ಚುನಾವಣೆ ಫಲಿತಾಂಶ ಏನು ಹೇಳಿದೆ ಎಂದು ಸಿದ್ದರಾಮಯ್ಯ ತಿಳಿಸಲಿ: ಸುನೀಲ್ ಕುಮಾರ್
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಪೈಕಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾರ್ಕಳ ಬಿಜೆಪಿ ಶಾಸಕ ಸುನೀಲ್ ಕುಮಾರ್, ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್ ಬರುತ್ತದೆ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಅವರು ಚುನಾವಣೆ ಫಲಿತಾಂಶದ ಬಗ್ಗೆ ಹೇಳಲಿ ಎಂದರು.
ಉಡುಪಿ, ಡಿ.3: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ ಜನರು ಚುನಾವಣೆಯಲ್ಲಿ ಬಿಜೆಪಿ ಕೈಹಿಡಿದಿದ್ದಾರೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ (Sunil Kumar) ಹೇಳಿದ್ದಾರೆ. ಉಡುಪಿಯಲ್ಲಿ (Udupi) ಮಾತನಾಡಿದ ಅವರು, ನಾವು ಕಳೆದುಕೊಂಡಿದ್ದ ಎರಡು ರಾಜ್ಯಗಳನ್ನು ವಾಪಸ್ ಪಡೆದಿದ್ದೇವೆ. ಮಧ್ಯಪ್ರದೇಶದಲ್ಲಿ ಐದನೇ ಬಾರಿಗೆ ಬಿಜೆಪಿ ಗೆಲುವು ಸಾಧಿಸಿದೆ ಎಂದರು.
ತೆಲಂಗಾಣದಲ್ಲಿ ನಮ್ಮ ಶಕ್ತಿ ವೃದ್ಧಿಯಾಗಿದೆ. ಕೇವಲ ಒಂದು ಸೀಟು ಇದ್ದ ತೆಲಂಗಾಣದಲ್ಲಿ ಈ ಬಾರಿ 10 ಸೀಟುಗಳು ಬಂದಿವೆ. ಶಕ್ತಿ ವೃದ್ಧಿಯಾದ ಬಗ್ಗೆ ನಮಗೆ ಸಮಾಧಾನ ಮತ್ತು ಖುಷಿಯಿದೆ. ಚುನಾವಣೆ ಫಲಿತಾಂಶ ನಮಗೆ ಲೋಕಸಭಾ ಚುನಾವಣೆಗೆ ಶಕ್ತಿ ತುಂಬಲಿದೆ. ತೆಲಂಗಾಣದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಯಾವತ್ತೂ ಹೇಳಿಲ್ಲ. ಚುನಾವಣೆ ಗೆಲ್ಲಲು ಗ್ಯಾರಂಟಿಯೇ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಶಾಶ್ವತ ಯೋಜನೆಗಳ ಬಗ್ಗೆ ಜನ ಯಾವತ್ತೂ ಮನ್ನಣೆ ನೀಡುತ್ತಾರೆ ಎಂದರು.
ತೆಲಂಗಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಥಾನ ಗೆಲ್ಲುವ ವಿಶ್ವಾಸ ಇತ್ತು. ಪಕ್ಷದ ಆಂತರಿಕ ಸರ್ವೆಗಳಲ್ಲಿ 15 ಸ್ಥಾನ ಗೆಲ್ಲುವ ವಿಶ್ವಾಸವಿತ್ತು. ಬಂದಿರುವ ಫಲಿತಾಂಶ ಬಹುತೇಕ ಹತ್ತಿರ ಇದೆ. ತೆಲಂಗಾಣದಲ್ಲಿ ಸರ್ಕಾರದ ವಿರುದ್ಧ ಅಭಿಪ್ರಾಯ ಮೂಡಿಸುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ನಾವು ಮಾಡಿದ ಜನಾಂಧೋಲನಗಳ ಲಾಭ ಕಾಂಗ್ರೆಸ್ ಪಡೆದಿದೆ ಎಂದರು.
ಇದನ್ನೂ ಓದಿ: ರಾಜಸ್ಥಾನ, ಛತ್ತೀಸಗಡ್ ಹಾಗೂ ಮಧ್ಯಪ್ರದೇಶದಲ್ಲಿ ಮುನ್ನಡೆ; ಕರ್ನಾಟಕ ಬಿಜೆಪಿ ನಾಯಕರು ಹೇಳಿದ್ದಿಷ್ಟು
ಈ ಚುನಾವಣೆ ಲೋಕಸಭಾ ಚುನಾವಣೆಗೆ ಸ್ಫೂರ್ತಿ ಕೊಟ್ಟಿದೆ, ಕಾರ್ಯಕರ್ತರಿಗೆ ಹುಮ್ಮಸ್ಸು ನೀಡಿದೆ. ಕಾಂಗ್ರೆಸ್ ನೇತೃತ್ವವೇ ಇಲ್ಲದ ಪಕ್ಷ. ಬಿಜೆಪಿಯಲ್ಲಿ ನೇತೃತ್ವ, ದೂರಗಾಮಿ ಆಲೋಚನೆಗಳಿವೆ. ಜಗತ್ತು ಒಪ್ಪಿಕೊಳ್ಳುವ ನಾಯಕತ್ವ ಬಿಜೆಪಿಯಲ್ಲಿದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವ ಗುರಿಯಿದೆ. ಈಗ ಚುನಾವಣೆ ನಡೆದರೂ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ರಾಜಸ್ಥಾನ ಮಧ್ಯ ಪ್ರದೇಶ ಎಲ್ಲಾ ಕಡೆ ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ಉತ್ಸಾಹದಲ್ಲಿದ್ದರು. ಚುನಾವಣೆ ಫಲಿತಾಂಶ ಏನು ಹೇಳಿದೆ ಅನ್ನೋದನ್ನು ಸಿದ್ದರಾಮಯ್ಯ ತಿಳಿಸಲಿ ಎಂದರು.
ಸರ್ಕಾರ ಅಸ್ತಿತ್ವಕ್ಕೆ ಬಂದು ಎಂಟು ತಿಂಗಳಲ್ಲಿ ಇಷ್ಟೊಂದು ವಿರೋಧಿ ಜನಾಭಿಪ್ರಾಯ ಮೂಡಿರುವುದು ಯಾವತ್ತು ಕಂಡಿಲ್ಲ. ಎಂಟು ತಿಂಗಳಲ್ಲಿ ರಾಜ್ಯ ಸರ್ಕಾರ ಜನಮನ್ನಣೆ ಕಳೆದುಕೊಂಡಿದೆ. ಅದು ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗುತ್ತದೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ