ಗೊರಗುಂಟೆಪಾಳ್ಯ ಬಳಿ ಚಲಿಸುತ್ತಿದ್ದ ಬಿಎಂಟಿಸಿ ಬಸ್​ನಲ್ಲಿ ಚಾಲಕ ಸಾವು

ಗೊರಗುಂಟೆಪಾಳ್ಯ ಬಳಿ ಚಲಿಸುತ್ತಿದ್ದ ಬಿಎಂಟಿಸಿ ಬಸ್​ನಲ್ಲಿ ಚಾಲಕ ಸಾವು

ಬೆಂಗಳೂರು: ಕಿಡ್ನಿ ವೈಫಲ್ಯದಿಂದ ಕಾರ್ಯನಿರತ ಬಿಎಂಟಿಸಿ ಬಸ್ ಚಾಲಕ ಮೃತಪಟ್ಟಿರುವ ಘಟನೆ ಬೆಂಗಳೂರಿನ ಗೊರಗುಂಟೆಪಾಳ್ಯದ ಬಳಿ ನಡೆದಿದೆ. 50 ವರ್ಷ ವಯಸ್ಸಿನ ಕುಮಾರ್ ಮೃತ ಚಾಲಕ. ಇವರು ಜಾಲಹಳ್ಳಿ ನಿವಾಸಿ. ಚಾಲಕ ಕುಮಾರ್ ಕಳೆದ 18 ವರ್ಷಗಳಿಂದ ಬಿಎಂಟಿಸಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪೀಣ್ಯ 22ನೇ ಬಿಎಂಟಿಸಿ ಡಿಪೋದಲ್ಲಿ ಚಾಲಕರಾಗಿದ್ದರು.

ಕಳೆದ ಎರಡು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಕೂಡ ಮಾಡಿಸಿಕೊಳ್ಳುತ್ತಿದ್ದರು. ಇಂದು ಮೆಜೆಸ್ಟಿಕ್​ನಿಂದ ಪೀಣ್ಯಕ್ಕೆ ಬರುತ್ತಿದ್ದ ವೇಳೆ ಬಸ್ ಓಡಿಸುತ್ತಲೇ ಬಿಎಂಟಿಸಿ ಬಸ್ಸಿನಲ್ಲಿ ಮೃತ ಪಟ್ಟಿದ್ದಾರೆ. ಇಷ್ಟೆಲ್ಲಾ ಆರೋಗ್ಯ ಸಮಸ್ಯೆ ಇದ್ರೂ ಕಚೇರಿ ಕೆಲಸಗಳಿಗೆ ನೇಮಿಸದೆ ಡ್ರೈವಿಂಗ್​ಗೆ​ ಕಳಿಸಿದ್ದಕ್ಕೆ ಸಂಬಂಧಿಕರು ಬಿಎಂಟಿಸಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಪ್ರಕರಣ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.