ಕೇಂದ್ರ ಸಚಿವ ಭಗವಂತ ಖೂಬಾಗೆ ಕರೆ ಮಾಡಿ ಗೊಬ್ಬರ ಕೇಳಿದ್ದ ಬೀದರ್ ಶಿಕ್ಷಕ ಸಸ್ಪೆಂಡ್
ಗೊಬ್ಬರ ಕೇಳಿದ್ದಕ್ಕೆ ಖೂಬಾ ಹಾಗೂ ಶಿಕ್ಷಕನ ಮಧ್ಯೆ ವಾಗ್ವಾದ ನಡೆದಿದ್ದು, ಸದ್ಯ ಕೇಂದ್ರ ಸಚಿವರ ಒತ್ತಡದ ಮೇರೆಗೆ ಶಿಕ್ಷಕ ಕುಶಾಲ್ ಸಸ್ಪೆಂಡ್ ಮಾಡಿ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದೆ.
ಬೀದರ್: ರಸಗೊಬ್ಬರ ಪೂರೈಕೆಗೆ ವಿಚಾರವಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ (Fertilizer) ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಶಿಕ್ಷಕ ಕುಶಾಲ್ ಪಾಟೀಲ್ ಎನ್ನುವವರೊಂದಿಗೆ ಅಗೌರವಯುತವಾಗಿ ಮಾತನಾಡಿದ್ದಾರೆ ಎನ್ನುವ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗೊಬ್ಬರ ಕೇಳಿದ್ದಕ್ಕೆ ಖೂಬಾ ಹಾಗೂ ಶಿಕ್ಷಕನ ಮಧ್ಯೆ ವಾಗ್ವಾದ ನಡೆದಿದ್ದು, ಸದ್ಯ ಕೇಂದ್ರ ಸಚಿವರ ಒತ್ತಡದ ಮೇರೆಗೆ ಶಿಕ್ಷಕ ಕುಶಾಲ್ ಸಸ್ಪೆಂಡ್ ಮಾಡಿ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದೆ. ನಮ್ಮ ಊರಲ್ಲಿ ಗೊಬ್ಬರು ಸಿಗುತ್ತಿಲ್ಲ ಸರ್ ಎಂದು ಜಿಲ್ಲೆಯ ಔರಾದ್ ತಾಲೂಕಿನ ಹೆಡಪುರ ಗ್ರಾಮದ ಶಿಕ್ಷಕ ಕುಶಾಲ್ ಪಾಟೀಲ್ ಕೇಂದ್ರ ಸಚಿವ ಭಗವಂತ ಖೂಬಾಗೆ ದೂರವಾಣಿ ಕರೆ ಮಾಡಿ, ಪ್ರಶ್ನೆ ಕೇಳಿದಕ್ಕೆ ನಾನೇನು ಮಾಡಲಿ ಎಂದು ಉಡಾಫೆ ಉತ್ತರ ನೀಡಿದ್ದಾರೆ ಎನ್ನುವ ಆಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಿಲ್ಲೆಯಲ್ಲಿ ಸರ್ಕಾರಿ ಇಲಾಖೆ ಮತ್ತು ಖಾಸಗಿ ಇಲಾಖೆಗಳಲ್ಲಿ ಎಲ್ಲಿಯೂ ಗೊಬ್ಬರ ಸಿಗದೆ ರೈತರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: TCS: ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಸಿಗಲಿದೆ ಚಿಪ್ ಆಧಾರಿತ ಇ- ಪಾಸ್ಪೋರ್ಟ್
ಈಗಾಗಲೇ ಮುಂಗಾರು ಮಳೆ ಆರಂಭವಾಗಿದ್ದು, ರೈತರು ಬಿತ್ತನೆ ಕಾರ್ಯವನ್ನು ಸಹ ಶುರು ಮಾಡಿದ್ದಾರೆ. ಆದರೆ ಗೊಬ್ಬರ ಸಿಗದೆ ರೈತರು ಪರದಾಡುವಂತ್ತಾಗಿದೆ. ಈ ಹಿನ್ನೆಲೆಯಲ್ಲಿ ಕುಶಾಲ್ ಪಾಟೀಲ್ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ನೇರವಾಗಿ ಕರೆಮಾಡಿ ಮಾತನಾಡಿದ್ದಾರೆ. ಸಾವಿರಾರು ಜನ ನೌಕರರು ಇದಾರೆ ಅವರು ನೋಡಿಕೊಳ್ಳುತ್ತಾರೆ ಹೋಗು ಅಲ್ಲಿಗೆ. ನನ್ನ ಕೆಲಸ ರಾಜ್ಯಕ್ಕೆ ಕಳಿಸೋದು, ಕಳಿಸಿದ್ದೇನೆ ಅಷ್ಟೇ. ಅಲ್ಲಿನ ಶಾಸಕ ಇದಾನಲ್ಲ, ಸಾವಿರಾರು ಮಂದಿ ನೌಕರರು ಇದಾರೆ. ಅವನ್ನ ಹೋಗಿ ಕೇಳು, ನನಗೆ ಬೇರೆ ಕೆಲಸ ಇಲ್ವಾ ಎಂದು ಖೂಬಾ ಮೊಂಡುತನದ ಉತ್ತರ ನೀಡಿದ್ದಾರೆ. ಮುಂದಿನ ಬಾರಿ ಹೇಗೆ ಆರಿಸಿ ಬರುತ್ತಿರಿ ನೋಡಿ ಎಂದು ಕರೆ ಮಾಡಿದ್ದ ಶಿಕ್ಷಕ ಹೇಳಿದ್ದು, ಚುನಾವಣೆಯಲ್ಲಿ ಹೇಗೆ ಗೆದ್ದು ಬರಬೇಕೆಂದು ನನಗೆ ಗೊತ್ತಿದೆ. ಅಲ್ಲಿನ ಶಾಸಕರು ಇದಾರೆ, ಅಧಿಕಾರಿಗಳು ಇದಾರೆ ಅವರಿಗೆ ಹೋಗಿ ಕೇಳು. ಭಾತರ ಸರ್ಕಾರದ ಮಂತ್ರಿ ಇದ್ದೇನೆ ರಾಜ್ಯಗಳನ್ನ ಮಾತ್ರ ನೋಡಿಕೊಳ್ಳುತ್ತೇನೆ. ಏನ್ ಮಾಡಿಕೊಳ್ಳುತ್ತಿಯಾ ಮಾಡಿಕೊ ಹೋಗು ಎಂದು ಕ್ಷೇತ್ರದ ಜನರಿಗೆ ಉಡಾಫೆ ಉತ್ತರ ನೀಡಿದ್ದಾರೆ.
ಭಗವಂತ ಖೂಬಾ ಸ್ಪಷ್ಟನೆ
ಈ ಕುರಿತಾಗಿ ಖೂಬಾ ಸ್ಪಷ್ಟನೆ ನೀಡಿದ್ದು, ಜೂ.10ರಂದು ತಮ್ಮೊಂದಿಗೆ ದೂರವಾಣಿಯಲ್ಲಿ ಮಾತನಾಡಿದವರು ರೈತರಲ್ಲ, ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದಾರೆ. ಆ ವ್ಯಕ್ತಿ ತನ್ನನ್ನು 3-4 ಬಾರಿ ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಏನಾದರೂ ಮಹತ್ವದ ಸಮಸ್ಯೆ ಇರಬಹುದೆಂದು ಭಾವಿಸಿ ಕರೆ ಮಾಡಿದ್ದೆ. ಆತ ಗೊಬ್ಬರದ ಬಗ್ಗೆ ಕೇಳುವ ನೆಪದಲ್ಲಿ ವ್ಯಕ್ತಿ ಅವಹೇಳನ ಮಾಡುವಂತಹ ಪದಗಳನ್ನು ಬಳಸಿದ್ದಾನೆಯೇ ಹೊರತು ನಾನಲ್ಲ ಎಂದು ಸಚಿವರು ಹೇಳಿದರು. ಆಡಿಯೋವನ್ನು ಎಡಿಟ್ ಮಾಡಲಾಗಿದೆ ಮತ್ತು ತನಗೆ ಮತ್ತು ತನ್ನ ಪಕ್ಷಕ್ಕೆ ಮಾನಹಾನಿ ಮಾಡಲು ಆಯ್ದ ಭಾಗವನ್ನು ವೈರಲ್ ಮಾಡಲಾಗಿದೆ ಎಂದು ಖೂಬಾ ಹೇಳಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.