
ಚಿಕ್ಕಬಳ್ಳಾಪುರ, ಫೆಬ್ರವರಿ 13: ಕರ್ನಾಟಕದಲ್ಲಿ ಪ್ರೇಮಿಗಳಿಗೆ ಫೇವರೆಟ್ ಸ್ಫಾಟ್ ಎಂದರೆ ಅದು ನಂದಿ ಬೆಟ್ಟ. ಈ ಬಾರಿಯ ಪ್ರೇಮಿಗಳ ದಿನಾಚರಣೆಯಂದು (Valentine’s Day) ನಂದಿ ಬೆಟ್ಟಕ್ಕೆ ಹೋಗೋಣ ಎಂದು ನೀವು ಯೋಚಿಸಿದ್ದರೆ, ನಿಮಗೆ ದೊಡ್ಡ ನಿರಾಶೆ ಕಾದಿದೆ. ಏಕೆಂದರೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತವು ನಾಳೆ (ಫೆಬ್ರವರಿ 14) ಬೆಳಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿ ಆದೇಶ ಜಾರಿಗೊಳಿಸಿದೆ.
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಜಿ. ಪ್ರಭು, ನಂದಿ ಹಿಲ್ಸ್ನಲ್ಲಿ ಜನಸಂದಣಿ ನಿಯಂತ್ರಿಸಲು ಮತ್ತು ಶಾಂತಿ ಕಾಪಾಡುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈ ಹಿಂದಿನ ವರ್ಷಗಳಲ್ಲಿ ಪ್ರೇಮಿಗಳ ದಿನದಂದು ಆತ್ಮಹತ್ಯೆ ಪ್ರಕರಣ ವರದಿಯಾಗಿದ್ದ ಹಿನ್ನೆಲೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೇ ಅವರ ವರದಿ ಆಧಾರವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ಗೆ ಹೇಳಿದ್ದಾರೆ.
ಹೊಸ ವರ್ಷದ ದಿನವನ್ನು ಹೊರತುಪಡಿಸಿ ವರ್ಷಪೂರ್ತಿ ನಂದಿ ಬೆಟ್ಟ ಪ್ರವಾಸಿಗರಿಗೆ ಮುಕ್ತವಾಗಿರುತ್ತಿತ್ತು. ಆದರೆ ಪ್ರೇಮಿಗಳ ದಿನದಂದು ಹೆಚ್ಚುವರಿ ಜನಸಂದಣಿ ಹಾಗೂ ಯಾವುದೇ ಅವಘಡವನ್ನು ತಪ್ಪಿಸಲು ಈ ನಿಷೇಧ ಜಾರಿಗೊಳಿಸಲಾಗಿದ್ದು, ಪ್ರೇಮಿಗಳಲ್ಲಿ ನಿರಾಶೆ ಮೂಡಿಸಿದೆ.
ಇದನ್ನೂ ಓದಿ Valentine Day 2026: ಪ್ರೇಮಿಗಳ ದಿನದಂದು ಯಾವ ಬಣ್ಣದ ಬಟ್ಟೆಯನ್ನು ಧರಿಸಿದರೆ ಸೂಕ್ತ?
ಸಾಮಾನ್ಯ ವಾರಾಂತ್ಯಗಳಲ್ಲಿ ಸುಮಾರು 16 ಸಾವಿರದಿಂದ 18 ಸಾವಿರ ಪ್ರವಾಸಿಗರು ನಂದಿ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. 3,000ರಿಂದ 3,500 ಎರಡು ಚಕ್ರ ವಾಹನಗಳು ಮತ್ತು 1,500ರಿಂದ 1,700 ನಾಲ್ಕು ಚಕ್ರ ವಾಹನಗಳು ಆಗಮಿಸುತ್ತವೆ. ನಂದಿ ಬೆಟ್ಟಕ್ಕೆ ಒಂದೇ ಪ್ರವೇಶ ಮಾರ್ಗ ಇರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಸಾಮಾನ್ಯ ದಿನಗಳಲ್ಲಿಯೂ 5,000ರಿಂದ 6,000 ಮಂದಿ ಪ್ರವಾಸಿಗರು ಭೇಟಿ ನೀಡುತ್ತಿದ್ದು, 500ರಿಂದ 700 ನಾಲ್ಕು ಚಕ್ರ ವಾಹನಗಳು ಹಾಗೂ 1,000ರಿಂದ 1,500 ಎರಡು ಚಕ್ರ ವಾಹನಗಳು ಸಂಚರಿಸುತ್ತವೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ. ಹೀಗಾಗಿ ಸಾರ್ವಜನಿಕರು ನಿರ್ಬಂಧವನ್ನು ಪಾಲಿಸಿ ಆಡಳಿತಕ್ಕೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.