ಚಾಮರಾಜನಗರ: ಕಾರ್ಯಾಚರಣೆಯಲ್ಲಿ ಸೆರೆ ಹಿಡಿಯಲಾಗಿದ್ದ ಆನೆ ಬಂಡೀಪುರದ ರಾಮಾಪುರ ಬಿಡಾರದಲ್ಲಿ ಸಾವು

ಹಾಸನದ ಬೇಲೂರಿನಲ್ಲಿ ಸೆರೆ ಹಿಡಿಯಲಾಗಿದ್ದ ತಣ್ಣೀರ್ ಕೊಂಬನ್ ಎಂಬ ಆನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ರೇಡಿಯೋ ಕಾಲರ್ ಅಳವಡಿಸಿ ಬಂಡೀಪುರದ ಅರಣ್ಯಕ್ಕೆ ಬಿಟ್ಟಿದ್ದರು. ಈ ತಣ್ಣೀರ್ ಕೊಂಬನ್ ಆನೆ ಕೇರಳದ ವಯನಾಡು ವ್ಯಾಪ್ತಿಯ ಮಾನಂದವಾಡಿ ಪಟ್ಟಣದ ಜನನಿಬೀಡ ಪ್ರದೇಶಕ್ಕೆ ನುಗ್ಗಿತ್ತು. ಮುಂದೇನಾಯ್ತು ಈ ಸ್ಟೋರಿ ಓದಿ...

ಚಾಮರಾಜನಗರ: ಕಾರ್ಯಾಚರಣೆಯಲ್ಲಿ ಸೆರೆ ಹಿಡಿಯಲಾಗಿದ್ದ ಆನೆ ಬಂಡೀಪುರದ ರಾಮಾಪುರ ಬಿಡಾರದಲ್ಲಿ ಸಾವು
ಮೃತ ಆನೆ
Follow us
| Updated By: ವಿವೇಕ ಬಿರಾದಾರ

Updated on: Feb 03, 2024 | 10:29 AM

ಚಾಮರಾಜನಗರ, ಫೆಬ್ರವರಿ 03: ಬಂಡೀಪುರದ (Bandipur) ರಾಮಾಪುರ ಆನೆ (Elephant) ಬಿಡಾರದಲ್ಲಿ ಆನೆ ಮೃತಪಟ್ಟಿದೆ. ಹಾಸನದ (Hassan) ಬೇಲೂರಿನಲ್ಲಿ ಸೆರೆ ಹಿಡಿಯಲಾಗಿದ್ದ ತಣ್ಣೀರ್ ಕೊಂಬನ್ ಎಂಬ ಆನೆಗೆ ಅರಣ್ಯ ಇಲಾಖೆ ಅಧಿಕಾರಿಗಳು (Forest Department) ರೇಡಿಯೋ ಕಾಲರ್ ಅಳವಡಿಸಿ ಬಂಡೀಪುರದ ಅರಣ್ಯಕ್ಕೆ ಬಿಟ್ಟಿದ್ದರು. ಈ ತಣ್ಣೀರ್ ಕೊಂಬನ್ ಆನೆ ಕೇರಳದ ವಯನಾಡು ವ್ಯಾಪ್ತಿಯ ಮಾನಂದವಾಡಿ ಪಟ್ಟಣದ ಜನನಿಬೀಡ ಪ್ರದೇಶಕ್ಕೆ ನುಗ್ಗಿತ್ತು. ಈ ವಿಚಾರ ತಿಳಿದು ಕೇರಳದ ಅರಣ್ಯ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆನೆಗೆ ಡಾಟಿಂಗ್ ಮಾಡಿ ಸೆರೆ ಹಿಡಿದು, ಲಾರಿಯಲ್ಲಿ ಬಂಡೀಪುರದ ರಾಮಾಪುರ ಆನೆ ಶಿಬಿರಕ್ಕೆ ಶುಕ್ರವಾರ (ಫೆ.02) ರಾತ್ರಿ ಕರೆತಂದಿದ್ದರು.

ಲಾರಿ ನಿಲ್ಲಿಸುತ್ತಿದ್ದಂತೆ ಆನೆ ಕುಸಿದು ಬಿದ್ದು ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದ್ದಾರೆ. ಇಂದು (ಫೆ.03) ಆನೆಯ ಮರಣೋತ್ತರ ಪರೀಕ್ಷೆ ನಡೆಯಲಿದೆ. ಬಳಿಕ ಆನೆ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಟಿವಿ9ಗೆ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಳುವಾರೆಯಲ್ಲಿ ಬೀಡುಬಿಟ್ಟ ಬೀಟಮ್ಮ ಗ್ಯಾಂಗ್

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಕೆಸರಿಕೆ‌ ಗ್ರಾಮದ ಮುಳುವಾರೆಯಲ್ಲಿ ಬೀಟಮ್ಮ ಗ್ಯಾಂಗ್ (ಆನೆಗಳ ಹಿಂಡು) ಬೀಡುಬಿಟ್ಟದೆ. ಗ್ರಾಮದ ಕಾಫಿ ಮತ್ತು ಅಡಿಕೆ ತೋಟಕ್ಕೆ ನುಗ್ಗಿದ್ದು, ಲಕ್ಷಾಂತರ ಮೌಲ್ಯದ ಕಾಫಿ ಬೆಳೆ, ಅಡಿಕೆ‌ ಬೆಳೆ ನಾಶವಾಗಿದೆ. ಕಾಡಾನೆಗಳು ಕಾಫಿ ತೋಟದ ಮಧ್ಯದಲ್ಲಿ ಬೀಡು ಬಿಟ್ಟಿದ್ದು, ತೋಟಕ್ಕೆ ಹೋಗಲು ಜನರಿಗೆ ತೊಂದರೆಯಾಗುತ್ತಿದೆ.

ಇದನ್ನೂ ಓದಿ: ಬಂಡೀಪುರದಲ್ಲಿ ಚಿತ್ರ ಸೆರೆ ಹಿಡಿಯಲು ನಿಂತ ಪ್ರವಾಸಿಗರು: ಆನೆ ತುಳಿತದಿಂದ ಕೂದಲೆಳೆ ಅಂತರದಿಂದ ಪಾರಾದ ವ್ಯಕ್ತಿ

ಇನ್ನು ಈ ಬೀಟಮ್ಮ ಗ್ಯಾಂಗ್‌ನಿಂದ ಬೇರ್ಪಟ್ಟ ಒಂಟಿ ಸಲಗ ಮೂಡಿಗೆರೆ-ಚಿಕ್ಕಮಗಳೂರು ಮಾರ್ಗದ ರಸ್ತೆಯಲ್ಲಿ ಸಂಚಾರ ಮಾಡುತ್ತಿದೆ. ಹೀಗಾಗಿ ಅರಣ್ಯ ಇಲಾಖೆ ತೋರಣಮಾವು, ಕೋಡುವಳ್ಳಿ, ಗೌತಮೇಶ್ವರ, ಅಣೂರು, ದಿಣ್ಣೆಕೆರೆ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದೆ. ಅನಗತ್ಯವಾಗಿ ರಸ್ತೆಗಿಳಿಯಬೇಡಿ, ಮುಂಜಾನೆಯೇ ತೋಟಕ್ಕೆ ಹೋಗಬೇಡಿ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರಿಕೆ ನೀಡುತ್ತಿದ್ದಾರೆ.

ಕಾಡಾನೆ ದಾಳಿಗೆ ರೈತ ಬಲಿ

ಮೈಸೂರು: ಕಾಡಾನೆ ದಾಳಿಗೆ ರೈತ ಮೃತಪಟ್ಟಿರುವ ಘಟನೆ ಹುಣಸೂರು ತಾಲೂಕಿನ ಮುದಗನೂರು ಗ್ರಾಮದಲ್ಲಿ ನಡೆದಿದೆ. ಚಲುವಯ್ಯ (65) ಮೃತ ದುರ್ದೈವಿ. ಕಟಾವು ಮಾಡಿದ್ದ ರಾಗಿ ಬೆಳೆ ಕಂತೆ ಕಟ್ಟುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿದೆ. ನಿರಂತರ ಕಾಡು ಪ್ರಾಣಿ ಹಾವಳಿಯಿಂದ ಆತಂಕ ಹೆಚ್ಚಾಗಿದ್ದು, ಶಾಶ್ವತ ಪರಿಹಾರಕ್ಕಾಗಿ ಮುದಗನೂರು ಗ್ರಾಮಸ್ಥರ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ