ದತ್ತಜಯಂತಿಗೆ ದಿನಗಣನೆ ಬೆನ್ನಲ್ಲೇ ದತ್ತಪೀಠದಲ್ಲಿ ಹೊಸ ವಿವಾದ: ಹೊತ್ತಿಕೊಂಡ ಬಿ ರಿಪೋರ್ಟ್‌ ಕಿಚ್ಚು

ಇನಾಂ ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದೊಳಗೆ ವಿಗ್ರಹ ಕೊಂಡೊಯ್ಯುದ ವಿವಾದ ತೀವ್ರಗೊಂಡಿದೆ. ಕಳೆದ ವರ್ಷ ದಾಖಲಾದ ಎಫ್‌ಐಆರ್‌ಗೆ ಈಗ ಬಿ-ರಿಪೋರ್ಟ್ ನೀಡಲಾಗಿದೆ. ಮುಸ್ಲಿಂ ಸಮುದಾಯ ಇದನ್ನು ವಿರೋಧಿಸಿದರೆ, ಹಿಂದೂ ಸಂಘಟನೆಗಳು ತಮ್ಮ ಪರಂಪರೆ ಎಂದು ಪ್ರತಿಪಾದಿಸಿವೆ. ದತ್ತಜಯಂತಿ ಸಮೀಪಿಸುತ್ತಿರುವಾಗ ಈ ವಿವಾದ ಮುನ್ನೆಲೆಗೆ ಬಂದಿದೆ.

ದತ್ತಜಯಂತಿಗೆ ದಿನಗಣನೆ ಬೆನ್ನಲ್ಲೇ ದತ್ತಪೀಠದಲ್ಲಿ ಹೊಸ ವಿವಾದ: ಹೊತ್ತಿಕೊಂಡ ಬಿ ರಿಪೋರ್ಟ್‌ ಕಿಚ್ಚು
ಬಾಬಾಬುಡನ್‌ ಸ್ವಾಮಿ ದರ್ಗಾ
Edited By:

Updated on: Oct 19, 2026 | 10:12 PM

ಚಿಕ್ಕಮಗಳೂರು, ಅಕ್ಟೋಬರ್​ 19: ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಗುಹೆಯೊಳಗೆ ವಿಗ್ರಹ ಕೊಂಡೊಯ್ಯಲಾಗಿದೆ ಎಂಬ ಆರೋಪ ಇದೀಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಕಳೆದ ವರ್ಷ ಜನವರಿಯಲ್ಲಿ ಈ ಕುರಿತಾಗಿ ದೂರು ದಾಖಲಾಗಿದ್ದು, ಇದೀಗ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಇದಕ್ಕೆ ಮುಸ್ಲಿಂ ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದು, ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ. ಮತ್ತೊಂದೆಡೆ, ವಿಗ್ರಹ ಕೊಂಡೊಯ್ಯುವುದು ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಪರಂಪರೆ ಎಂದು ಹಿಂದೂ ಸಂಘಟನೆಗಳ ಮುಖಂಡರು ಸಮರ್ಥಿಸಿಕೊಂಡಿದ್ದಾರೆ. ಆ ಮೂಲಕ ದತ್ತ ಜಯಂತಿಗೆ ದಿನಗಣನೆ ಬೆನ್ನಲ್ಲೇ ಮತ್ತೊಂದು ವಿವಾದ ಸೃಷ್ಟಿಯಾಗಿದೆ.

ವಿಗ್ರಹ ಕೊಂಡೊಯ್ದ ಆರೋಪ: ಪೊಲೀಸರಿಗೆ ದೂರು

ದಾದಾ ಪಹಾಡ್ ಮತ್ತು ಬಾಬಾ ಬುಡನ್ ಹೆರಿಟೇಜ್ ಕೌನ್ಸಿಲ್ ವತಿಯಿಂದ ದರ್ಗಾದ ಗುಹೆಯೊಳಗೆ ವಿಗ್ರಹ ಕೊಂಡೊಯ್ಯಲಾಗಿದೆ ಎಂದು ಆರೋಪಿಸಲಾಗಿತ್ತು. ಅರೋಪ ಮಾತ್ರವಲ್ಲದೇ ಚಿಕ್ಕಮಗಳೂರು ನಗರದಲ್ಲಿ ಪ್ರತಿಭಟನೆ ಕೂಡ ಮಾಡಲಾಗಿತ್ತು. ಇನಾಂ ದತ್ತಾತ್ರೇಯ ಬಾಬಬುಡನ್ ಸ್ವಾಮಿ ದರ್ಗಾದ ಗುಹೆಯೊಳಗೆ ವಿಗ್ರಹ ಕೊಂಡೊಯ್ಯಲಾಗಿದೆ. ಹಿಂದೂ ಸಂಘಟನೆಗಳ ಮುಖಂಡರು ವಿಗ್ರಹದೊಂದಿಗೆ ಗುಹೆಯೊಳಗೆ ತೆರಳಿ ಪೂಜೆ ನಡೆಸಿದ್ದಾರೆ. ಬಾಬಾ ಬುಡನ್ ಸ್ವಾಮಿ ದರ್ಗಾದ ವ್ಯವಸ್ಥಾಪನಾ ಸಮಿತಿಯಲ್ಲಿ ಇಬ್ಬರು ಅರ್ಚಕರನ್ನು ನೇಮಿಸುವ ಸಾಧ್ಯತೆಯಿದೆ ಎಂಬ ವಿಚಾರಕ್ಕೂ ಮುಸ್ಲಿಂ ಸಮುದಾಯದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಅಸಂವಿಧಾನಿಕ ಎಂದು ಅವರು ವಾದಿಸಿದ್ದಾರೆ.

ಬಿ ರಿಪೋರ್ಟ್‌ಗೆ ವಿರೋಧ: ನ್ಯಾಯಾಂಗ ತನಿಖೆಗೆ ಆಗ್ರಹ

ಕಳೆದ ವರ್ಷ ಜನವರಿಯಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಲಾಗಿತ್ತು. ಇದೀಗ ಪ್ರಕರಣದಲ್ಲಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದು, ಈ ಕ್ರಮಕ್ಕೆ ಮುಸ್ಲಿಂ ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದಾರೆ. ಪೊಲೀಸರು ಪಕ್ಷಪಾತದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಇದೀಗ ಹಿಂದೂ ಮುಖಂಡ್ರು ತಿರುಗೇಟು ನೀಡಿದ್ದು, ‘ವಿಗ್ರಹ ಕೊಂಡೊಯ್ಯುವುದು ನಮ್ಮ ಪರಂಪರೆ ಎಂದಿದ್ದಾರೆ.

ಇನ್ನು ದತ್ತಾತ್ರೇಯ ಸ್ವಾಮಿಗಳ ಇತಿಹಾಸವಿರುವುದಕ್ಕೆ ಆ ಹೆಸರನ್ನು ಇಡಲಾಗಿದೆ. ಗಾಳಿಕೆರೆಯಲ್ಲಿ ದೇವರುಗಳನ್ನ ಕರೆತಂದು ಅಲ್ಲಿಂದ ಇನಾಂ ದತ್ತಾತ್ರೇಯ ಪೀಠದ ಗುಹೆಯೊಳಗೆ ಕೊಂಡೊಯ್ದು ಅಲ್ಲಿ ನೀರು ಹಾಕಿಸುವ ಪದ್ಧತಿ ಹೊಸದೇನಲ್ಲ. ದತ್ತಪೀಠ ಹಿಂದೂಗಳಿಗೆ ಸೇರಿದ್ದು, ನಾಗೇನಹಳ್ಳಿ ಸರ್ವೇ ನಂಬರ್​ನಲ್ಲಿ ದರ್ಗಾಯಿದ್ದು, ಇದು ಹಿಂದೂಗಳ ಪೀಠ. ನಾಗೇನಹಳ್ಳಿಗೆ ಸ್ಥಳಾಂತರವಾಗುವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದಿದ್ದಾರೆ ಹಿಂದೂ ಸಂಘಟಕರು.

ಇದನ್ನೂ ಓದಿ: ಇನಾಂ ದತ್ತಾತ್ರೇಯ ದರ್ಗಾದಲ್ಲಿ ಉರುಸ್​​ ಆಚರಣೆಗೆ ತಾರತಮ್ಯ: ಕಾಂಗ್ರೆಸ್​​ ವಿರುದ್ಧ ತಿರುಗಿಬಿದ್ದ ಮುಸ್ಲಿಮರು

ಒಟ್ಟಾರೆ ಕಳೆದ ಹಲವು ದಶಕಗಳಿಂದ ನಿರಂತರವಾಗಿ ಒಂದಲ್ಲ, ಒಂದು ವಿವಾದಕ್ಕೆ ಕಾರಣವಾಗುತ್ತಿರುವ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಇದೀಗ ವಿಗ್ರಹ ವಿವಾದ ಮುನ್ನಲೆಗೆ ಬಂದಿದೆ. ಮುಂದೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಕಾದು ನೋಡಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More
Loading...
Unable to load recommendations.
Follow Us