ಪೊಲೀಸರಿಂದಲೇ ಹಿಟ್ ಆ್ಯಂಡ್ ರನ್: ಬೈಕ್ ಸವಾರ ಸಾವು, ಜೀಪ್ ಚಾಲಕ ಸಸ್ಪೆಂಡ್
ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಪೊಲೀಸ್ ಜೀಪ್ ಡಿಕ್ಕಿಯಿಂದ ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಸಿಂಗಟಗೆರೆ ಪೊಲೀಸ್ ಠಾಣೆಯ ಜೀಪ್ ಚಾಲಕ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ. ಸದ್ಯ ಚಾಲಕನನ್ನು ಅಮಾನತುಗೊಳಿಸಲಾಗಿದೆ ಮತ್ತು ಬಂಧಿಸಲಾಗಿದೆ. ಜೀಪನ್ನು ವಶಪಡಿಸಿಕೊಳ್ಳಲಾಗಿದೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಚಿಕ್ಕಮಗಳೂರು, ಮಾರ್ಚ್ 19: ಪೊಲೀಸ್ ಜೀಪ್ ಡಿಕ್ಕಿಯಿಂದ (accident) ದ್ವಿಚಕ್ರವಾಹನದ ಸವಾರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಗಟಗೆರೆ ಪೊಲೀಸ್ ಠಾಣೆಯ ಜೀಪ್ ಚಾಲಕ ಶಿವಕುಮಾರ್ನ್ನು ಅಮಾನತು (suspended) ಮಾಡಿ ಚಿಕ್ಕಮಗಳೂರು ಎಸ್‌ಪಿ ವಿಕ್ರಮ್ ಆಮ್ಟೆ ಆದೇಶ ಹೊರಡಿಸಿದ್ದಾರೆ. ಸಿಂಗಟಗೆರೆ ಠಾಣೆಗೆ ಸೇರಿದ ಜೀಪ್ ಡಿಕ್ಕಿಯಿಂದ ಗಂಗಾಧರ್(49) ಎಂಬುವವರು ಸಾವನ್ನಪ್ಪಿದ್ದರು. ಕಡೂರು ಪಟ್ಟಣದ ಮಚ್ಚೇರಿ ಗ್ರಾಮದ ಬಳಿ ಅಪಘಾತ ಸಂಭವಿಸಿತ್ತು. ಕಡೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಸದ್ಯ ಪೊಲೀಸರು ಚಾಲಕ ಶಿವಕುಮಾರ್ ಬಂಧಿಸಿ ಜೀಪ್ ವಶಕ್ಕೆ ಪಡೆದಿದ್ದಾರೆ. ಅಪಘಾತ ವೇಳೆ ಪೊಲೀಸ್ ಜೀಪ್ ನಿಲ್ಲಿಸದೇ ಶಿವಕುಮಾರ್ ಪರಾರಿಯಾಗಿದ್ದ. ಜೀಪ್ ಚಾಲಕನ ನಿರ್ಲಕ್ಷ್ಯದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.
ನಡೆದಿದ್ದೇನು?
ಬೈಕ್ಗೆ ಪೊಲೀಸ್ ಜೀಪ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದರು. ವೇಗವಾಗಿ ಬಂದು ಹಿಂಭಾಗದಿಂದ ಜೀಪ್ ಡಿಕ್ಕಿ ಹೊಡೆಯಲಾಗಿತ್ತು. ಆ ಮೂಲಕ ಪೊಲೀಸರಿಂದಲೇ ಹಿಟ್ ಆ್ಯಂಡ್ ರನ್ ಮಾಡಲಾಗಿದೆ. ಕಡೂರು ಪಟ್ಟಣದ ಮಚ್ಚೇರಿ ಗ್ರಾಮದ ಬಳಿ ಘಟನೆ ಸಂಭವಿಸಿತ್ತು. ಬೈಕ್ ಡಿಕ್ಕಿ ಹೊಡೆದು ಜೀಪ್ನಿಲ್ಲಿಸದೆ ಚಾಲಕ ಪರಾರಿಯಾಗಿದ್ದ.
ಇದನ್ನೂ ಓದಿ: ಎಣ್ಣೆಗಾಗಿ ಕ್ಯಾಶಿಯರ್ ಮೇಲೆ ಯೂತ್ ಕಾಂಗ್ರೆಸ್ ಅಧ್ಯಕ್ಷನಿಂದ ಹಲ್ಲೆ
ಘಟನೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿ ನೂರಾರು ಸ್ಥಳೀಯರು ಸೇರಿದ್ದರು. ಈ ವೇಳೆ ಮೃತ ದೇಹ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟುಹಿಡಿದಿದ್ದರು. ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದರು.
ನಾಪತ್ತೆಯಾಗಿದ್ದ 10ನೇ ತರಗತಿ ವಿದ್ಯಾರ್ಥಿ ನದಿಯಲ್ಲಿ ಶವವಾಗಿ ಪತ್ತೆ
ನಾಪತ್ತೆಯಾಗಿದ್ದ 10ನೇ ತರಗತಿ ವಿದ್ಯಾರ್ಥಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಳುವಳ್ಳಿ ಬಳಿ ಭದ್ರಾ ನದಿಯಲ್ಲಿ ನಡೆದಿದೆ. ಶ್ರೇಯಸ್ ಮೃತ ವಿದ್ಯಾರ್ಥಿ. ಕಳಸ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ನಾಪತ್ತೆಯಾಗಿದ್ದ ಚಿಕ್ಕಮಗಳೂರು ವಸತಿ ಶಾಲೆಯ ಇಬ್ಬರೂ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಪತ್ತೆ
ಕಳಸ ಪಟ್ಟಣದ ಖಾಸಗಿ ಶಾಲೆಯಲ್ಲಿ ಶ್ರೇಯಸ್ ವ್ಯಾಸಂಗ ಮಾಡುತ್ತಿದ್ದ. ಮೂಲತಃ ಹಾಸನ ಜಿಲ್ಲೆಯ ಬೇಲೂರು ನಿವಾಸಿಯಾಗಿದ್ದಾನೆ. ಕಳಸ ಪಟ್ಟಣದ ಚಿಕ್ಕಪ್ಪನ ನಿವಾಸದಲ್ಲಿ ವಾಸವಿದ್ದ. ಮಾರ್ಚ್ 16ರಂದು ನಾಪತ್ತೆಯಾಗಿದ್ದ. ಸದ್ಯ ಶ್ರೇಯಸ್ ಸಾವಿನ ಸುತ್ತ ನೂರೆಂಟು ಅನುಮಾನಗಳು ಹುಟ್ಟಿಕೊಂಡಿವೆ. ಭದ್ರಾ ನದಿಯಿಂದ ಶ್ರೇಯಸ್ ಶವವನ್ನು ಪೊಲೀಸರು ಹೊರತೆಗೆದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.