AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣ ಪಡೆದು 0G ಪ್ರದರ್ಶನ ಮಾಡದ ಆರೋಪ: ಥಿಯೇಟರ್ ಸ್ಕ್ರೀನ್ ಹರಿದು, ವಸ್ತುಗಳ ಧ್ವಂಸಗೊಳಿಸಿ ಪವನ್ ಕಲ್ಯಾಣ್ ಅಭಿಮಾನಿಗಳ ದಾಂಧಲೆ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಪವನ್ ಕಲ್ಯಾಣ್ ಅಭಿನಯದ OG ಸಿನಿಮಾ ಪ್ರದರ್ಶನಕ್ಕೆ ಅಡಚಣೆಯಾದ ಕಾರಣ ಅಭಿಮಾನಿಗಳು ಗಲಾಟೆ ಮಾಡಿದ್ದಾರೆ. ಆದರ್ಶ ಚಿತ್ರಮಂದಿರದಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದ್ದರೂ, ಚಿತ್ರ ಪ್ರದರ್ಶನ ಮಾಡಿರಲಿಲ್ಲ. ಇದರಿಂದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಥಿಯೇಟರ್​​ನ ಪರದೆ ಹರಿದು ಹಾಕಿ, ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ.

ಹಣ ಪಡೆದು 0G ಪ್ರದರ್ಶನ ಮಾಡದ ಆರೋಪ: ಥಿಯೇಟರ್ ಸ್ಕ್ರೀನ್ ಹರಿದು, ವಸ್ತುಗಳ ಧ್ವಂಸಗೊಳಿಸಿ ಪವನ್ ಕಲ್ಯಾಣ್ ಅಭಿಮಾನಿಗಳ ದಾಂಧಲೆ
ಚಿಂತಾಮಣಿ ಆದರ್ಶ ಚಿತ್ರಮಂದಿರದ ಎದುರು ಜಮಾಯಿಸಿರುವ ಅಭಿಮಾನಿಗಳು
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: Ganapathi Sharma|

Updated on: Sep 25, 2025 | 10:59 AM

Share

ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 25: ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚಿಂತಾಮಣಿಯಲ್ಲಿ ನಟ ಪವನ್ ಕಲ್ಯಾಣ್ (Pavan Kalyan) ಅಭಿನಯದ OG ಸಿನಿಮಾ (OG Film) ಪ್ರದರ್ಶನಕ್ಕೆ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ಅಭಿಮಾನಿಗಳು ಗಲಾಟೆ ನಡೆಸಿದ್ದಾರೆ. ಚಿಂತಾಮಣಿ ಪಟ್ಟಣದ ಆದರ್ಶ ಚಿತ್ರಮಂದಿರದಲ್ಲಿ ಸೆಪ್ಟೆಂಬರ್ 24 ರಂದು ರಾತ್ರಿ 8 ಗಂಟೆಗೆ ಫ್ಯಾನ್ಸ್ ಶೋ ಎಂದು ಘೋಷಿಸಿ ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಲಾಗಿತ್ತು. ಆದರೆ ರಾತ್ರಿ 9 ಗಂಟೆಯಾದರೂ ಚಿತ್ರ ಪ್ರದರ್ಶನ ಆರಂಭವಾಗದ ಕಾರಣ ಅಭಿಮಾನಿಗಳು ರೊಚ್ಚಿಗೆದ್ದು ಚಿತ್ರಮಂದಿರದಲ್ಲಿ ಗಲಾಟೆ ನಡೆಸಿದರು.

ಗಲಾಟೆಯಲ್ಲಿ ಚಿತ್ರಮಂದಿರದ ಪರದೆ ಹರಿದು ಹಾಕಿ, ಕುರ್ಚಿಗಳನ್ನು ಒಡೆದು ಹಾಕಿ, ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಲಾಗಿದೆ. ಇದರಿಂದ ಚಿತ್ರಮಂದಿರದಲ್ಲಿ ನೂಕು ನುಗ್ಗಲು ಉಂಟಾಯಿತು.

ಅಭಿಮಾನಿಗಳ ದಾಂಧಲೆ ಬಗ್ಗೆ ಮಾಹಿತಿ ದೊರಕಿದಂತೆಯೇ ಚಿಂತಾಮಣಿ ನಗರ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ವಿಜಯಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅಭಿಮಾನಿಗಳನ್ನು ಚಿತ್ರಮಂದಿರದಿಂದ ಹೊರಹಾಕಿ ಗೇಟ್‌ಗಳನ್ನು ಬಂದ್ ಮಾಡಿದರು.

ಘಟನೆಯ ನಂತರ ಅಭಿಮಾನಿಗಳು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿ, ಚಿತ್ರಮಂದಿರದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಫೋನ್‌ಪೇ ಹಾಗೂ ನಗದು ಮೂಲಕ ಹಣ ಪಡೆದು ಚಿತ್ರ ಪ್ರದರ್ಶನ ಮಾಡದಿರುವುದು ಮೋಸ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.

ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಪೊಲೀಸರು ಚಿತ್ರಮಂದಿರದ ಮಾಲೀಕರೊಂದಿಗೆ ಮಾತುಕತೆ ನಡೆಸಿ, ಮರು ಶೋ ನೋಡಲು ಬಯಸಿದವರಿಗೆ ಟಿಕೆಟ್‌ಗಳನ್ನು ಮತ್ತೆ ನೀಡುವಂತೆ ಹಾಗೂ ನೋಡಲು ಬಯಸದವರಿಗೆ ಹಣ ಹಿಂತಿರುಗಿಸುವಂತೆ ವ್ಯವಸ್ಥೆ ಮಾಡಿಸಿದರು. ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದು ಅಭಿಮಾನಿಗಳು ಸ್ಥಳ ತೊರೆದರು.

ಇದನ್ನೂ ಓದಿ: ಹೇಗಿದೆ ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾ? ಇಲ್ಲಿದೆ ವಿಮರ್ಶೆ

ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ OG ಸಿನಿಮಾ ತೆರೆ ಕಂಡಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಮಧ್ಯರಾತ್ರಿ ಸಿನಿಮಾ ಪ್ರದರ್ಶನ ನೆರವೇರಿದೆ. ಬೆಂಗಳೂರಿನ ಮಡಿವಾಳದ ಸಂಧ್ಯಾ ಥಿಯೇಟರ್ ಬಳಿ ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿದ ಘಟನೆಯೂ ನಡೆದಿದೆ. ಒಜಿ ಸಿನಿಮಾದಲ್ಲಿ ಪವನ್ ಕಲ್ಯಾಣ್ ತಲ್ವಾರ್ ಹಿಡಿದಿರುವ ದೃಶ್ಯಗಳಿದ್ದು, ಸಿನಿಮಾ ನೋಡಲು ಬಂದವರು ಸಹ ಸಿನಿಮಾ ಕ್ರೇಜ್​​ನಲ್ಲಿ ಅದೇ ರೀತಿ ಮಾಡಿದ್ದಾರೆ. ಕಟೌಟ್ ಮುಂದೆ ಫೋಟೋ ತೆಗೆದುಕೊಳ್ಳಲು ಜಯನಗರದಲ್ಲಿ 200 ರೂಪಾಯಿ ಕೊಟ್ಟು ಪುಂಡರು ಬಾಡಿಗೆಗೆ ಪ್ಲಾಸ್ಟಿಕ್ ತಲ್ವಾರ್ ತಂದಿದ್ದರು ಎಂಬುದು ಗೊತ್ತಾಗಿದೆ. ಸದ್ಯ ಪ್ಲಾಸ್ಟಿಕ್ ತಲ್ವಾರ್​​​ಗಳನ್ನು ಮಡಿವಾಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ