ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಬೇಕಿದ್ದ ಸಂಪುಟ ಸಭೆ ಮೂರನೇ ಬಾರಿಗೆ ಮುಂದೂಡಿಕೆ
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆ ಮೂರನೇ ಬಾರಿಗೆ ಮುಂದೂಡಿಕೆಯಾಗಿದೆ. ಈಗಾಗಲೇ ಜಿಲ್ಲಾಡಳಿತ ಹಾಗೂ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದಿಂದ ಸಿದ್ದತಾ ಕಾರ್ಯ ಜೋರಾಗಿ ನಡೆದಿತ್ತು. ಮೂರನೇ ಬಾರಿಗೆ ಸಂಪುಟ ಸಭೆಯ ಬದಲಾದ ಬೆನ್ನಲ್ಲೇ ಸಚಿವ ಸಂಪುಟ ಸಭೆ ಚಾಮರಾಜನಗರದಲ್ಲಿ ನಡೆಯುತ್ತಾ ಅಥವಾ ನಡೆಯೊದಿಲ್ಲವೇ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಜೋರಾಗುತ್ತಿದೆ.

ಚಾಮರಾಜನಗರ, ಫೆಬ್ರವರಿ 14: ಗಡಿ ಜಿಲ್ಲೆ ಚಾಮರಾಜನಗರ ಮೊದಲೇ ಹಿಂದುಳಿದ ಜಿಲ್ಲೆ. ಮೂಲಭೂತ ಸೌಕರ್ಯದ ಕೊರತೆ ಸಾಕಷ್ಟಿದೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಚಾಮರಾಜನಗರದಲ್ಲಿ ಸಚಿವ ಸಂಪುಟ ನಡೆಸಲು ಸರ್ಕಾರ ನಿರ್ಧರಿಸಿತ್ತು. ಇದಕ್ಕೆ ಈಗಾಗಲೇ ಮೂರು ಬಾರಿ ದಿನಾಂಕ ಕೂಡ ನಿಗದಿಯಾಗಿತ್ತು. ಆದರೆ, ಮೂರು ಬಾರಿಯೂ ಕೂಡ ದಿನಾಂಕ ಬದಲಾಗುತ್ತಲೇ ಇದೆ.
ಜಿಲ್ಲೆಯ ಪವಿತ್ರ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಿಗದಿಯಾಗಿತ್ತು. ಜನರು ವಿದ್ಯುತ್, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ನಿರೀಕ್ಷೆ ಹೊಂದಿದ್ದರು. ಅಲ್ಲದೇ ಜಿಲ್ಲೆಯ ಅಭಿವೃದ್ಧಿ ಸಂಬಂಧ ಈ ಒಂದು ಕ್ಯಾಬಿನೆಟ್ ಸಭೆ ವೇಳೆ ವಿಶೇಷ ಪ್ಯಾಕೇಜ್ ಘೋಷಿಸುವ ಬಗ್ಗೆ ಜನರಲ್ಲಿ ಭರವಸೆಯಿತ್ತು. ಆದರೆ ಇದೀಗಾ ಮೂರನೇ ಬಾರಿಗೆ ಸಚಿವ ಸಂಪುಟ ಸಭೆ ಮುಂದೂಡಿಕೆಯಾಗಿರುವುದರಿಂದ, ಜಿಲ್ಲೆಗೆ ಸಾಕಷ್ಟು ಅನುದಾನ ಕೊಡಬೇಕಾದ ಅನಿವಾರ್ಯತೆ ಎದುರಾಗುವ ದೃಷ್ಟಿಯಿಂದ ಸರ್ಕಾರ ಪದೇ ಪದೇ ದಿನಾಂಕ ಬದಲಾವಣೆ ಮಾಡ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಇದು ಸರ್ಕಾರ ಚಾಮರಾಜನಗರ ಜಿಲ್ಲೆಯ ಜನರಿಗೆ ಮಾಡುತ್ತಿರುವ ಮೋಸ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.
ಫೆಬ್ರವರಿ 16 ರಂದು ಚಾಮರಾಜನಗರದಲ್ಲಿ ಸಮಾವೇಶ ಹಾಗೂ ಫೆಬ್ರವರಿ 17 ರಂದು ಸಚಿವ ಸಂಪುಟ ಸಭೆ ನಡೆಸಲು ದಿನಾಂಕ ಕೂಡ ಅಂತಿಮ ಆಗಿತ್ತು. ಇದಕ್ಕೆ ಮುಂಚೆ ಎರಡು ಬಾರಿ ದಿನಾಂಕ ಕೂಡ ಬದಲಾಗಿತ್ತು. ಇದು ಸೇರಿ ಮೂರನೇ ಬಾರಿಗೆ ದಿನಾಂಕ ಕೂಡ ಬದಲಾವಣೆಯಾಗಿದೆ. ಮಾರ್ಚ್ 8 ರಂದು ಸಚಿವ ಸಂಪುಟ ಸಭೆ ಹಾಗೂ ಮಾರ್ಚ್ 9 ರಂದು ಚಾಮರಾಜನಗರದಲ್ಲಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ಚಾಮರಾಜನಗರ ಡಿಸಿ ಶಿಲ್ಪಾನಾಗ್ ತಿಳಿಸಿದ್ದಾರೆ.
ಇದನ್ನೂ ಓದಿ: ವಿದೇಶಿ ಪ್ರಜೆಯನ್ನು ಬಲಿ ಪಡೆದ ಕಾಡಾನೆ, ಸೊಂಡಿಲಿನಿಂದ ಎತ್ತಿ ಬಿಸಾಡಿರುವ ವಿಡಿಯೋ ನೋಡಿ
ಒಟ್ಟಿನಲ್ಲಿ ಚಾಮರಾಜನಗರಕ್ಕೆ ಬಂದರೆ, ಅಧಿಕಾರ ಹೋಗುತ್ತೆ ಎಂಬ ಭಯ ರಾಜ್ಯದ ಬಹುತೇಕ ಮುಖ್ಯಮಂತ್ರಿಗಳಿತ್ತು. ಆ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದ ಸಿಎಂ ಸಿದ್ದರಾಮಯ್ಯ ಸಾಕಷ್ಟು ಬಾರಿ ಜಿಲ್ಲೆಗೆ ಬಂದಿದ್ದಾರೆ. ಆದರೆ, ಸಂಪುಟ ಸಭೆಗೆ ಪದೇ ಪದೇ ದಿನಾಂಕ ಬದಲಾಗುತ್ತಿರುವುದ್ಯಾಕೆ? ಬಜೆಟ್ ಅಧಿವೇಶನ ಮಾರ್ಚ್ನಲ್ಲಿ ನಡೆಯುವ ಸಾಧ್ಯತೆ ಹಿನ್ನಲೆ ಮುಂದೆ ನಿಗದಿಯಾಗಿರುವ ದಿನಾಂಕದಲ್ಲಾದರೂ ಸಚಿವ ಸಂಪುಟ ನಡೆಯುತ್ತಾ ಅಥವಾ ಇಲ್ಲವೇ ಎಂಬ ಪ್ರಶ್ನೆ ಜಿಲ್ಲೆಯ ಜನರನ್ನು ಕಾಡುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:34 am, Fri, 14 February 25