ಚಿಕ್ಕಮಗಳೂರು: ಫಾರೆಸ್ಟ್ ಗಾರ್ಡ್ ನಿಗೂಢವಾಗಿ ನಾಪತ್ತೆ, 6 ದಿನ ಕಳೆದರೂ ಸಿಗದ ಸುಳಿವು
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನೀಲಗಿರಿ ಪ್ಲಾಂಟೇಶನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಫಾರೆಸ್ಟ್ ಗಾರ್ಡ್ ಕಳೆದ ಆರು ದಿನಗಳಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ. ಅರಣ್ಯ ಇಲಾಖೆ ಮತ್ತು ಪೊಲೀಸರು ಎಷ್ಟೇ ಹುಡುಕಾಟ ನಡೆಸಿದರೂ ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಬೈಕ್ ಮತ್ತು ಬಟ್ಟೆಗಳು ಮಾತ್ರೆ ಪತ್ತೆಯಾಗಿವೆ.

ಚಿಕ್ಕಮಗಳೂರು, ಜುಲೈ 02: ಜಿಲ್ಲೆಯ ಕಡೂರು (Kadur) ತಾಲೂಕಿನ ನೀಲಗಿರಿ ಪ್ಲಾಂಟೇಶನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಫಾರೆಸ್ಟ್ ಗಾರ್ಡ್ (forest guard) ನಿಗೂಢವಾಗಿ ನಾಪತ್ತೆಯಾಗಿರುವಂತಹ ಘಟನೆ ನಡೆದಿದೆ. ನೂರಾರು ಅರಣ್ಯ ಸಿಬ್ಬಂದಿ ಸೇರಿ ಪೊಲೀಸರು, ನೀಲಗಿರಿ ಪ್ಲಾಂಟೇಶನ್ ಮತ್ತು ಅರಣ್ಯದಲ್ಲಿ ಹುಡುಕಾಟ ನಡೆಸಿದರೂ ಕಳೆದ 6 ದಿನಗಳಿಂದ ಗಾರ್ಡ್ ಸುಳಿವು ಮಾತ್ರ ಸಿಗುತ್ತಿಲ್ಲ.
ಆರು ತಿಂಗಳ ಹಿಂದಷ್ಟೇ ವರ್ಗಾವಣೆ
ಜಿಲ್ಲೆಯ ಕಡೂರು ತಾಲೂಕಿನ ನೀಲಗಿರಿ ಪ್ಲಾಂಟೇಶನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೊಡಗು ಜಿಲ್ಲೆಯ ಕಾಲೂರು ಗ್ರಾಮದ 33 ವರ್ಷದ ಫಾರೆಸ್ಟ್ ಗಾರ್ಡ್ ಶರತ್, ಕಳೆದ 6 ದಿನಗಳಿಂದ ನಾಪತ್ತೆಯಾಗಿದ್ದಾರೆ. ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಅರಣ್ಯ ವಿಭಾಗಕ್ಕೆ ಮಂಗಳೂರಿನ ಸುಳ್ಯದಿಂದ ಕಳೆದ 6 ತಿಂಗಳ ಹಿಂದೆ ವರ್ಗಾವಣೆಯಾಗಿ ಬಂದಿದ್ದರು.
ಇದನ್ನೂ ಓದಿ: ರೈಲ್ವೆ ಪ್ರಯಾಣಿಕರೇ ಇತ್ತ ಗಮನಿಸಿ: ಈ ಮಾರ್ಗದ ರೈಲು ಸೇವೆಗಳು ಭಾಗಶಃ ರದ್ದು!
ಜೂನ್ 24ರಂದು ಸಖರಾಯಪಟ್ಟಣ ಅರಣ್ಯದ ನೀಲಗಿರಿ ಪ್ಲಾಂಟೇಶನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶರತ್ ನಾಪತ್ತೆ ಆಗಿದ್ದರು. ನೀಲಗಿರಿ ಪ್ಲಾಂಟೇಶನ್ ಸಮೀಪದ ಅರಣ್ಯದಲ್ಲಿ ಶರತ್ ಬೈಕ್ ಪತ್ತೆಯಾಗಿದ್ದರೆ, ಬೈಕ್ ಸಿಕ್ಕ ಸ್ಥಳದಿಂದ ಎರಡು ಕಿಮೀ ದೂರದಲ್ಲಿ ಬಟ್ಟೆ ಸಿಕ್ಕಿದ್ದು, ನಾಪತ್ತೆ ಬಗ್ಗೆ ನೂರಾರು ಅನುಮಾನಗಳು ಮೂಡಿವೆ. ಶರತ್ ನಾಪತ್ತೆ ಸಂಬಂಧ ಪೋಷಕರು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೈಕ್, ಬಟ್ಟೆ ಮಾತ್ರ ಪತ್ತೆ
ನಾಪತ್ತೆಯಾಗಿರುವ ಶರತ್ ಪತ್ತೆಗಾಗಿ ಅರಣ್ಯ ಇಲಾಖೆಯ ನೂರಾರು ಸಿಬ್ಬಂದಿ ಮತ್ತು ಸಖರಾಯಪಟ್ಟಣ ಪೊಲೀಸರು ಹಗಲು ರಾತ್ರಿ ಹುಡುಕಾಟ ನಡೆಸಿದ್ದಾರೆ. ಇವರೆಗೆ ಬೈಕ್, ಬಟ್ಟೆ ಮಾತ್ರ ಪತ್ತೆಯಾಗಿದ್ದು, ಶರತ್ ಸುಳಿವು ಮಾತ್ರ ಸಿಕ್ಕಿಲ್ಲ. ಬಟ್ಟೆ ಸಿಕ್ಕ ಸ್ಥಳದಲ್ಲೇ ಮೊಬೈಲ್ ಕೂಡ ಪತ್ತೆಯಾಗಿದೆ. ಡ್ರೋನ್ ಕ್ಯಾಮರಾ ಮೂಲಕ ಶರತ್ಗಾಗಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನೂ ಶರತ್ ಮೊಬೈಲ್ನಿಂದ ಕೊನೆಯದಾಗಿ ತನ್ನ ತಾಯಿಗೆ ಕರೆ ಮಾಡಿದ್ದಾರೆ.
ಕಳೆದ 6 ದಿನಗಳಿಂದ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಚಿರತೆ, ಕರಡಿ ಗಳಿರುವ ಸಖರಾಯಪಟ್ಟಣ ಅರಣ್ಯ ವಲಯದಲ್ಲಿ ಕಾಡು ಪ್ರಾಣಿಗಳ ದಾಳಿ ನಡೆದಿದೆಯಾ ಎಂಬ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: Karnataka Rains: ಕರ್ನಾಟಕದ 9 ಜಿಲ್ಲೆಗಳಲ್ಲಿ ಜುಲೈ 8ರವರೆಗೆ ಸುರಿಯಲಿದೆ ಭಾರಿ ಮಳೆ, ಯೆಲ್ಲೋ ಅಲರ್ಟ್
ಕೊಡಗಿನಿಂದ ಬಂದು ಫಾರೆಸ್ಟ್ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶರತ್ ನಿಗೂಢವಾಗಿ ಕಣ್ಮರೆ ಆಗಿರುವುದು ನೂರಾರು ಅನುಮಾನಕ್ಕೆ ಕಾರಣವಾಗಿದೆ. ಕಾರ್ಯ ನಿರ್ವಹಿಸುತ್ತಿದ್ದ ಸ್ಥಳದಿಂದ ಶರತ್ ನಾಪತ್ತೆಯಾಗಿರುವ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.








