
ಚಿಕ್ಕಬಳ್ಳಾಪುರ, ಅಕ್ಟೋಬರ್ 10: ‘ನನಗೆ ಮೇಲ್ಜಾತಿಯವರ ವೋಟುಗಳು ಬೇಡ. ನನಗೆ ದಲಿತರು. ಮುಸ್ಮಿಮರ ವೋಟುಗಳು ಸಾಕು ಅಷ್ಟೆ. ನಾನು ದಲಿತರ ಪರ ಇದ್ದೀನಿ ಅಂತ ಅಂದುಕೊಳ್ಳಲಿ ಬಿಡಿ’ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರದ್ದು ಎನ್ನಲಾದ ಭಾಷಣದ ವಿಡಿಯೋ ಇದೀಗ ವೈರಲ್ ಆಗಿದೆ.
ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಎಂಸಿ ಸುಧಾಕರ್ ಹಾಗೂ ಕಾಂಗ್ರೆಸ್ ಮುಖಂಡ ರಕ್ಷಾ ರಾಮಯ್ಯ ವಿರುದ್ಧ ಪರೋಕ್ಷವಾಗಿ ಶಾಸಕ ಪ್ರದೀಪ್ ಈಶ್ವರ್ ಬಂಡಾಯ ಸಾರಿದ್ದಾರೆ. ಅಕ್ಟೋಬರ್ 5ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ಆಗ್ನೇಯ ಪದವೀಧರ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದ್ದು, ‘ನನ್ನ ಕ್ಷೇತ್ರಕ್ಕೆ ನಾನೇ ಬಾಸ್, ನನ್ನ ಕ್ಷೇತ್ರದಲ್ಲಿ ಬೇರೆಯವರ ಹಸ್ತಕ್ಷೇಪ ಸಹಿಸಲ್ಲ, ಈಗ ಏನಿದ್ದರೂ ನಂದೇ ಹವಾ, ನನಗೆ ಮೇಲ್ಜಾತಿಯ ಮತಗಳು ಬೇಡ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಿನ್ನ ವಿರುದ್ಧ ಸಮರ ನಿರಂತರ ಎಂದ ಪ್ರದೀಪ್ ಈಶ್ವರ್ಗೆ ಎಂಸಿ ಸುಧಾಕರ್ ಸೈಲೆಂಟ್ ಸ್ಕೆಚ್!
‘ನನ್ನ ಕ್ಷೇತ್ರದಲ್ಲಿ ಬೇರೆ ಕ್ಷೇತ್ರದ ಶಾಸಕರ ಹಸ್ತಕ್ಷೇಪ ಇತ್ತು. ಇದರಿಂದ ಕೆಲವು ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಸೋತರು. ಯಾರಾದರೂ ನನ್ನ ಕ್ಷೇತ್ರಕ್ಕೆ ಕೈ ಹಾಕಿದರೆ ನಾನು ಬಿಡುವುದಿಲ್ಲ. ನನ್ನ ಕ್ಷೇತ್ರಕ್ಕೆ ನಾನೇ ಬಾಸ್ ಅಂತ ಸಿಎಂ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ನನ್ನ ಕ್ಷೇತ್ರದಲ್ಲಿ ನಾನು ಹೇಳಿದ ಹಾಗೆ ನಡೆಯಬೇಕು, ಈಗ ನಡೆಯುತ್ತಿದೆ’ ಎಂದು ಮಾಜಿ ಸಚಿವ ಎಂಸಿ ಸುಧಾಕರ್ ವಿರುದ್ಧ ಅವರು ಪರೋಕ್ಷ ವಾಗ್ದಾಳಿ ಮಾಡಿದರು.
‘ನಾನು 25 ಲಕ್ಷ ರೂಪಾಯಿನಲ್ಲಿ ಶಾಸಕ ಆದವನು. ಅದಕ್ಕೆ ಕೆಲವರು ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ನಾನು ಬಲಿಜ ಎಂಬ ಕಾರಣಕ್ಕೆ ಕಳೆದ ಡೇರಿ ಚುನಾವಣೆಯಲ್ಲಿ ಅಭ್ಯರ್ಥಿ ಪರ ನಾಮಿನೇಷನ್ ಹಾಕಲು ಬರಬೇಡಿ ಅಂತ ಹೇಳಿದ್ದರು. ಉಪವಿಭಾಗ ಹಾಗೂ ಜಿಲ್ಲಾ ಮಟ್ಟದಲ್ಲಿ ಬರೀ ಅವರ ಅಧಿಕಾರಿಗಳೇ ಇದ್ದಾರೆ. ಬೇರೆ ಜಾತಿ, ಸಮುದಾಯದ ಅಧಿಕಾರಿಗಳು ಏನು ಮಾಡಬೇಕು’? ಎಂದು ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ.
‘ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರಮುಖ ಸಮುದಾಯದ ವೋಟುಗಳು ಕೇವಲ 18 ಸಾವಿರ ಇದೆ. ಆದರೆ 50 ಸಾವಿರ ಅಂತ ಸುಳ್ಳು ಹೇಳುತ್ತಿದ್ದಾರೆ. ಕ್ಷೇತ್ರದಲ್ಲಿ ದಲಿತ ಮತಗಳು 1 ಲಕ್ಷ ಇದೆ. ಮುಸ್ಮಿಮರ ವೋಟುಗಳು 30 ಸಾವಿರ ಇದೆ. ದಲಿತರಿಗೆ ಪ್ರಾತಿನಿಧ್ಯ ಸಿಗಬೇಕು. ಕುರುಬ ವೋಟುಗಳು 17 ಸಾವಿರ, ಬಲಿಜ 25 ಸಾವಿರ’ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.