ಪಾಕ್ ಪರ ಘೋಷಣೆ ಕೂಗಿಲ್ಲ, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕೇಸ್: ಪರಮೇಶ್ವರ್ ಎಚ್ಚರಿಕೆ
ಇಂದು ಚನ್ನಗಿರಿ ಪೊಲೀಸ್ ಠಾಣೆಗೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಮಾತನಾಡಿದ್ದು, ಇದುವರೆಗೆ 30 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ವೇಳೆ ಯಾರೂ ಪಾಕ್ ಪರ ಘೋಷಣೆ ಕೂಗಿಲ್ಲ. ಸುಳ್ಳು ಸುದ್ದಿ ಹರಡುವವರ ವಿರುದ್ಧ ಕೇಸ್ ದಾಖಲಿಸುತ್ತೇವೆ ಎಂದು ಖಡಕ್ ಸೂಚನೆ ನೀಡಿದ್ದಾರೆ.
ದಾವಣಗೆರೆ, ಮೇ 30: ಜಿಲ್ಲೆಯ ಚನ್ನಗಿರಿ (Channagiri) ಪೊಲೀಸ್ ಠಾಣೆ ಮೇಲೆ ದಾಳಿ ವೇಳೆ ಯಾರೂ ಪಾಕ್ ಪರ ಘೋಷಣೆ ಕೂಗಿಲ್ಲ. ಆರೋಪ ಮಾಡುವವರು ಸಾಕ್ಷ್ಯ ನೀಡಿದರೆ ಕ್ರಮಕೈಗೊಳ್ಳುತ್ತೇವೆ. ಇಲ್ಲದಿದ್ದರೆ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕೇಸ್ ದಾಖಲಿಸುತ್ತೇವೆ ಎಂದು ಗೃಹಸಚಿವ ಡಾ.ಪರಮೇಶ್ವರ್ (G. Parameshwara) ಹೇಳಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಇದುವರೆಗೆ 30 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಒಂದು ಕಡೆ ಠಾಣೆಗೆ ಶವ ತಂದಿಟ್ಟು ಪ್ರತಿಭಟನೆಮಾಡಿ ಕಲ್ಲು ತೂರಿದ್ದರು. ಠಾಣೆ ಮುಂದಿದ್ದ ವ್ಯಾನ್ ಜಖಂ ಗೊಳಿಸಿದ್ದು ಒಂದು ಭಾಗವಾದರೆ, ಮಟ್ಕಾ ಆಡಿಸುತ್ತಿದ್ದನೆಂದು ಠಾಣೆಗೆ ಕರೆತಂದು ವಿಚಾರಣೆ ಮಾಡಿದ್ದರು. ಪೊಲೀಸರ ವಶದಲ್ಲಿದ್ದ ವೇಳೆ ಆರೋಪಿ ಮೃತಪಟ್ಟಿದ್ದು ಇನ್ನೊಂದು ಭಾಗ. ಪ್ರಕರಣ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಚನ್ನಗಿರಿ ಘಟನೆ ವೇಳೆ ಯಾರೂ ಪಾಕಿಸ್ತಾನ ಜಿಂದಾಬಾದ್ ಅಂದಿಲ್ಲ: ಉಮಾ ಪ್ರಶಾಂತ್ ಸ್ಪಷ್ಟನೆ
ಎಫ್ಎಸ್ಎಲ್ ರಿಪೋರ್ಟ್ ಬರಬೇಕು, ಸಾವಿಗೆ ನಿಖರ ಕಾರಣ ಗೊತ್ತಾಗಬೇಕಿದೆ. ಯಾರೇ ತಪ್ಪುಮಾಡಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ. ಠಾಣೆ ಮೇಲೆ ಕಲ್ಲುತೂರಿದವರ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಸಿಕ್ಯಾಮರಾ ದೃಶ್ಯ ಆಧರಿಸಿ ಆರೋಪಿಗಳನ್ನು ಬಂಧಿಸಲಾಗುತ್ತಿದೆ ಎಂದರು.
ಸುಳ್ಳು ಸುದ್ದಿ ಹರಡಿದರೆ ಕಾನೂನು ಕ್ರಮ: ಸಾರ್ವಜನಿಕರಿಗೆ ಎಸ್‌ಪಿ ಉಮಾ ಪ್ರಶಾಂತ್ ಎಚ್ಚರಿಕೆ
ಚನ್ನಗಿರಿ ಗಲಾಟೆ ವೇಳೆ ಯಾರೂ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ಎಚ್ಚರಿಕೆ ನೀಡಿದ್ದಾರೆ. ಮೇ 24ರಂದು ಚನ್ನಗಿರಿ ಠಾಣೆ ಮುಂದೆ ಪ್ರತಿಭಟನೆ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಆರೋಪ ಮಾಡಲಾಗಿತ್ತು.
ಇದನ್ನೂ ಓದಿ: ಚನ್ನಗಿರಿ ಲಾಕಪ್ ಡೆತ್ ಪ್ರಕರಣ: ಡಿವೈಎಸ್ಪಿ ಸೇರಿ ಮೂವರು ಪೊಲೀಸ್ ಅಧಿಕಾರಿಗಳ ಸಸ್ಪೆಂಡ್
ಘೋಷಣೆ ಕೂಗಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹರಿದಾಡಿತ್ತು. ಈ ಬಗ್ಗೆ ಪರಿಶೀಲಿಸಿದ್ದು ಮೇಲ್ನೋಟಕ್ಕೆ ಪಾಕ್ ಜಿಂದಾಬಾದ್ ಎಂದು ಘೋಷಿಸಿಲ್ಲ. ಪರಿಶೀಲಿಸಲಾದ ವಿಡಿಯೋದಲ್ಲಿ ‘ಪೊಲೀಸರಿಗೆ ಧಿಕ್ಕಾರ’ ಎಂದು ಕೂಗಿದ್ದಾರೆ ಎಂದಿದ್ದಾರೆ.
ಪಾಕ್ ಜಿಂದಾಬಾದ್ ಎಂದು ಕೂಗಿದ ವಿಡಿಯೋ ಲಭ್ಯವಿದ್ದಲ್ಲಿ ಜಿಲ್ಲಾ ಪೊಲೀಸ್ ಕಚೇರಿ ಅಥವಾ ಸ್ಥಳೀಯ ಠಾಣೆಗೆ ಮಾಹಿತಿ ನೀಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.