪ್ರೀಂಕೋರ್ಟ್ ವಿನಯ್ ಕುಲಕರ್ಣಿ ಜಾಮೀನು ರದ್ದುಗೊಳಿಸಿ ಆದೇಶಿಸಿತ್ತು.
ನಾನು ಮಾಡಿದ ಸೇವೆ ಜನರ ಮನದಲ್ಲಿದೆ: ವಿನಯ್ ಕುಲಕರ್ಣಿ ಭಾವುಕ ನುಡಿ
ಇನ್ನು ಇತ್ತೀಚೆಗೆ ಧಾರವಾಡದ ಸಮೀಪದ ಬೆಳಗಾವಿ ಜಿಲ್ಲೆಯ ಕಿತ್ತೂರಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಮಾಡಿದ್ದ ವಿನಯ್ ಕುಲಕರ್ಣಿ, ಇಷ್ಟು ವರ್ಷಗಳ ಕಾಲ ಕ್ಷೇತ್ರಕ್ಕಾಗಿ ನಾನು ಮಾಡಿದ ಕೆಲಸ ಹಾಗೂ ನೀಡಿದ ಸೇವೆ ಜನರ ಮನದಲ್ಲಿದೆ. ಇದರಿಂದಲೇ ಕ್ಷೇತ್ರದ ಹೊರಗಿದ್ದರೂ ನಾನು ಶಾಸಕನಾಗಿದ್ದೇನೆ. ಕಳೆದ ಐದು ವರ್ಷಗಳಿಂದ ಕ್ಷೇತ್ರದ ಹೊರಗಿದ್ದರೂ ಜನರು ನನ್ನನ್ನು ಭೇಟಿಯಾಗಲು ಹಾತೊರೆಯುತ್ತಾರೆ. ಪ್ರಕರಣದಲ್ಲಿ ಜಾಮೀನು ರದ್ದಾಗಿರುವ ಹಿನ್ನೆಲೆಯಲ್ಲಿ ನನಗೆ ಕಷ್ಟ ಬಂದಿರಬಹುದು. ಆದರೆ, ಕ್ಷೇತ್ರದ ಅಭಿವೃದ್ಧಿ ಕುಂಠಿತ ಆಗದಂತೆ ಎಚ್ಚರ ವಹಿಸಿದ್ದೇನೆ ಎಂದು ಭಾವುಕರಾಗಿ ನುಡಿದ್ದರು.
ಇದನ್ನೂ ಓದಿ: ಯೋಗೀಶ್ ಗೌಡರ್ ಕೊಲೆ ಕೇಸ್: ವಿನಯ್ ಕುಲಕರ್ಣಿ ಜಾಮೀನು ರದ್ದು, ಮತ್ತೆ ಜೈಲಿಗೆ ಹೋಗ್ತಾರಾ ಕೈ ಶಾಸಕ?
ನ್ಯಾಯಾಲಯಕ್ಕೆ ಹಾಜರಾಗುವ ಹಿನ್ನೆಲೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಕುಂಠಿತ ಆಗಬಾರದು ಹಾಗೂ ಕ್ಷೇತ್ರ ಅನಾಥ ಆಗಬಾರೆಂದು ಈಗಾಗಲೇ ವಿವಿಧ ಇಲಾಖೆ ಅಧಿಕಾರಿಗಳ ಸಭೆ ಮಾಡಿದ್ದು, ಜನರ ಕೆಲಸ-ಕಾರ್ಯಗಳನ್ನು ವಿಳಂಬ ಮಾಡದೇ ಮಾಡಿಕೊಡಲು ಸೂಚನೆ ನೀಡಿದ್ದೇನೆ. ಜೊತೆಗೆ ನನ್ನ ಅನುಪಸ್ಥಿತಿಯಲ್ಲಿ ಪತ್ನಿ, ಪುತ್ರಿ ಹಾಗೂ ಪಕ್ಷದ ಮುಖಂಡರು ಕ್ಷೇತ್ರದ ಕಷ್ಟ-ಸುಖಗಳನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದರು.
ಜಾಮೀನು ರದ್ದಾಗಿರುವ ಹಿನ್ನೆಲೆ ನ್ಯಾಯಾಲಯದ ಆದೇಶವನ್ನು ಪಾಲಿಸುತ್ತಿದ್ದು, ನಾನಿನ್ನೂ ಅಸಹಾಯಕ. ಮುಂದಿನ ಕಾನೂನು ಹೋರಾಟವನ್ನು ನಮ್ಮ ನ್ಯಾಯವಾದಿಗಳು ನೋಡಿಕೊಳ್ಳಲಿದ್ದಾರೆ ಎಂದಿದ್ದರು. ಈ ವೇಳೆ ಪಕ್ಕದಲ್ಲಿಯೇ ಇದ್ದ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಕೂಡ ಭಾವುಕರಾಗಿದ್ದರು.
ಇದನ್ನೂ ಓದಿ: ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಯೋಗೀಶ್ ಗೌಡ ಕೊಲೆ ಕೇಸ್ನ ಈವರೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ
ತಮ್ಮ ವಿರುದ್ಧ ನಿರಂತರವಾಗಿ ವ್ಯವಸ್ಥಿತ ಷಡ್ಯಂತ್ರವನ್ನು ನಡೆಸಲಾಗುತ್ತಿದೆ. ಅದಕ್ಕಾಗಿಯೇ ಕೆಲವರು ನಿಂತುಬಿಟ್ಟಿದ್ದಾರೆ. ಆದರೆ ತಮಗೆ ಇದು ಯಾವುದೂ ಹೊಸದಲ್ಲ ಎಂಬ ರೀತಿ ಮಾತನಾಡಿದ ಅವರು, ಎಲ್ಲದಕ್ಕೂ ದೇವರು ಇದ್ದಾನೆ ಅಂತಾ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







