AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳೆ ವಿಡಿಯೋ ಎಳೆದು ಹಾಕಿದ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಡಿದೆದ್ದ ದಿವಂಗತ ಅನಂತ್ ಕುಮಾರ್‌ ಪುತ್ರಿ

ಕಪ್ಪ- ನಿಮಗ್ಯಾಕೆ ಕೊಡಬೇಕು ಕಪ್ಪ. ಹೀಗಂತ ಬ್ರಿಟಿಷರ ವಿರುದ್ದ ಸ್ವಾಭಿಮಾನದಿಂದ ತೊಡೆ ತಟ್ಟಿದ್ದು ಕಿತ್ತೂರು ಚೆನ್ನಮ್ಮ. ಆದರೆ ಇದೀಗ ಎಂಥ ರಾಜಕೀಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಕಪ್ಪು ಕಾಣಿಕೆಯ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಕಾಂಗ್ರೆಸ್ ನಾಯಕರು ಪರಸ್ಪರ ಕಿತ್ತಾಡುತ್ತಿದ್ದಾರೆ. ಇನ್ನು ಬಿಹಾರ ಚುನಾವಣೆಗೆ ಫಡಿಂಗ್ ವಿಚಾರವಾಗಿ ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ಅವರು ಹಳೆ ವಿಡಿಯೋ ಮೂಲಕ ತಿರುಗೇಟು ನೀಡಿದ್ದಾರೆ. ಇನ್ನೊಂದೆಡೆ ತಮ್ಮ ತಂದೆ ವಿಡಿಯೋ ಎಳೆದುತಂದಿರುವುದಕ್ಕೆ ಅನಂತ್ ಕುಮಾರ್ ಪುತ್ರಿ ಸಹ ಸಿಡಿದೆದಿದ್ದಾರೆ.

ಹಳೆ ವಿಡಿಯೋ ಎಳೆದು ಹಾಕಿದ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಡಿದೆದ್ದ ದಿವಂಗತ ಅನಂತ್ ಕುಮಾರ್‌ ಪುತ್ರಿ
Ananth Kumar's Daughter
ಪ್ರಸನ್ನ ಗಾಂವ್ಕರ್​
| Updated By: ರಮೇಶ್ ಬಿ. ಜವಳಗೇರಾ|

Updated on: Oct 22, 2025 | 11:31 AM

Share

ಬೆಂಗಳೂರು, (ಅಕ್ಟೋಬರ್ 22): ಕಪ್ಪ ಕಾಣಿಕೆ- ಬ್ರಿಟಿಷರು, ರಾಜ ಮಹಾರಾಜರ ಕಾಲದಲ್ಲಿ ಜನ ಕಟ್ಟಬೇಕಿದ್ದ ತೆರಿಗೆ ಅದೇ ಕಪ್ಪ ಕಾಣಿಕೆ. ಇದೀಗ ಕರ್ನಾಟಕ ರಾಜಕೀಯ ನಾಯಕರು ಇದೇ ಕಪ್ಪ ಕಾಣಿಕೆ ವಿಷಯದಲ್ಲಿ ಕೆಸರೆರಚಾಟ ಪ್ರಾರಂಭಿಸಿದ್ದಾರೆ. ಕಪ್ಪ ಕಾಣಿಕೆ ವಿಷಯ ಮುನ್ನೆಲೆಗೆ ಬರಲು ಕಾರಣ ಬಿಹಾರ ವಿಧಾನಸಭಾ ಚುನಾವಣೆ. ಹೌದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ವಾರ ತಮ್ಮ ಸಚಿವ ಸಂಪುಟದ ಸಹೋದ್ಯೋಗಿ ಮಿತ್ರರಿಗೆ ಡಿನ್ನರ ಆಯೋಜನೆ ಮಾಡಿದ್ರು. ಡಿನ್ನರ್ ಜೊತೆಗೇ ನಡೆದ ಇನ್ನರ್ ಮೀಟಿಂಗ್ ನ ಔಟ್ ಪುಟ್ ಏನು ಎಂಬುದು ಅಧಿಕೃತವಾಗಿಯೇ ಘೋಷಣೆಯಾಗಿಲ್ಲ. ತರ ತರದ ಊಟದ ಮೆನು ಜೊತೆಗೆ ರಾಜಕೀಯ ಮೆನು ಕೂಡ ಸಿದ್ದರಾಮಯ್ಯನವರ ಔತಣ ಕೂಟದಲ್ಲಿ ಮುನ್ನೆಲೆಗೆ ಬಂದಿದೆ. ಅದರಲ್ಲೊಂದು ಗಂಭೀರ ಆರೋಪ ಬಿಹಾರ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಕಾಣಿಕೆ ಕೊಡುತ್ತಿದೆ ಎಂಬುದು. ಇದನ್ನೇ ಇಟ್ಟುಕೊಂಡು ಬಿಜೆಪಿ ನಾಯಕರು ಸರ್ಕಾರದ ಮೇಲೆ ಮುಗಿಬಿದ್ದಿದ್ದಾರೆ.

ಹಳೇ ವಿಡಿಯೋ ಮೂಲಕ  ಪ್ರಿಯಾಂಕ್ ಖರ್ಗೆ ಟಾಂಗ್

ಹೀಗಾಗಿ ಕಮಲ ನಾಯಕರ ಆರೋಪಕ್ಕೆ ಸಚಿವ ಪ್ರಿಯಾಂಕ್ ಖರ್ಗೆ, ಕೌಂಟರ್ ಕೊಟ್ಟಿದ್ದು ಯಡಿಯೂರಪ್ಪ ಮತ್ತು ದಿವಂಗತ ಅನಂತ್‌ಕುಮಾರ್ ನಡುವಿನ ಸಂಭಾಷಣೆಯ ಹಳೆ ವಿಡಿಯೋ ಹರಿಬ್ಟಿಟ್ಟಿದ್ದಾರೆ. ಇದು 2017ರ ಫೆಬ್ರವರಿ 13ರಂದು ಚುನಾವಣೆಗೆ ಒಂದು ವರ್ಷವಿದ್ದಾಗ ಗುಸುಗುಸು ಮಾತನಾಡಿದ್ದು, ನೀವು ಕೊಟ್ಟಿರ್ತೀರಿ, ನಾವು ಕೊಟ್ಟಿರ್ತೀರಿ ಅದನ್ನ ಯಾರಾದ್ರೂ ಬರೆದುಕೊಳ್ತಾರಾ ಅಂದಿದ್ರು. ಈ ಹಳೆ ವಿಡಿಯೋ ಪೋಸ್ಟ್ ಮಾಡಿರೋ ಪ್ರಿಯಾಂಕ್ ಖರ್ಗೆ, ಕೇಳಿಸಿಕೊಳ್ಳಿ ಬಿಜೆಪಿಯವರೇ. ಹೈಕಮಾಂಡ್‌ಗೆ ನೀವು ಕಪ್ಪ ನೀಡಿದ್ದನ್ನ ಮರೆತುಬಿಟ್ರಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸರ್ಕಾರದಲ್ಲಿ ಭ್ರಷ್ಟಾಚಾರ ಬೇರೂರಿದೆ ಎಂಬುದಕ್ಕೆ ಇದಕ್ಕಿಂತ ಪುರಾವೆ ಬೇಕಾ? ರಾಯರೆಡ್ಡಿ ಪತ್ರ ಸಾಕ್ಷ್ಯ ಕೊಟ್ಟ ವಿಜಯೇಂದ್ರ

ಖರ್ಗೆ ವಿರುದ್ಧ ಕೆರಳಿದ ಅನಂತ್ ಕುಮಾರ್‌ ಪುತ್ರಿ

ಇದಕ್ಕೆ ದಿವಂಗತ ಅನಂತ್ ಕುಮಾರ್‌ ಪುತ್ರಿ ಐಶ್ವರ್ಯ ಕೆರಳಿದ್ದು, ಲಂಚದ ಡೈರಿ ವಿಚಾರ ಪ್ರಸ್ತಾಪಿಸಿ ಟ್ವೀಟ್‌ನಲ್ಲೇ ಟಾಂಗ್ ಕೊಟ್ಟಿದ್ದಾರೆ. ಪ್ರಿಯಾಂಕ್ ಖರ್ಗೆ ಅವರೇ ಆರ್‌ಎಸ್‌ಎಸ್ ತೆಗಳುವ ನಿಮ್ಮ ವಿಫಲ ಯತ್ನದ ನಂತರ ಈಗ ನೀವು ಕರ್ನಾಟಕಕ್ಕಾಗಿ ಕೆಲಸ ಮಾಡಿದ್ದ, ನಿಮ್ಮ ಪಕ್ಷದವರೇ ಮೆಚ್ಚುತ್ತಿದ್ದ ಅನಂತಕುಮಾರ್ ಅವರ ಹಿಂದೆ ಬೀಳಲು ನಿರ್ಧರಿಸಿದ್ದೀರಿ. ಒಂದು ವೇಳೆ ನೀವು ಮರೆತಿದ್ದರೆ ನಾನು ನಿಮಗೆ ನೆನಪಿಸುತ್ತೇನೆ. ನಿಮ್ಮ ಪಕ್ಷದ ಹೈಕಮಾಂಡ್‌ ಕುರಿತ ಅಕ್ಷರಗಳು ಮತ್ತು ಅವರಿಗೆ ನೀಡಲಾದ ಭಾರೀ ಮೊತ್ತದ ಲಂಚದ ಕುರಿತ ಕಾಂಗ್ರೆಸ್ ಮುಖ್ಯಮಂತ್ರಿಯ ಕುಖ್ಯಾತ ಡೈರಿ ಬಗ್ಗೆ ನಿಮ್ಮ ಈ ಟ್ವೀಟ್ ನಿಮ್ಮ ಪಕ್ಷದ ನಾಯಕರನ್ನೇ ಕಾಡಬಹುದು. ಸತ್ಯ ಯಾವತ್ತೂ ಬಹಿರಂಗವಾಗುವ ಗುಣ ಹೊಂದಿದೆ ಎಂಬುದು ನೆನಪಿರಲಿ ಎಂದು ಟಾಂಗ್ ಕೊಟ್ಟಿದ್ದಾರೆ.

ಒಟ್ಟಿನಲ್ಲಿ ಇತ್ತೀಚಿನ ರಾಜಕೀಯ ದಿನಗಳಲ್ಲಿ ಚುನಾವಣೆ ಅಂದ್ರೆ ಅದು ನೈತಿಕ ಚೌಕಟ್ಟುಗಳನ್ನು ಮೀರಿ ಮುಂದೆ ಹೋಗಿಬಿಟ್ಟಿದೆ. ನೋಟು ಇಲ್ಲದಿದ್ದರೆ ಓಟೂ ಇಲ್ಲ ಎಂಬಂತ ಪರಿಸ್ಥಿತಿ ನಾಗರಿಕ ಸಮಾಜದಲ್ಲಿ ನಿರ್ಮಾಣ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಕಪ್ಪ ಕಾಣಿಕೆಯ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ ಕಾಂಗ್ರೆಸ್ ನಾಯಕರು ನಡೆಸಿರುವ ವಾಕ್ ಸಮರ ಇವತ್ತಿನ ರಾಜಕೀಯ ಪರಿಸ್ಥಿತಿಯ ಕೈಗನ್ನಡಿ ಎನ್ನಬಹುದು.