ಚಿಕ್ಕಮಗಳೂರು: ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ ಇಂದಿನಿಂದ ಉರುಸ್ ಆರಂಭ: ಆಚರಣೆಯಿಂದ ದೂರ ಉಳಿದ ಮುಸ್ಲಿಂ ಮುಖಂಡರು
ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ ಇಂದಿನಿಂದ ಉರುಸ್ ಆರಂಭವಾಗಲಿದೆ. ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುವ ಉರುಸ್ ಆಚರಣೆಯಿಂದ ಮುಸ್ಲಿಂ ಸಮುದಾಯ ದೂರ ಉಳಿಯಲು ನಿರ್ಧರಿಸಿದ್ದು, ರಾಜ್ಯ ಸರ್ಕಾರಕ್ಕೆ ವಿವಿಧ ಬೇಡಿಕೆ ಇಟ್ಟಿದ್ದಾರೆ. ಏನಿದು ಬೇಡಿಕೆ ಇಲ್ಲಿದೆ ನೋಡಿ
ಚಿಕ್ಕಮಗಳೂರು: ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ ಇಂದಿನಿಂದ ಉರುಸ್ ಆರಂಭ. ಮೂರು ದಿನಗಳ ಕಾಲ ನಡೆಯಲಿರುವ ಉರುಸ್ ಆಚರಣೆಗೆ ಇದೀಗ ರಾಜ್ಯ ಸರ್ಕಾರ ರಚನೆ ಮಾಡಿದ್ದ ದತ್ತಪೀಠ ವ್ಯವಸ್ಥಾಪನ ಮಂಡಳಿ ನೇತೃತ್ವದಲ್ಲಿ ತೀವ್ರ ವಿರೋಧ ಕೇಳಿಬಂದಿದೆ. ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುವ ಉರುಸ್ ಆಚರಣೆಯಿಂದ ಮುಸ್ಲಿಂ ಸಮುದಾಯ ದೂರ ಉಳಿಯಲು ನಿರ್ಧರಿಸಿದ್ದಾರೆ. ಇನ್ನು ಜಿಲ್ಲಾಡಳಿತ ಕರೆದಿದ್ದ ಸಭೆಗೆ ಮುಸ್ಲಿಂ ಸಮುದಾಯದ ಮುಖಂಡರು ಗೈರಾಗಿದ್ದು, ರಾಜ್ಯ ಸರ್ಕಾರಕ್ಕೆ ವಿವಿಧ ಬೇಡಿಕೆ ಇಟ್ಟಿದ್ದಾರೆ.
ರಾಜ್ಯ ಸರ್ಕಾರಕ್ಕೆ ಮುಸ್ಲಿಂ ಸಮುದಾಯ ಇಟ್ಟ ಬೇಡಿಕೆಗಳಿವು
1)ಅರ್ಚಕ ನೇಮಕಾತಿ ಹಾಗೂ ವ್ಯವಸ್ಥಾಪನ ಮಂಡಳಿಯನ್ನ ರದ್ದು ಮಾಡಬೇಕು
2)ಗೋರಿಗಳಿಗೆ ಹಸಿರು ಬಟ್ಟೆ ಹೊದಿಸಿ ಪೂಜೆ , ನಮಾಜ್ ಮಾಡಲು ಅವಕಾಶ ನೀಡಬೇಕು
ಈ ಮೇಲಿನ ಬೇಡಿಕೆಗಳನ್ನ ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ವಿವಾದಿತ ಸ್ಥಳದಲ್ಲಿಯೇ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಲು ಸಜ್ಜಾಗಿದೆ.
ಇದನ್ನೂ ಓದಿ:ಚಿಕ್ಕಮಗಳೂರು: ಕಾಡ್ಗಿಚ್ಚಿಗೆ ಧಗ-ಧಗ ಹೊತ್ತಿ ಉರಿದ ಅರಣ್ಯ ಇಲಾಖೆ ಸಿಬ್ಬಂದಿಯ ಮೂರು ಬೈಕ್ಗಳು!
ಏನಿದು ವಿವಾದ
ಬಾಬಾಬುಡನ್ ಗಿರಿ ಅಥವಾ ಶ್ರೀಗುರುದತ್ತಾತ್ರೇಯ ಯಾರಿಗೆ ಸೇರಿದ್ದು ಎಂಬ ಬಗ್ಗೆ ವಾದ ವಿವಾದಗಳು ನಡೆಯುತ್ತಲೇ ಇವೆ. ಶ್ರೀ ಗುರು ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎನ್ನುವುದು ಮೂಲ ಸರ್ಕಾರಿ ದಾಖಲಾತಿಗಳಲ್ಲಿ ಇರುವ ಹೆಸರಿದೆ. ಆದರೆ ಈ ಸ್ಥಳವನ್ನು ಬಾಬಾ ಬುಡನ್ ಗಿರಿ ಎಂದೂ ಮತ್ತೆ ಕೆಲವರು ಇನಾಂ ದತ್ತಾತ್ರೇಯ ಪೀಠ ಎಂದೂ ಕರೆಯುತ್ತಾರೆ. ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದ್ದ ಈ ಧಾರ್ಮಿಕ ಕೇಂದ್ರದ ನಮ್ಮದು ಎಂದು ಎರಡು ಧರ್ಮದವರು ನ್ಯಾಯಾಲಯದಲ್ಲಿ ವಾದ-ಪ್ರತಿವಾದ ಮಂಡಿಸುತ್ತಿದ್ದಾರೆ.
ಹೆಸರಿನ ವಿವಾದ
ಶ್ರೀ ಗುರು ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎನ್ನುವುದು ಮೂಲ ಸರ್ಕಾರಿ ದಾಖಲಾತಿಗಳಲ್ಲಿ ಇರುವ ಹೆಸರು. ಆ ಸ್ಥಳವನ್ನು ಇನಾಂ ದತ್ತಾತ್ರೇಯ ಪೀಠ, (ಐಡಿ ಪೀಠ) ಎಂದೂ ಹೆಸರಿಸುತ್ತಾರೆ. ಆದರೆ ಕೆಲವೆಡೆ ‘ಬಾಬಾಬುಡನ್ಗಿರಿ’ ಎಂದೂ ಇನ್ನೂ ಕೆಲವೆಡೆ ದತ್ತಪೀಠ ಎಂದೂ ಕರೆಯುತ್ತಿದ್ದಾರೆ. ಈ ಹೆಸರಿನ ವಿಚಾರ ಸಣ್ಣದಲ್ಲ. ಯಾವ ಹೆಸರಿನಿಂದ ಕರೆಯಬೇಕು ಎಂಬ ಬಗ್ಗೆ ಹಿಂದೂ-ಮುಸ್ಲಿಂ ಧರ್ಮದ ಅನುಯಾಯಿಗಳ ನಡುವೆ ಹಲವು ದಶಕಗಳಿಂದಲೂ ನಿರಂತರವಾಗಿ ಹೋರಾಟ ನಡೆಯುತ್ತಲೇ ಇದೆ. ಹಿಂದೂ-ಮುಸ್ಲಿಂ ಭಾವೈಕ್ಯತಾ ಕೇಂದ್ರವಾಗಿರುವ ಈ ಸ್ಥಳದ ಉಮೇದುವಾರಿಕೆ ನಮ್ಮದು ಎಂದು ಎರಡು ಧರ್ಮದವರು ನ್ಯಾಯಾಲಯದಲ್ಲಿ ವಾದ-ಪ್ರತಿವಾದ ಮಂಡಿಸುತ್ತಲೇ ಇದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು: ಮಸೀದಿಗಳಲ್ಲಿ ಧ್ವನಿವರ್ಧಕಕ್ಕೆ ಅನುಮತಿ ನೀಡುವಂತೆ ಸಿಟಿ ರವಿ ಮೊರೆ ಹೋದ ಮುಸ್ಲಿಂ ಮುಖಂಡರು
ಬಾಬಾಬುಡನ್ಗಿರಿ ಮತ್ತು ರಾಜಕಾರಣ
ದತ್ತಪೀಠಕ್ಕೆ ಹಿಂದೂ ಮತ್ತು ಮುಸ್ಲಿಮರು ನೂರಾರು ವರ್ಷಗಳಿಂದ ನಡೆದುಕೊಳ್ಳುತ್ತಿದ್ದಾರೆ. ಕ್ಷೇತ್ರದಲ್ಲಿ ಮುಸ್ಲಿಮರ ಪ್ರಭಾವ ಹೆಚ್ಚಾಗುತ್ತಿದೆ ಎಂದು ಆರೋಪಿಸಿದ ಬಿಜೆಪಿ 1998ರಲ್ಲಿ ದತ್ತ ಮಾಲಾ ಅಭಿಯಾನ ಆರಂಭಿಸಿದ ನಂತರ ಕ್ಷೇತ್ರವು ದೇಶವ್ಯಾಪಿ ಗಮನ ಸೆಳೆಯಿತು. ಸಂಘ ಪರಿವಾರದ ಪ್ರಯತ್ನಗಳಿಗೆ ಪ್ರತಿಯಾಗಿ ಕೋಮು ಸೌಹಾರ್ದ ವೇದಿಕೆಯೂ ಚಿಕ್ಕಮಗಳೂರಿನಲ್ಲಿ ಸಮಾವೇಶಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆಯುತ್ತಿತ್ತು. ಕ್ಷೇತ್ರದಲ್ಲಿದ್ದ ಮುಜಾವವರು ಎರಡೂ ಪದ್ಧತಿಗಳ ಪ್ರಕಾರ ಪೂಜೆ ಮಾಡಿಕೊಡುತ್ತಿದ್ದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:18 am, Wed, 8 March 23