ಚಿಕ್ಕಬಳ್ಳಾಪುರದಲ್ಲಿ ವಿಚಿತ್ರ ಘಟನೆ: ಮೃತ ಯುವಕನ ಹೊಟ್ಟೆಯಲ್ಲಿ ಬ್ಯಾಟರಿ, ಲೈಟರ್, ಕೀ ಪತ್ತೆ!
Chikkaballapur News: ಚಿಕ್ಕಬಳ್ಳಾಪುರ ತಾಲೂಕಿನ ಗುಡಿಬಂಡೆ ಗ್ರಾಮ ಅಚ್ಚರಿ ಘಟನೆಗೆ ಸಾಕ್ಷಿಯಾಗಿದೆ. ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವಕನ ಹೊಟ್ಟೆಯೊಳಗೆ ರಾಶಿ ರಾಶಿ ವಸ್ತುಗಳು ಪತ್ತೆ ಆಗಿವೆ. ಮರಣೋತ್ತರ ಪರೀಕ್ಷೆ ವೇಳೆ ಇವುಗಳನ್ನು ಕಂಡು ವೈದ್ಯರೇ ಶಾಕ್ ಆಗಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಬಳ್ಳಾಪುರ, ಆಗಸ್ಟ್ 30: ಅನುಮಾನಾಸ್ಪದವಾಗಿ ಮೃತಪಟ್ಟ ಯುವಕನ (boy) ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರೇ ಬೆಚ್ಚಿಬಿದ್ದ ಘಟನೆಯೊಂದು ಚಿಕ್ಕಬಳ್ಳಾಪುರ (chikkaballapur) ತಾಲೂಕಿನ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ. ಮೃತನ ಹೊಟ್ಟೆಯನ್ನು ಪರಿಶೀಲಿಸಿದಾಗ ಲೈಟರ್, ಬ್ಯಾಟರಿ ಸೆಲ್, ಬೀಗದ ಕೀಗಳು ಸೇರಿದಂತೆ ಹಲವು ಅಪಾಯಕಾರಿ ಲೋಹದ ವಸ್ತುಗಳು ಪತ್ತೆಯಾಗಿವೆ. ಸದ್ಯ ಈ ಘಟನೆ ಅಚ್ಚರಿಗೂ ಕಾರಣವಾಗಿದ್ದು, ಯುವಕನ ಸಾವಿನ ಸುತ್ತ ಹತ್ತಾರು ಅನುಮಾನಗಳು ಹುಟ್ಟಿಕೊಂಡಿವೆ.
ನಡೆದಿದ್ದೇನು?
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಬಾಪೂಜಿನಗರದಲ್ಲಿ 28 ವರ್ಷದ ಮಹೇಶ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮೂಲತಃ ಚಿಕ್ಕಬಳ್ಳಾಪುರ ತಾಲೂಕಿನ ನಲ್ಲಕದಿರೇನಹಳ್ಳಿ ಗ್ರಾಮದ ನಿವಾಸಿಯಾಗಿರುವ ಮಹೇಶ್, ಕಳೆದ ಕೆಲವು ದಿನಗಳಿಂದ ಅಕ್ಕನ ಮನೆಯಲ್ಲಿ ವಾಸವಾಗಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಂದರೆ ನಿನ್ನೆ ಮಹೇಶ್ ನೇಣು ಬಿಗಿದುಕೊಂಡಿದ್ದಾನೆ ಎನ್ನಲಾಗಿದೆ. ಆದರೆ ಮೃತದೇಹ ನೆಲದ ಮೇಲೆ ಪತ್ತೆಯಾಗಿರುವುದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಯುವಕನ ಸಾವು ಆತ್ಮಹತ್ಯೆಯೋ ಅಥವಾ ಬೇರೆ ಏನಾದರೂ ನಡೆದಿದೆಯೋ ಎನ್ನುವ ಕುರಿತು ಮರಣೋತ್ತರ ಪರೀಕ್ಷೆಗೆ ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಹೊಟ್ಟೆಯಲ್ಲಿತ್ತು ವಸ್ತುಗಳ ಸಂತೆ!
ವೈದ್ಯರು ಮರಣೋತ್ತರ ಪರೀಕ್ಷೆ ವೇಳೆ ಮೃತನ ಹೊಟ್ಟೆಯಲ್ಲಿ ಲೈಟರ್, ಬ್ಯಾಟರಿ ಸೆಲ್, ಬೀಗದ ಕೀಗಳು, ಹೇರ್ ಪಿನ್, ಔಷಧಿ ಟ್ಯೂಬ್‌ಗಳು, ಕಬ್ಬಿಣದ ಚೂರುಗಳು ಪತ್ತೆಯಾಗಿದ್ದು, ವೈದ್ಯರೇ ಶಾಕ್ ಆಗಿದ್ದಾರೆ. ಯುವಕನ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ಆಚೆ ತೆಗೆಯಲಾಗಿದೆ. ಇಷ್ಟೊಂದು ವಸ್ತುಗಳು ಒಬ್ಬ ವ್ಯಕ್ತಿಯ ಹೊಟ್ಟೆಯೊಳೆಗೆ ಹೇಗೆ ಸೇರಿದವು? ಇದು ಆತ್ಮಹತ್ಯೆನಾ ಅಥವಾ ಬೇರೆ ಯಾವುದಾದರೂ ರಹಸ್ಯವಿದೆಯಾ ಎಂದು ಪೊಲೀಸರು ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ: ಮುಜರಾಯಿ ದೇವಸ್ಥಾನದಲ್ಲಿ ಇದೆಂಥಾ ಪ್ರಮಾದ: ಭಕ್ತರ ಪ್ರಸಾದದ ತಟ್ಟೆ ಕಿತ್ತು ಬಿಸಾಡಿದ ಸಿಬ್ಬಂದಿ
ಮತ್ತೊಂದೆಡೆ ಮೃತ ಮಹೇಶ್‌ಗೆ ಸಾಲದ ಸಮಸ್ಯೆ ಇತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಹಿಂದೆಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಇದೀಗ ಪತ್ತೆಯಾದ ವಸ್ತುಗಳು ಯಾವಾಗ, ಹೇಗೆ ಹೊಟ್ಟೆಯೊಳಗೆ ಸೇರಿದವು. ಆತ ಯಾವತ್ತು ತಮ್ಮ ಎದುರುಗಡೆ ವಸ್ತುಗಳನ್ನು ನುಂಗಿರಲಿಲ್ಲ ಎನ್ನುತ್ತಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಗುಡಿಬಂಡೆ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ಯುವಕನ ಸಾವಿನ ರಹಸ್ಯ ಬಯಲಾಗುತ್ತಾ ಕಾದು ನೋಡಬೇಕು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




