ತಮ್ಮ ಗ್ರಾಮಕ್ಕೆ ಆ ಇಬ್ಬರು ಪ್ರಾಮಾಣಿಕ ಅಧಿಕಾರಿಗಳ ಹೆಸರಿಟ್ಟು ಕೃತಜ್ಞತೆ ಸೂಚಿಸಿದ ಗುಪ್ತ ಶೆಟ್ಟಿ ಹಳ್ಳಿ ಗ್ರಾಮಸ್ಥರು!
Gupta Shetty halli: ನಿಜಕ್ಕೂ... ಆ ಇಬ್ಬರು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳು ಜನರ ಮನಸ್ಸಿನಲ್ಲಿ ಇಂದಿಗೂ ಕೂಡ ಇದ್ದಾರೆ ಅಂದ್ರೆ ಅವರ ಪ್ರಾಮಾಣಿಕತೆಗೆ ಹಿಡಿದ ಕೈಗನ್ನಡಿ ಅಂದ್ರೆ ಅತಿಶಯೋಕ್ತಿಯಲ್ಲ.
ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ಏನಾದ್ರೂ ಕಚೇರಿ ಕೆಲಸಗಳನ್ನು ಮಾಡಿಸಿಕೊಳ್ಳಬೇಕು ಅಂತಾ ಯೋಚಿಸಿದ್ರೆ, ಕಚೇರಿಗಳಿಗೆ ಹೋಗಲು ಹಿಂದೇಟು ಹಾಕುತ್ತಾರೆ. ಯಾಕಂದ್ರೆ ಅಧಿಕಾರಿಗಳ ಸಹವಾಸವೇ ಸಾಕಪ್ಪ ಸಾಕು ಅಂತ ಭ್ರಮನಿರಸನಕ್ಕೆ ಒಳಗಾಗುತ್ತಾರೆ. ನಾಳೆ ಬನ್ನಿ , ನಾಡಿದ್ದು ಬನ್ನಿ, ಎಂಟು ದಿನ ಬಿಟ್ಟು ಬನ್ನಿ.. ಹೀಗೆ ಕಚೇರಿಗೆ ಅಲೆಸಿ ಅಲೆಸಿ ಜನಸಾಮಾನ್ಯರನ್ನ ಹೈರಾಣಾಗಿಸುತ್ತಾರೆ. ಅಲ್ಲದೇ ಕಾಂಚನವಿಲ್ಲದೆಯೇ ಕೆಲಸ ಆಗಲ್ಲ ಅನ್ನೋದನ್ನ ಬಹುತೇಕ ಅಧಿಕಾರಿಗಳು ಜನರಿಗೆ ಚೆನ್ನಾಗಿಯೇ ಅರ್ಥ ಮಾಡಿಸಿದ್ದಾರೆ. ಆದ್ರೆ ಕಾಫಿನಾಡಿನಲ್ಲಿದ್ದ ಆ ಇಬ್ಬರು ಅಧಿಕಾರಿಗಳು ಇದಕ್ಕೆ ತದ್ವಿರುದ್ಧ ಆಗಿದ್ರು.. ಅವರ ಪ್ರಾಮಾಣಿಕತೆಗೆ ಮೆಚ್ಚಿ ಜನರೇ ಅವರಿಬ್ಬರ ಹೆಸರನ್ನ ತಮ್ಮ ಗ್ರಾಮದ ಹೆಸರನ್ನಾಗಿ ಮಾಡಿಕೊಂಡರು. ಅಷ್ಟಕ್ಕೂ ಯಾರು ಅಧಿಕಾರಿಗಳು..? ಅವರು ಮಾಡಿದ ಜನ ಮೆಚ್ಚಿದ ಕೆಲಸವಾದರೂ ಏನು ಅಂತೀರಾ.?
ಅದು 2006ನೇ ಇಸವಿ. ಅರಣ್ಯ ಭೂಮಿ ಒತ್ತುವರಿ ಆರೋಪದ ಹಿನ್ನೆಲೆ 32 ಕುಟುಂಬಗಳು ಬೀದಿಗೆ ಬಿದ್ದಿದ್ವು. ಅತ್ತ ವಾಸಿಸಲು ಮನೆ ಇರಲಿಲ್ಲ. ಇತ್ತ ಬೆಳೆ ಬೆಳೆಯೋಕೆ ಭೂಮಿಯೂ ಇರಲಿಲ್ಲ. ಬಡಕುಟುಂಬಗಳು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಬದುಕೇ ಭಾರವಾದ ಇಂತಹ ಸಂದರ್ಭದಲ್ಲಿ ಬಡವರ ಕಣ್ಣೀರು ಒರೆಸಿದ್ದು ಮಾತ್ರ ಆ ಇಬ್ಬರು ಪ್ರಾಮಾಣಿಕ ದಕ್ಷ ಐಎಎಸ್ (IAS), ಐಪಿಎಸ್ (IPS) ಅಧಿಕಾರಿಗಳು. ಮಲೆನಾಡಿನ ಈ ಗ್ರಾಮದ ಜನರಲ್ಲಿ ಅವರ ಹೆಸರು ಇಂದಿಗೂ ಚಿರಸ್ಥಾಯಿ. ಅಂದಾಗೆ ಇದು ಗುಪ್ತಶೆಟ್ಟಿಹಳ್ಳಿ. ಚಿಕ್ಕಮಗಳೂರು (chikamagalur) ತಾಲೂಕಿನ ಆಲ್ದೂರು ಸಮೀಪದ ಗುಪ್ತ ಶೆಟ್ಟಿ ಹಳ್ಳಿ (Gupta Shetty halli) 2006ರ ಬಳಿಕ ನಿರ್ಮಾಣವಾದ ಗ್ರಾಮ.
2006ರಲ್ಲಿ ಜಮೀನು ಕಳೆದುಕೊಂಡು ಬೀದಿಗೆ ಬಿದ್ದಿದ್ದ ಜನರ ನೋವಿಗೆ ಸ್ಪಂದಿಸಿದ ಅಧಿಕಾರಿಗಳು ಎಸ್ಪಿ ಮಧುಕರ್ ಶೆಟ್ಟಿ (IPS officer K Madhukar Shetty) ಹಾಗೂ ಡಿಸಿ ಹರ್ಷ ಗುಪ್ತ (IAS officer Harsh Gupta). ಮೂಡಿಗೆರೆಯ ಸಾರಗೋಡು ಮೀಸಲು ಅರಣ್ಯ ಭೂಮಿ ಒತ್ತುವರಿ ಆರೋಪದ ಹಿನ್ನೆಲೆ ಸುಮಾರು 32 ಕುಟುಂಬಗಳನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸಿತು. ಆ ಸಂದರ್ಭ ಅವರ ಹೆಗಲಿಗೆ ಹೆಗಲು ಕೊಟ್ಟು ನಡೆದಿದ್ದು ಈ ಇಬ್ಬರು ಅಧಿಕಾರಿಗಳು. ಮಧುಕರ್ ಶೆಟ್ಟಿ ಹಾಗೂ ಹರ್ಷ ಗುಪ್ತ, ಭೂಮಿ ಕಳೆದುಕೊಂಡ ನಿರಾಶ್ರಿತರಿಗೆ ಚಿಕ್ಕಮಗಳೂರು ತಾಲೂಕಿನಲ್ಲಿ ಒಂದು ಜಾಗವನ್ನು ಗುರುತಿಸಿ ಒಂದು ಕುಟುಂಬಕ್ಕೆ ತಲಾ 2 ಎಕರೆ ಭೂಮಿಯಂತೆ ಮನೆ ಕಟ್ಟಿಕೊಳ್ಳಲು 4 ಗುಂಟೆ ಭೂಮಿ ನೀಡಿದರ ಪರಿಣಾಮ ಅವರ ಹೆಸರನ್ನು ಇಂದಿಗೂ ಅಜರಾಮರವಾಗುವಂತೆ ಆ ಗ್ರಾಮಕ್ಕೆ ಇಬ್ಬರ ಹೆಸರನ್ನು ಸೇರಿಸಿ ಗುಪ್ತಶೆಟ್ಟಿಹಳ್ಳಿ ಎಂಬ ಹೆಸರನಿಟ್ಟಿದ್ರು ಆ ಗ್ರಾಮಸ್ಥರು.
ಇನ್ನು ಆ ಕಾಲಕ್ಕೆ ಪೊಲೀಸರೆಂದರೆ ಭಯಪಡುತ್ತಿದ್ದ ಜನರಿಗೆ ನಾನು ಕೂಡ ಓರ್ವ ಜನಸ್ನೇಹಿ ಅಧಿಕಾರಿ ಎಂಬುದನ್ನು ತೋರಿಸಿದ ಸಹೃದಯಿ ಅಧಿಕಾರಿ ಮಧುಕರ್ ಶೆಟ್ಟಿ. ಗ್ರಾಮಕ್ಕೆ ಬೇಕಾದ ವಿದ್ಯುತ್ ಕುಡಿಯುವ ನೀರು ಒದಗಿಸಿ, ಬದುಕು ಕಟ್ಟಿಕೊಳ್ಳಲು ಮಧುಕರ್ ಶೆಟ್ಟಿ ಆಸರೆಯಾಗಿದ್ರು. ಆದ್ರೆ ಕೆಲವು ವರ್ಷಗಳ ಹಿಂದೆ ಮಧುಕರ್ ಶೆಟ್ಟಿ ಅವರು ಅಕಾಲಿಕ ಮರಣ ಹೊಂದಿದ್ದಾಗ ಇಡೀ ಊರೇ ಕಂಬನಿ ಮಿಡಿದಿತ್ತು.
ಅವರ ನಿಧನದ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ತಮಗೆ ಸಹಾಯ ಮಾಡಿದ್ದ ಅಧಿಕಾರಿಯನ್ನು ನೆನೆದು ಇಡಿ ಗ್ರಾಮಸ್ಥರ ಕಣ್ಣಲ್ಲಿ ನೋವು ತುಂಬಿತ್ತು. ಅಗಲಿದ ತಮ್ಮ ನಾಯಕನಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ನಾವು ಎಂದಿಗೂ ನಿಮ್ಮನ್ನು ಮರೆಯುವುದಿಲ್ಲ ಎಂಬ ಸಂದೇಶವನ್ನು ಗ್ರಾಮಸ್ಥರು ರವಾನಿಸಿದ್ರು. ಅವರ ಕುಟುಂಬಕ್ಕೆ ಅವರ ಸಾವಿನ ನೋವನ್ನ ಮರೆಯುವ ಶಕ್ತಿಯನ್ನ ದೇವರ ನೀಡಲಿ ಎಂದು ಪ್ರಾರ್ಥಿಸಿಕೊಂಡು, ಅಂತಹಾ ಅಧಿಕಾರಿ ಮತ್ತೆ ಹುಟ್ಟಿ ಬರಲಿ ಎಂದು ಭಗವಂತನಲ್ಲಿ ಬೇಡಿಕೊಂಡಿದ್ರು.
ಜನಪ್ರತಿನಿಧಿಗಳು, ರಾಜಕೀಯ ಮುಖಂಡರೇ ತಲೆ ಕೆಡಿಸಿಕೊಳ್ಳದ ವಿಚಾರದಲ್ಲಿ ಆ ಇಬ್ಬರು ಅಧಿಕಾರಿಗಳು 32 ಕುಟುಂಬಗಳಿಗೆ ಹೊಸ ಜೀವನ ನೀಡಿದ್ದರು. ಆದರೆ ಅಧಿಕಾರಿಗಳು ಒಂದೇ ಜಿಲ್ಲೆಯಲ್ಲಿ ಶಾಶ್ವತವಾಗಿ ಕೆಲಸ ಮಾಡಲಾರರು. ವರ್ಗಾವಣೆ ಅನ್ನೋದು ಅವರ ಬೆನ್ನ ಹಿಂದೆ ಸದಾ ಗಿರಕಿ ಹೊಡೆಯುತ್ತಲೇ ಇರುತ್ತದೆ. ಆದ್ರೂ ತಾವಿದ್ದ ಅಲ್ಪಸಮಯದಲ್ಲೇ ಜನಾನುರಾಗಿ ಕೆಲಸ ಮಾಡಿ ಕಾಫಿನಾಡಿನ ಜನರ ಮನಸ್ಸಿನಲ್ಲಿ ಇಬ್ಬರು ಶಾಶ್ವತವಾಗಿ ಸ್ಥಾನ ಪಡೆದಿದ್ದಾರೆ.
ಒಟ್ಟಾರೆ ಆ ಇಬ್ಬರು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳು ಜನರ ಮನಸ್ಸಿನಲ್ಲಿ ಇಂದಿಗೂ ಕೂಡ ಇದ್ದಾರೆ ಅಂದ್ರೆ ಅವರ ಪ್ರಾಮಾಣಿಕತೆಗೆ ಹಿಡಿದ ಕೈಗನ್ನಡಿ ಅಂದ್ರೆ ಅತಿಶಯೋಕ್ತಿಯಲ್ಲ. (ವರದಿ: ಪ್ರಶಾಂತ್, ಟಿವಿ 9, ಚಿಕ್ಕಮಗಳೂರು)