ಬಂಡೀಪುರದಲ್ಲಿ ಉದ್ಘಾಟನೆಗೆ ಸಿದ್ಧವಾಯ್ತು ಟೈಗರ್ ರಿಸರ್ಚ್ ಮಾನಿಟರಿಂಗ್ ಸೆಲ್: ಪ್ರತಿ ವರ್ಷ ಸುಲಭವಾಗಿ ನಡೆಯಲಿದೆ ಹುಲಿ ಗಣತಿ
ಕರ್ನಾಟಕದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಬಂಡೀಪುರದ ಪ್ರಾಕೃತಿಕ ಸೌಂದರ್ಯಕ್ಕೆ ಮನ ಸೋಲದವರೇ ಇಲ್ಲ. ಇಂತಹ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹುಲಿಗಳ ಕುರಿತು ರಿಸರ್ಚ್ ನಡೆಸಬೇಕಿದ್ದರೆ ಅರಣ್ಯಾಧಿಕಾರಿಗಳು ಪಡಬಾರದ ಪಡಿಪಾಟಲು ಪಡುತ್ತಿದ್ದರು. ಆದರೆ, ಇನ್ನುಮುಂದೆ ಆ ಕಷ್ಟಪಡಬೇಕಿಲ್ಲ. ಆ ಸಂಕಷ್ಟಕ್ಕೆ ಈಗ ಬ್ರೇಕ್ ಬಿದ್ದಿದೆ.

ಚಾಮರಾಜನಗರ, ಮೇ 19: ಚಾಮರಾಜನಗರ (Chamarajanagar) ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ನ ಪ್ರಕೃತಿಯ ಸೌಂದರ್ಯಕ್ಕೆ ಮನಸೋಲದವರೇ ಕಡಿಮೆ ಎನ್ನಬಹುದು. ಕರ್ನಾಟಕದಲ್ಲೇ ಅತಿ ಹೆಚ್ಚು ಹುಲಿಗಳು, ಆನೆ ಮತ್ತು ಚಿರತೆಗಳನ್ನ ಹೊಂದಿರುವ ಏಕೈಕ ಹುಲಿ ಸಂರಕ್ಷಿತಾರಣ್ಯ ಇದು. ಇಂತಹ ಬಂಡೀಪುರದಲ್ಲಿ ಹುಲಿ ಗಣತಿ ಕಾರ್ಯ ಅಥವಾ ಯಾವುದಾದರೂ ಸಂಶೋಧನೆ ಮಾಡಬೇಕಾದರೆ ದೂರದ ಬೆಂಗಳೂರಿನ ಕೇಂದ್ರ ಕಚೇರಿಗೆ ತೆರಳಬೇಕಿತ್ತು. ಇದರಿಂದ ಅರಣ್ಯಾಧಿಕಾರಿಗಳಿಗೆ ಭಾರೀ ಸಂಕಷ್ಟ ಎದುರಾಗುತ್ತಿತ್ತು. ಈಗ ಇದಕ್ಕೊಂದು ಪರಿಹಾರ ಸಿಕ್ಕಿದೆ. ಇನ್ನು ಕೆಲವೇ ದಿನಗಳಲ್ಲಿ ಬಂಡೀಪುರದ ಮೇಲುಕಾಮನ ಹಳ್ಳಿಯಲ್ಲಿ ಟೈಗರ್ ರಿಸರ್ಚ್ ಸೆಲ್ ಆರಂಭಗೊಳ್ಳಲಿದೆ.
ಬಂಡೀಪುರ ಸೇರಿದಂತೆ ರಾಜ್ಯದಲ್ಲಿ ಬಿಳಿಗಿರಿ ಟೈಗರ್ ರಿಸರ್ವ್, ಭದ್ರ ಟೈಗರ್ ರಿಸರ್ವ್, ನಾಗರಹೊಳೆ ಟೈಗರ್ ರಿಸರ್ವ್ ಫಾರೆಸ್ಟ್ ಗಳಿವೆ. ರಾಜ್ಯದ ಎಲ್ಲಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದು ಟೈಗರ್ ರಿಸರ್ಚ್ ಆ್ಯಂಡ್ ಮಾನಿಟರಿಂಗ್ ಸೆಲ್ನ ಅನಿವಾರ್ಯತೆ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ವರದಿ ನೀಡಲಾಗಿತ್ತು. ಈ ವರದಿ ಆದಾರದ ಮೇಲೆ ರಾಜ್ಯದ ಎಲ್ಲಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಟೈಗರ್ ಸೆಲ್ ತೆರೆಯಲು ರಾಜ್ಯ ಸರ್ಕಾರ ಮುಂದಾಗಿದ್ದು, ಅದರ ಮೊದಲ ಹಂತವಾಗಿ ಬಂಡೀಪುರದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿದೆ. ಇನ್ನು ಕೆಲ ದಿನಗಳಲ್ಲೇ ನೂತನ ಟೈಗರ್ ರಿಸರ್ಚ್ ಆ್ಯಂಡ್ ಮಾನಿಟರಿಂಗ್ ಸೆಲ್ ಲೋಕಾರ್ಪಣೆ ಗೊಳ್ಳಲಿದೆ.
ಟೈಗರ್ ರಿಸರ್ಚ್ ಆ್ಯಂಡ್ ಮಾನಿಟರಿಂಗ್ ಸೆಲ್ ಪ್ರಯೋಜನವೇನು?
ಟೈಗರ್ ರಿಸರ್ಚ್ ಆ್ಯಂಡ್ ಮಾನಿಟರಿಂಗ್ ಸೆಲ್ ನೆರವಿನಿಂದ ಬಂಡೀಪುರದಲ್ಲಿ ಪ್ರತಿಯೊಂದು ಹುಲಿಯ ಮಾನಿಟರಿಂಗ್ ಮಾಡಬಹುದು. ವರ್ಷದಿಂದ ವರ್ಷಕ್ಕೆ ಎಷ್ಟು ಹುಲಿಗಳ ಸಂಖ್ಯೆ ಹೆಚ್ಚಾಗಿದೆ? ಅಥವಾ ಕಡಿಮೆ ಆಗಿದೆ ಎಂಬುದರ ನಿಖರ ಮಾಹಿತಿ ದೊರೆಯಲಿದೆ. ಇದರ ಜೊತೆಗೆ ಕ್ಯಾಪ್ಚರಿಂಗ್ ಕಾರ್ಯ ಹಾಗೂ ಯಾವುದಾದರೂ ಹುಲಿಯ ಮೇಲೆ ಸಂಶೋಧನೆಯನ್ನೂ ಇಲ್ಲೇ ಮಾಡಬಹುದಾಗಿದೆ ಎಂದು ಸಿಎಫ್ ಪ್ರಭಾಕರನ್ ತಿಳಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ನೆಲಕಚ್ಚಿದ್ದ ರೇಷ್ಮೆ ಕೃಷಿಗೆ ಸರ್ಕಾರದಿಂದ ಉತ್ತೇಜನ, ರೈತರಿಗೆ ಸಕಲ ಸವಲತ್ತು
ಸದ್ಯ ರಾಜ್ಯ ಸರ್ಕಾರದ ಈ ನಡೆಯಿಂದ ಮುಂಬರುವ ದಿನಗಳಲ್ಲಿ ಕಾಡುಪ್ರಾಣಿಗಳ ಕುರಿತಾದ ನಿಖರ ಹಾಗೂ ಸ್ಪಷ್ಟ ಮಾಹಿತಿ ಸಿಗಲಿದೆ. ಇದರ ಜೊತೆಗೆ, ವನ್ಯ ಮೃಗಗಳ ಕುರಿತ ಹೆಚ್ಚು ನಿಖರವಾದ ಅದ್ಯಯನ ಸಾಧ್ಯವಾಗಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:04 am, Mon, 19 May 25