ಬೀದರ್, ನ.11: ಜಿಲ್ಲೆಗೆ ತರೇಹವಾರಿ ಹಣತೆಗಳು ಬಂದಿದ್ದು, ಅವುಗಳನ್ನು ಮುಗಿಬಿದ್ದು ಜನ ಖರೀದಿಸುತ್ತಿದ್ದಾರೆ. ಆದರೆ, ಕುಂಬಾರ ಮಾಡಿದ ಮಣ್ಣಿನ ಹಣತೆಯನ್ನು ಕೇಳುವವರಿಲ್ಲದಂತಾಗಿದೆ. ಹೌದು, ಬೀದರ್(Bidar)ನಲ್ಲಿ ಡಜನ್ಗೆ 10 ರಿಂದ 20 ರೂಪಾಯಂತೆ ಮಾರಾಟ ಮಾಡಿದರೂ ಕೊಳ್ಳುತ್ತಿಲ್ಲ. ಕಾರ್ತಿಕ ಮಾಸ ಆರಂಭದ ನಂತರ ಪ್ರತಿ ಮನೆಗಳಲ್ಲೂ ಬೆಳಗುವ ದೀಪಗಳ ಸಾಲು ದೀಪವಳಿ ವೇಳೆಗೆ ವಿಶೇಷ ಮೆರುಗು ಪಡೆಯುತ್ತವೆ. ಹತ್ತಿಯ ಬತ್ತಿ ಹೊಸೆದು ಮಣ್ಣಿನ ಹಣತೆಯಲ್ಲಿ ಎಳ್ಳಿನ ಎಣ್ಣೆ ಸುರಿದು ಮನೆಯ ಮುಂದೆ ಸಾಲಾಗಿ ಜೋಡಿಸಿ ಹಣತೆ ಉರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಇಂತಹ ಹಣತೆಗಳೂ ಇಂದು ಆಧುನಿಕ ಸ್ಪರ್ಶ ಪಡೆದಿದ್ದು, ಮಣ್ಣಿನ ದೀಪಗಳ ಸ್ಥಾನದಲ್ಲಿ ಪಿಂಗಾಣಿ ಹಣತೆಗಳು ಲಗ್ಗೆಯಿಟ್ಟಿವೆ.
ಮಣ್ಣಿನಿಂದ ತಯಾರಿಸುವ ಸಾಂಪ್ರದಾಯಿಕ ಹಣತೆಗಳಿಗಿಂತ ಹೆಚ್ಚು ಆಕರ್ಷಕವಾಗಿರುವ ಆ ಹಣತೆಗಳು ಎಲ್ಲೆಡೆ ಕಾಣುತ್ತಿವೆ. ಬಹುವಿನ್ಯಾಸ ಹೊಂದಿರುವ ಇಂತಹ ಹಣತೆಗಳು ಗ್ರಾಹಕರನ್ನು ಸೆಳೆಯುತ್ತಿವೆ. ಚೀನಿ ಮಣ್ಣಿನ ಹೊಳಪಿನ ಎದುರು ಮಣ್ಣಿನ ಹಣತೆಗಳು ಅಕ್ಷರಶಃ ಕಳೆಗುಂದಿವೆ. ಆಧುನಿಕತೆಗೆ ಒಗ್ಗಿಕೊಂಡ ಜನರು ಚೀನಿ ಹಣತೆ ಖರೀದಿಸಿ ಮನೆಯ ದೀಪದ ಅಲಂಕಾರ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಚೀನಾದ ಪಿಂಗಾಣಿ ಜೋಡಿ ದೀಪದ ಹಣತೆ ಒಂದಕ್ಕೆ 10 ರಿಂದ 15 ರೂನಂತೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಆದರೆ, ನಾವು ಮಾಡಿದ ದೀಪವನ್ನ ಯಾರು ಕೊಳ್ಳುತ್ತಿಲ್ಲ. ನಗರದ ಹೊರವಲಯಗಳಿಂದ ದುಬಾರಿ ಬೆಲೆ ತೆತ್ತು ಜೇಡಿ ಮಣ್ಣು ತಂದು, ಹದ ಮಾಡಿ, ಕುಶಲ ಕರ್ಮಿಗಳ ನೆರವಿನಿಂದ ವಿವಿಧ ವಿನ್ಯಾಸದ ದೀಪ ತಯಾರಿಸುತ್ತೇವೆ. 15 ರಿಂದ 20 ರೂಗೆ ಒಂದು ಡಜನ್ ಬೆಲೆ ನಿಗದಿ ಮಾಡಿದರೂ, ಗ್ರಾಹಕರು ಖರೀದಿಸುತ್ತಿಲ್ಲ. ಇದರಿಂದ ಸಾಕಷ್ಟು ನಷ್ಟ ಅನುಭವಿಸುತ್ತಿದ್ದೇವೆಂದು ಕುಂಬಾರರು ಹೇಳುತ್ತಿದ್ದಾರೆ.
ಇದನ್ನೂ ಓದಿ:Deepavali 2023: ದೀಪಾವಳಿಯಂದು ಗೋಮಯ ಹಣತೆ ಬೆಳಗಿಸಿ, ಹಬ್ಬ ಆಚರಿಸಿ
ದಶಕದ ಹಿಂದೆ ಲಕ್ಷ ಲಕ್ಷ ಹಣತೆಗಳನ್ನು ತಮ್ಮ ಮನೆ ಮುಂದೆ ಮಾರಾಟ ಮಾಡುತ್ತಿದ್ದ ಕುಂಬಾರ ಕುಟುಂಬಗಳು, ಐದಾರು ವರ್ಷಗಳಿಂದ ಸಾವಿರ ಲೆಕ್ಕದಲ್ಲಿ ಹಣತೆಗಳನ್ನು ಮಾರಾಟ ಮಾಡಿ, ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಹಣತೆ ತಯಾರಿಸಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವರು, ಈಗ ಬೇರೆ ವೃತ್ತಿಯತ್ತ ಮುಖ ಮಾಡಿದ್ದಾರೆ. ದಶಕದ ಹಿಂದಿನವರೆಗೂ ಹಣತೆ ಮಾಡುವ ಕುಂಬಾರರ ಕುಟುಂಬಗಳಿಗೆ ದೀಪಾವಳಿ ಬಂತೆಂದರೆ ಅದೊಂದು ಅಕ್ಷರಶಃ ಅವರ ಬದುಕಿನ ಬೆಳಕಿನ ಹಬ್ಬವೇ ಆಗಿತ್ತು. ದೀಪಾವಳಿಗೆ ಎರಡು ತಿಂಗಳು ಮುಂಚೆಯೇ ಲಾರಿಗಟ್ಟಲೆ ಜೇಡಿ ಮಣ್ಣನ್ನು ತಂದು ಹದ ಮಾಡಿ ಮನೆಯೊಳಗೆ, ಅಂಗಳ, ಖಾಲಿ ಜಾಗ ಇದ್ದಲ್ಲೆಲ್ಲ ಲಕ್ಷ ಲಕ್ಷ ಸಂಖ್ಯೆಯಲ್ಲಿ ಹಣತೆಗಳನ್ನು ಮಾಡಿ ಆರಲು ಇಡುತ್ತಿದ್ದರು. ಬಳಿಕ ಅದನ್ನು ಚೆನ್ನಾಗಿ ಸುಟ್ಟು ಮಾರುಕಟ್ಟೆಗೆ ತರುತ್ತಿದ್ದರು. ಗ್ರಾಹಕರಂತೂ ಮುಗಿಬಿದ್ದು ಮಣ್ಣಿನ ಹಣತೆಗಳನ್ನು ಒಬ್ಬೊಬ್ಬರು 30-40 ಹಣತೆಗಳನ್ನು ಒಯ್ಯುತ್ತಿದ್ದರು.
ಈಗ ಅದೆಲ್ಲವೂ ಇತಿಹಾಸವಾಗಿದೆ. ಬೆರಳೆಣಿಕೆ ಸಂಖ್ಯೆಯಲ್ಲಿ ಮಣ್ಣಿನ ಹಣತೆ ಒಯ್ಯುವರ ಸಂಖ್ಯೆಯೂ ವಿರಳವಾಗುತ್ತಿದೆ. ಹೀಗಾಗಿ ಕುಂಬಾರರ ಬಾಳಿಗೆ ದೀಪಾವಳಿ ಬೆಳಕು ನೀಡುವ ಹಬ್ಬವಾಗಿ ಉಳಿದಿಲ್ಲ ಎನ್ನುತ್ತಾರೆ ಇಲ್ಲಿನ ಜನರು. ಚೀನಿ ಮಣ್ಣಿನ ಹಣತೆಗಳು, ಹೊಳಪಿನ ಮೈಮಾಟವುಳ್ಳ, ವೈವಿಧ್ಯಮಯ ಕಲಾ ಚಿತ್ತಾರ ಹೊಂದಿರುವ ಪಿಂಗಾಣಿ ಹಣತೆಗಳಿಗೆ ಬಹುತೇಕ ಜನರು ಮಾರುಹೋಗಿದ್ದಾರೆ. ಕುಂಬಾರರ ಕೈಯಲ್ಲರಳಿದ ಮಣ್ಣಿನ ಸಾಂಪ್ರದಾಯಿಕ ಹಣತೆಗಳು ವಿವಿಧ ಗಾತ್ರಗಳಲ್ಲಿ ಸಿದ್ಧವಾಗಿ ಮಾರುಕಟ್ಟೆಗೆ ಬಂದಿವೆಯಾದರೂ ಗ್ರಾಹಕರ ಅವುಗಳನ್ನ ಕೊಂಡುಕೊಳ್ಳಲು ಹಿಂದೆಟು ಹಾಕುತ್ತಿದ್ದಾರೆ. ಚೀನಿ ಅಂಲಂಕಾರಿಕ ಹಣತೆಗಳು ಗ್ರಾಹಕರನ್ನು ಸೇಳೆಯುತ್ತಿವೆ, ಈ ದೀಪಗಳನ್ನು ಮನೆಯಲ್ಲಿ ಮನೆಯ ಗೋಡೆಯಲ್ಲಿ ದೀಪ ಹಚ್ಚಿ ಇಟ್ಟರೆ ಅವುಗಳು ಫಳ ಫಳ ಹೊಳೆಯುತ್ತಿವೆ. ಹೀಗಾಗಿ ಗ್ರಾಹಕರು ಕುಂಬಾರರು ಮಾಡಿದ ಮಣ್ಣಿನ ಹಣತೆಗಿಂತಲೂ ಚೀನಿ ಹಣತೆ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಏನೇ ಇರಲಿ ನೂರಾರು ವರ್ಷಗಳಿಂದ ಕುಂಬಾರಿಕೆಯಲ್ಲಿಯೇ ಜೀವನ ಸಾಗಿಸುತ್ತಿರುವ ಕುಂಬಾರರಿಗೆ, ಅವರು ತಯ್ಯಾರಿಸುವ ವಸ್ತುಗಳನ್ನು ಖರೀದಿಸಿ ಅವರಿಗೆ ಪ್ರೋತ್ಸಾಹ ನೀಡಿ ಎನ್ನುವುದೇ ನಮ್ಮ ಆಶಯವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ