AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರದಲ್ಲಿ ನಕಲಿ ಕೀಟನಾಶಕ ಜಾಲ ಪತ್ತೆ: ರೈತರಿಗೆ ವಂಚಿಸುತ್ತಿದ್ದ ‘ಬೆಳೆ ತಜ್ಞ’ ಕೃಷಿ ಇಲಾಖೆ ಬಲೆಗೆ!

ಚಿಕ್ಕಬಳ್ಳಾಪುರದಲ್ಲಿ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ಕೀಟನಾಶಕ ತಯಾರಿಸಿ ರೈತರಿಗೆ ಮಾರಾಟ ಮಾಡುತ್ತಿದ್ದ ಭಾರಿ ಜಾಲವನ್ನು ಕೃಷಿ ಜಾಗೃತ ದಳ ಬಯಲಿಗೆಳೆದಿದೆ. ತಾನೊಬ್ಬ ಬೆಳೆ ತಜ್ಞ ಎಂದು ನಂಬಿಸಿ ವಂಚಿಸುತ್ತಿದ್ದ ಸೋಮಸುಂದರ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ಆತನಿಂದ 200 ಲೀಟರ್ ರಾಸಾಯನಿಕ ಹಾಗೂ ನಕಲಿ ಲೇಬಲ್‌ಗಳನ್ನು ಜಪ್ತಿ ಮಾಡಲಾಗಿದೆ. ನಕಲಿ ಔಷಧಗಳಿಂದ ಎಚ್ಚರಿಕೆ ವಹಿಸಲು ಕೃಷಿ ಇಲಾಖೆ ಸೂಚಿಸಿದೆ.

ಚಿಕ್ಕಬಳ್ಳಾಪುರದಲ್ಲಿ ನಕಲಿ ಕೀಟನಾಶಕ ಜಾಲ ಪತ್ತೆ: ರೈತರಿಗೆ ವಂಚಿಸುತ್ತಿದ್ದ 'ಬೆಳೆ ತಜ್ಞ' ಕೃಷಿ ಇಲಾಖೆ ಬಲೆಗೆ!
ಚಿಕ್ಕಬಳ್ಳಾಪುರದಲ್ಲಿ ನಕಲಿ ಕೀಟನಾಶಕ ಜಾಲ ಪತ್ತೆ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Jul 24, 2026 | 3:04 PM

Share

ಮುಖ್ಯಾಂಶಗಳು

  • ಚಿಕ್ಕಬಳ್ಳಾಪುರದಲ್ಲಿ ನಕಲಿ ಕೀಟನಾಶಕ ತಯಾರಿಸುತ್ತಿದ್ದ ಅಡ್ಡೆ ಮೇಲೆ ಕೃಷಿ ಇಲಾಖೆ ದಾಳಿ.
  • 'ಬೆಳೆ ತಜ್ಞ' ಸೋಗಿನಲ್ಲಿ ರೈತರಿಗೆ ನಕಲಿ ಕೀಟನಾಶಕ ಮಾರುತ್ತಿದ್ದ ಸೋಮಸುಂದರ್ ಬಂಧನ.
  • 200 ಲೀಟರ್ ರಾಸಾಯನಿಕ, 12 ಕಂಪನಿಗಳ ನಕಲಿ ಲೇಬಲ್, ಜಿಎಸ್‌ಟಿ ವಶ.

ಚಿಕ್ಕಬಳ್ಳಾಪುರ, ಜುಲೈ 24: ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ಕೀಟನಾಶಕ ತಯಾರಿಸಿ ಮಾರಾಟ ಮಾಡುತ್ತಿದ್ದ ಭಾರಿ ಜಾಲವೊಂದನ್ನು ಚಿಕ್ಕಬಳ್ಳಾಪುರದಲ್ಲಿ ಕೃಷಿ ಇಲಾಖೆಯ ಜಾಗೃತ ದಳ ಬಯಲಿಗೆಳೆದಿದೆ. ನಗರದ ವಸತಿ ಮನೆಯೊಂದರ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಅಪಾರ ಪ್ರಮಾಣದ ನಕಲಿ ಕೀಟನಾಶಕ ಹಾಗೂ ಪ್ಯಾಕಿಂಗ್ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ.

ನಡೆದಿದ್ದೇನು?

ಅವಧಿ ಮೀರಿದ ಕೃಷಿ ರಾಸಾಯನಿಕಗಳನ್ನು ಅಪಾಯಕಾರಿಯಾಗಿ ಮಿಶ್ರಣ ಮಾಡಿ, ಸುಮಾರು 11 ರಿಂದ 12 ಪ್ರಮುಖ ಕಂಪನಿಗಳ ನಕಲಿ ಲೇಬಲ್ ಹಾಗೂ ಹುಸಿ ಜಿಎಸ್‌ಟಿ (GST) ಸಂಖ್ಯೆ ಬಳಸಿ ರೈತರಿಗೆ ಮಾರಾಟ ಮಾಡಲಾಗುತ್ತಿತ್ತು. ದಾಳಿಯ ವೇಳೆ 200 ಲೀಟರ್‌ಗೂ ಹೆಚ್ಚು ನಕಲಿ ರಾಸಾಯನಿಕಗಳು, ಬಾಟಲಿಗಳು ಮತ್ತು ಲೇಬಲ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ರೈತರೇ ಇವನ ಟಾರ್ಗೆಟ್!

ಆರೋಪಿ ಸೋಮಸುಂದರ್ ತಾನೊಬ್ಬ ‘ಬೆಳೆ ತಜ್ಞ’ ಎಂದು ಹೇಳಿಕೊಂಡು ದ್ರಾಕ್ಷಿ, ಮಾವು, ದಾಳಿಂಬೆ ಬೆಳೆಯುವ ತೋಟಗಾರಿಕಾ ರೈತರ ವಿಶ್ವಾಸ ಗಳಿಸುತ್ತಿದ್ದ. ಪ್ರತಿದಿನ 50 ಲೀಟರ್‌ಗೂ ಹೆಚ್ಚು ನಕಲಿ ಉತ್ಪನ್ನ ತಯಾರಿಸಿ, ನೇರವಾಗಿ ರೈತರ ಜಮೀನುಗಳಿಗೆ ತೆರಳಿ ಮಾರಾಟ ಮಾಡುತ್ತಿದ್ದ. ವಿಚಾರಣೆ ವೇಳೆ ತಾನು ನಕಲಿ ಕೀಟನಾಶಕ ತಯಾರಿಸುತ್ತಿದ್ದುದನ್ನು ಒಪ್ಪಿಕೊಂಡಿರುವ ಆರೋಪಿ, ಕಳೆದ ಮೂರು ದಿನಗಳಿಂದಷ್ಟೇ ಇದನ್ನು ಮಾಡುತ್ತಿದ್ದಾಗಿ ಸಮಜಾಯಿಷಿ ನೀಡಿದ್ದಾನೆ.

ಕೃಷಿ ಇಲಾಖೆ ಎಚ್ಚರಿಕೆ

ಇಂತಹ ನಕಲಿ ರಾಸಾಯನಿಕ ಬಳಕೆಯಿಂದ ಬೆಳೆ ನಾಶವಾಗುವುದಲ್ಲದೆ, ಮಣ್ಣಿನ ಫಲವತ್ತತೆ ಹಾಗೂ ಪರಿಸರಕ್ಕೂ ತೀವ್ರ ಹಾನಿಯಾಗುತ್ತದೆ. ಆದ್ದರಿಂದ ರೈತರು ಅಧಿಕೃತ ರಸೀದಿಯೊಂದಿಗೆ ಮಾನ್ಯತೆ ಪಡೆದ ಅಂಗಡಿಗಳಿಂದಷ್ಟೇ ಕೀಟನಾಶಕ ಖರೀದಿಸಬೇಕೆಂದು ಕೃಷಿ ಜಾಗೃತ ದಳದ ಅಧಿಕಾರಿ ಮೋಹನ್ ಮನವಿ ಮಾಡಿದ್ದಾರೆ. ಈ ಕುರಿತು ಚಿಕ್ಕಬಳ್ಳಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಒದಲು ಇಲ್ಲಿ ಕ್ಲಿಕ್ ಮಾಡಿ

Follow Us