Chikkamagaluru: ಕಾಫಿನಾಡಿನಲ್ಲಿ ಕಮಲ ಅರಳುತ್ತಾ? ಕಾಂಗ್ರೆಸ್ ಬೀಗುತ್ತಾ? ಜೆಡಿಎಸ್ ಗೈರಿನಿಂದ ಹೆಚ್ಚಾಯ್ತು ರೋಚಕತೆ!
Chikkamagaluru Legislative Council Election: ತಮ್ಮ ಮೊದಲ ಪ್ರಯತ್ನದಲ್ಲೇ ಗೆದ್ದು ಬೀಗಿದ ಪ್ರಾಣೇಶ್ಗೆ ಈ ಚುನಾವಣೆ ಪ್ರತಿಷ್ಠೆ ಪ್ರಶ್ನೆಯಾಗಿದೆ. ಎಂಎಲ್ಸಿ ಆಗಿ ಪ್ರಾಣೇಶ್ ಮೇಲ್ಮನೆ ಪ್ರವೇಶಿಸಿದ ಸಂದರ್ಭದಲ್ಲಿ ಪರಿಷತ್ ಉಪಸಭಾಪತಿಯಾಗಿದ್ದ ಎಸ್.ಎಲ್ ಧರ್ಮೇಗೌಡ ಆತ್ಮಹತ್ಯೆಗೆ ಶರಣಾಗಿದ್ರು. ಹೀಗಾಗಿ ಪ್ರತಿಷ್ಠಿತ ವಿಧಾನ ಪರಿಷತ್ ಉಪಸಭಾಪತಿ ಸ್ಥಾನವನ್ನ ಮೊದಲ ಬಾರಿಗೆ ಮೇಲ್ಮನೆ ಪ್ರವೇಶಿಸಿದ್ರೂ ಎಂ.ಕೆ ಪ್ರಾಣೇಶ್ ಅಲಂಕರಿಸುವಂತಾಯ್ತು. ಸದ್ಯ ಎರಡನೇ ಬಾರಿಯೂ ಚಿಕ್ಕಮಗಳೂರು ಬಿಜೆಪಿ ಟಿಕೆಟ್ ಎಂ.ಕೆ ಪ್ರಾಣೇಶ್ ಪಾಲಾಗಿದೆ.
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಈ ಬಾರಿ ವಿಧಾನ ಪರಿಷತ್ ಚುನಾವಣೆ ಹಿಂದೆಂದಿಗಿಂತಲೂ ಭಾರೀ ಕುತೂಹಲ ಮೂಡಿಸಿದೆ. ಕಳೆದ ಬಾರಿಯ ಎದುರಾಳಿಗಳೇ ಮತ್ತೆ ಅಖಾಡದಲ್ಲಿ ಮುಖಾಮುಖಿಯಾಗುತ್ತಿದ್ದಾರೆ. 2016ರಲ್ಲಿ ಬಿಜೆಪಿಯಿಂದ ಗೆದ್ದು ಪರಿಷತ್ ಪ್ರವೇಶಿಸಿದ್ದ ಎಂ.ಕೆ ಪ್ರಾಣೇಶ್, ಈ ಸಲವೂ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನೂ ಕೈ ಅಭ್ಯರ್ಥಿಯಾಗಿ ಕಳೆದ ಬಾರಿ ಪರಾಭವಗೊಂಡಿದ್ದ ಎ.ವಿ ಗಾಯತ್ರಿ ಶಾಂತೇಗೌಡ ಈ ಸಲವೂ ಗೆದ್ದೇ ತೀರುವ ಉತ್ಸಾಹದಲ್ಲಿ ಕದನಕ್ಕೆ ಧುಮುಕಿದ್ದಾರೆ. ಕಳೆದ ಬಾರಿ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಜೆಡಿಎಸ್ ಈ ಸಲ ಅಖಾಡಕ್ಕೆ ಇಳಿಯದಿರೋದು ನೇರವಾಗಿ ಕಾಂಗ್ರೆಸ್ಗೆ ಪ್ಲಸ್ ಆಗಿದೆ. 2016ರಲ್ಲಿ 315 ಮತಗಳ ಅಂತರದಿಂದ ಎಂ.ಕೆ ಪ್ರಾಣೇಶ್, ಕೈ ಅಭ್ಯರ್ಥಿಯನ್ನ ಸೋಲಿಸಿದ್ದರು. ಆ ವೇಳೆ ಮೂರನೇ ಸ್ಥಾನದಲ್ಲಿದ್ದ ಜೆಡಿಎಸ್ ಅಭ್ಯರ್ಥಿ 425 ಮತಗಳನ್ನ ಪಡೆದದ್ದು, ಗಾಯತ್ರಿ ಶಾಂತೇಗೌಡರ ಸೋಲಿಗೆ ಕಾರಣವಾಗಿತ್ತು ಅನ್ನೋದನ್ನ ಫಲಿತಾಂಶವೇ ತೋರಿಸಿತ್ತು ( Chikkamagaluru Legislative Council Election).
ವಿಧಾನಪರಿಷತ್ ಉಪ ಸಭಾಪತಿಯಾಗಿ ಕುರ್ಚಿಗೇರಿದ ಪ್ರಾಣೇಶ್ಗೆ ಪ್ರತಿಷ್ಠೆ ಪ್ರಶ್ನೆ.!
ತಮ್ಮ ಮೊದಲ ಪ್ರಯತ್ನದಲ್ಲೇ ಗೆದ್ದು ಬೀಗಿದ ಪ್ರಾಣೇಶ್ಗೆ ಈ ಚುನಾವಣೆ ಪ್ರತಿಷ್ಠೆ ಪ್ರಶ್ನೆಯಾಗಿದೆ. ಎಂಎಲ್ಸಿ ಆಗಿ ಪ್ರಾಣೇಶ್ ಮೇಲ್ಮನೆ ಪ್ರವೇಶಿಸಿದ ಸಂದರ್ಭದಲ್ಲಿ ಪರಿಷತ್ ಉಪಸಭಾಪತಿಯಾಗಿದ್ದ ಎಸ್.ಎಲ್ ಧರ್ಮೇಗೌಡ ಆತ್ಮಹತ್ಯೆಗೆ ಶರಣಾಗಿದ್ರು. ಹೀಗಾಗಿ ಪ್ರತಿಷ್ಠಿತ ವಿಧಾನ ಪರಿಷತ್ ಉಪಸಭಾಪತಿ ಸ್ಥಾನವನ್ನ ಮೊದಲ ಬಾರಿಗೇ ಮೇಲ್ಮನೆ ಪ್ರವೇಶಿಸಿದ್ರೂ ಎಂ.ಕೆ ಪ್ರಾಣೇಶ್ ಅಲಂಕರಿಸುವಂತಾಯ್ತು.
ಸದ್ಯ ಎರಡನೇ ಬಾರಿಯೂ ಚಿಕ್ಕಮಗಳೂರು ಬಿಜೆಪಿ ಟಿಕೆಟ್ ಎಂ.ಕೆ ಪ್ರಾಣೇಶ್ ಪಾಲಾಗಿದ್ದು, ಈಗಾಗಲೇ ಉಪಸಭಾಪತಿ ಪಟ್ಟದಂತಹ ಉನ್ನತ ಸ್ಥಾನವನ್ನ ಏರಿರೋದ್ರಿಂದ ಈ ಚುನಾವಣೆ ಪ್ರಾಣೇಶ್ಗೆ ಪ್ರತಿಷ್ಠೆಯಾಗಿದೆ. ಜಿಲ್ಲೆಯ ಕಡೂರು, ತರೀಕೆರೆ ತಾಲೂಕಿಗೆ ಆಗಮಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ ಪ್ರಚಾರ ಮಾಡಿದ್ದಾರೆ.
ನಾಲ್ವರು ಶಾಸಕರು, ಸಂಸದೆ, ಗ್ರಾಮ ಪಂಚಾಯ್ತಿಯಲ್ಲೂ ಬಿಜೆಪಿ ಪ್ರಾಬಲ್ಯ..!
ಶೃಂಗೇರಿ ಕ್ಷೇತ್ರವನ್ನ ಹೊರತುಪಡಿಸಿ ಉಳಿದ ಮೂಡಿಗೆರೆ, ಚಿಕ್ಕಮಗಳೂರು, ಕಡೂರು, ತರೀಕೆರೆ ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ ಶಾಸಕರಿದ್ದಾರೆ. ಅಲ್ಲದೇ ಕೃಷಿ ಮಂತ್ರಿ ಆಗಿರುವ ಶೋಭಾ ಕರಂದ್ಲಾಜೆ ಕೂಡ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ. ಇನ್ನೂ ಜಿಲ್ಲೆಯ ಒಟ್ಟು 2333 ಗ್ರಾಮ ಪಂಚಾಯ್ತಿ ಸದಸ್ಯರಲ್ಲಿ ಹೆಚ್ಚಿನವರು ಕಮಲ ಪಡೆಯ ಸೇನಾನಿಗಳೇ ಅನ್ನೋದು ಬಿಜೆಪಿಯ ವಿಶ್ವಾಸ ಹೆಚ್ಚಾಗಲು ಕಾರಣವಾಗಿದೆ. ಅಲ್ಲದೇ ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ ಶಾಸಕರೇ ಇರೋದರಿಂದ ಎಂ.ಕೆ ಪ್ರಾಣೇಶ್ ಗೆಲುವು ಸುಲಭವಾಗುತ್ತೆ ಅನ್ನೋದು ಬಿಜೆಪಿಯ ಮತ್ತೊಂದು ಲೆಕ್ಕಾಚಾರ.
2016ರ ಸೋಲಿನ ಅನುಕಂಪ ಕೈ ಅಭ್ಯರ್ಥಿಯನ್ನ ಗೆಲ್ಲಿಸುವುದೇ..?
ಈ ಬಾರಿಯೂ ಚುನಾವಣಾ ಅಖಾಡದಲ್ಲಿ ಪರಸ್ಪರ ಎದುರಾಗ್ತಿರೋದು ಎಂ.ಕೆ ಪ್ರಾಣೇಶ್-ಗಾಯತ್ರಿ ಶಾಂತೇಗೌಡ. ಕಳೆದ ಬಾರಿ ಪ್ರಾಣೇಶ್ ವಿರುದ್ದ 315 ಮತಗಳಿಂದ ಗಾಯತ್ರಿ ಶಾಂತೇಗೌಡ ಸೋಲು ಅನುಭವಿಸಿದ್ದರು. ಆದ್ರೆ ಈ ಬಾರಿ ಗಾಯತ್ರಿ ಶಾಂತೇಗೌಡರ ಗೆಲ್ಲುವ ಛಲಕ್ಕೆ ಕಾಂಗ್ರೆಸ್ ಮುಖಂಡರು ಕೈ ಜೋಡಿಸಿದ್ದಾರೆ. ಕಳೆದ ಡಿಸೆಂಬರ್ 3ರಂದು ಚಿಕ್ಕಮಗಳೂರು ನಗರದಲ್ಲಿ ಗ್ರಾಮ ಸ್ವರಾಜ್ ಸಮಾವೇಶವನ್ನ ಹಮ್ಮಿಕೊಂಡಿದ್ದ ಕಾಂಗ್ರೆಸ್ ತನ್ನ ಶಕ್ತಿ ಪ್ರದರ್ಶನವನ್ನ ತೋರಿಸಿದೆ.
ಈ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಇಡೀ ರಾಜ್ಯದಲ್ಲೇ ಮಹಿಳಾ ಅಭ್ಯರ್ಥಿಗೆ ಟಿಕೇಟ್ ನೀಡಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷದ್ದು ಅಂತೇಳುತ್ತಾ ತಮ್ಮ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ. ಈ ಸಮಾವೇಶದಲ್ಲಿ ಕಣ್ಣೀರಿಡುತ್ತಲೇ ಸೆರಗೊಡ್ಡಿ ಮತ ಭಿಕ್ಷೆ ಬೇಡಿದ ಗಾಯತ್ರಿ ಶಾಂತೇಗೌಡರನ್ನ ಮತದಾರರು ಕೈ ಹಿಡಿಯುತ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.
ಕಣದಿಂದ ಜೆಡಿಎಸ್ ದೂರ ಉಳಿದಿರೋದು ಕೈಗೆ ಲಾಭವಾಗುತ್ತಾ..?
ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್ನಿಂದ ರಂಜನ್ ಅಜಿತ್ ಕುಮಾರ್ ಸ್ಫರ್ಧೆ ಮಾಡಿದ್ರು. ಮೂರನೇ ಸ್ಥಾನಕ್ಕೆ ತೃಪ್ತಿಪಟ್ರೂ 2016ರಲ್ಲಿ ಜೆಡಿಎಸ್ ಅಭ್ಯರ್ಥಿ ಸ್ಪರ್ಧೆ, ಪರೋಕ್ಷವಾಗಿ ಕೈ ಅಭ್ಯರ್ಥಿ ಸೋಲಿಗೆ ಕಾರಣವಾಗಿತ್ತು ಅಂತಾಲೇ ಲೆಕ್ಕಾಚಾರ ಹಾಕಲಾಗಿತ್ತು. ಯಾಕಂದ್ರೆ ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಅಮೂಲ್ಯ 425 ಮತಗಳನ್ನ ಪಡೆದಿದ್ರು. ಈ ವೇಳೆ ಕೈ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ 923 ಮತಗಳನ್ನ ಪಡೆದುಕೊಂಡು ಕಮಲ ಅಭ್ಯರ್ಥಿ ಪ್ರಾಣೇಶ್ ವಿರುದ್ಧ ಸೋತಿದ್ದು 315 ಮತಗಳಿಂದ ಅನ್ನೋದು ಗಮನಾರ್ಹ. ಈ ಬಾರಿ ಜೆಡಿಎಸ್ ಸ್ಪರ್ಧೆಯನ್ನೇ ಮಾಡಿಲ್ಲ, ಪರಿಷತ್ ಚುನಾವಣೆಗೆ ತೆನೆಹೊತ್ತ ಮಹಿಳೆ ಪಕ್ಷದ ಅಭ್ಯರ್ಥಿ ಕಣದಲ್ಲಿ ಇಲ್ಲದೇ ಇರೋದು ಕಾಂಗ್ರೆಸ್ಗೆ ಪ್ಲಸ್ ಅಂತಾ ಹೇಳಲಾಗುತ್ತಿದೆ.
ಜೆಡಿಎಸ್ನಿಂದ ಕಾಂಗ್ರೆಸ್ಗೆ ಸೇರ್ಪಡೆ ಪರ್ವ..! ಕೈಗೆ ಜೆಡಿಎಸ್ ಬೆಂಬಲ!
ಒಂದೆಡೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಸ್ಪರ್ಧೆ ಮಾಡದೇ ಇರೋದು ಕಾಂಗ್ರೆಸ್ಗೆ ಅನುಕೂಲಕರ ಅಂತಾ ಬಣ್ಣಿಸಲಾಗ್ತಿದೆ. ಈ ನಡುವೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್ ದೇವರಾಜ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಅಲ್ಲದೇ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಯಾಗಿದ್ದ ಬಿ.ಹೆಚ್ ಹರೀಶ್ ಕೂಡ ಕೈಯನ್ನ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ.
ಈ ಬೆಳವಣಿಗೆಯ ಜೊತೆ ಜೊತೆಗೆ ತರೀಕೆರೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ 2018ರಲ್ಲಿ ಸ್ಪರ್ಧಿಸಿ 30 ಸಾವಿರಕ್ಕೂ ಅಧಿಕ ಮತಗಳನ್ನ ಪಡೆದಿದ್ದ ಹೆಚ್.ಎಂ ಗೋಪಿಕೃಷ್ಣ ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ನಡುವೆ ರಾಜ್ಯದಲ್ಲಿ ಜೆಡಿಎಸ್ ಬೆಂಬಲ ಬಿಜೆಪಿಗೋ, ಕಾಂಗ್ರೆಸ್ ಗೋ ಅನ್ನೋದು ಸ್ಪಷ್ಟವಾಗಿಲ್ಲ. ಆದ್ರೆ ಕಾಫಿನಾಡಿನ ಮಟ್ಟಿಗೆ ಜೆಡಿಎಸ್ ಬೆಂಬಲ ಕಾಂಗ್ರೆಸ್ಗೆ ಅನ್ನೋದು ಖಾತ್ರಿಯಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಜೆಡಿಎಸ್ ನಾಯಕ ವೈ ಎಸ್ ವಿ ದತ್ತಾ, ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಜೆಡಿಎಸ್ ಸಂಪೂರ್ಣ ಬೆಂಬಲ ನೀಡಲಿದೆ ಅಂತಾ ಹೇಳಿದ್ದಾರೆ.
ಕಮಲ-ಕೈ ಕಲಿಗಳ ನಡುವೆ ಟೈಟ್ ಫೈಟ್..!
ಜೆಡಿಎಸ್ ಅಭ್ಯರ್ಥಿ ಅಖಾಡದಲ್ಲಿ ಇಲ್ಲದೇ ಇರೋದು, ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರ್ಪಡೆಗೊಂಡಿರೋದು, ಜೆಡಿಎಸ್ ಕಾಂಗ್ರೆಸ್ಗೆ ಬೆಂಬಲ ನೀಡಿರೋದು, ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕೈ ಮುಖಂಡರೆಲ್ಲರೂ ಒಗ್ಗಟಾಗಿರೋದು.. ಕಳೆದ ಬಾರಿಯ ಸೋಲಿನ ಅನುಕಂಪ… ಕೆಲ ಗ್ರಾಮ ಪಂಚಾಯ್ತಿಯ ಬಿಜೆಪಿ ಸದಸ್ಯರಲ್ಲೇ ಪ್ರಾಣೇಶ್ ಬಗ್ಗೆ ಅಸಮಾಧಾನ. ದುಬಾರಿಯಾದ ಪೆಟ್ರೋಲ್-ಡಿಸೇಲ್-ಅಡುಗೆ ಅನಿಲ ಸೇರಿದಂತೆ ಬೆಲೆ ಏರಿಕೆಯ ಬಿಸಿ ಸಹಜವಾಗಿಯೇ ಕಾಂಗ್ರೆಸ್ಗೆ ವರವಾಗಿ ಪರಿಣಮಿಸಿದೆ.
ಇನ್ನೊಂದು ಮಗ್ಗುಲಲ್ಲಿ ನೋಡೋದಾದ್ರೆ ಹೆಚ್ಚಿನ ಸಂಖ್ಯೆಯಲ್ಲಿರುವ ಬಿಜೆಪಿಯ ಗ್ರಾಮ ಪಂಚಾಯ್ತಿ ಸದಸ್ಯರು, ನಾಲ್ವರು ಶಾಸಕರು, ರಾಜಕೀಯ ಚತುರ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ ರವಿ ಅಂತವರ ಗೇಮ್ ಪ್ಲಾನ್.. ಆಡಳಿತ ಯಂತ್ರದಲ್ಲಿ ಬಿಜೆಪಿ ಇರೋದ್ರಿಂದ ಸಹಜವಾಗಿಯೇ ಅಧಿಕಾರಿ ವರ್ಗದ ಸಹಕಾರವೂ ಕೂಡ ಬಿಜೆಪಿಗಿದೆ. ಹೀಗಾಗಿ ಜಿಲ್ಲೆಯಲ್ಲಿ ಈ ಬಾರಿ ಕಮಲ-ಕೈ ನಡುವೆ ನೇರಾನೇರ ಸ್ಪರ್ಧೆ ಏರ್ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಒಂದು ಮತಕ್ಕೆ ಬರೋಬ್ಬರಿ 50 ಸಾವಿರ.! ಗ್ರಾಮ ಪಂಚಾಯ್ತಿ ಸದಸ್ಯರುಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್…!
ಪುರಸಭೆ, ಪಟ್ಟಣ ಪಂಚಾಯ್ತಿ ಸದಸ್ಯರಿಗೂ ಮತದಾನದ ಹಕ್ಕಿದ್ರೂ ಗ್ರಾಮ ಪಂಚಾಯ್ತಿ ಸದಸ್ಯರೇ ಪರಿಷತ್ ಚುನಾವಣೆಯ ನಿರ್ಣಾಯಕರು. ಯಾಕಂದ್ರೆ ಪುರಸಭೆ, ಪಟ್ಟಣ ಪಂಚಾಯ್ತಿಗಳಲ್ಲಿ ಪಕ್ಷದ ಚಿಹ್ನೆ ಮೇಲೆ ಅಭ್ಯರ್ಥಿಗಳು ಜಯಶಾಲಿಯಾಗಿ ತಮ್ಮ ಪಕ್ಷಗಳ ಪರ ಗುರುತಿಸಿಕೊಂಡಿರುತ್ತಾರೆ. ಆದರೆ ಗ್ರಾಮ ಪಂಚಾಯ್ತಿಯಲ್ಲಿ ಗೆದ್ದ ಸದಸ್ಯರುಗಳು ಪಕ್ಷದ ಚಿಹ್ನೆಯಡಿ ಗುರುತಿಸಿಕೊಂಡಿರುವುದಿಲ್ಲ. ಗೆದ್ದ ಬಳಿಕ ಕೆಲವರು ಸಾರ್ವಜನಿಕವಾಗಿ ಪಕ್ಷಗಳ ಪರ ಗುರುತಿಸಿಕೊಂಡ್ರೆ, ಅನೇಕರು ಎಲ್ಲಾ ಪಕ್ಷಗಳಿಂದಲೂ ಅಂತರ ಕಾಯ್ದುಕೊಂಡೇ ಮುಂದುವರಿಯುತ್ತಾರೆ. ಅಂಥವರಿಗಂತೂ ಈ ಪರಿಷತ್ ಚುನಾವಣೆಯಲ್ಲಿ ಒಳ್ಳೆ ಮಾರ್ಕೆಟ್ ಸೃಷ್ಟಿಯಾಗಿದೆ.
ತಟಸ್ಥವಾಗಿರುವ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಎರಡು ಪಕ್ಷಗಳಿಂದಲೂ ಆಫರ್ ಸಿಗುತ್ತಿದ್ದು, ಸಿಕ್ಕ ಅವಕಾಶವನ್ನ ಯಾವುದೇ ಮುಲಾಜಿಗೆ ಒಳಗಾಗದೇ ಮೊದಲ ಪ್ರಾಶಸ್ತ್ಯದ ಮತವನ್ನೇ ನಿಮಗೆ ಹಾಕೋದು ಅಂತಾ ಎರಡು ಕಡೆಗಳಿಂದಲೂ ಬಂದ “ಬಳುವಳಿ”ಯನ್ನ ಸದಸ್ಯರು ಸ್ವೀಕರಿಸುತ್ತಿದ್ದಾರೆ. ಹಾಗಂತ ಪಾರ್ಟಿಯಲ್ಲಿ ಗುರುತಿಸಿಕೊಂಡ ಸದಸ್ಯರಿಗೆ “ಬಳುವಳಿ” ಸಿಗಲ್ಲ ಅಂತೇನಿಲ್ಲ. ಸಿಕ್ಕೇ ಸಿಗುತ್ತೆ, ಕೊಡಲಿಲ್ಲ ಅಂದ್ರೆ ಎದುರಾಳಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡರೇ ಕಷ್ಟ ಅನ್ನೋದು ಎರಡು ಪಕ್ಷಗಳಿಗೂ ಗೊತ್ತಿದೆ. 2016ರಲ್ಲಿ ಒಂದು ಮತಕ್ಕೆ 30 ಸಾವಿರ ತನಕ ರೇಟ್ ಕುದುರಿತ್ತು.
ಈ ಬಾರಿ ಒಂದು ಮತಕ್ಕೆ ಬರೋಬ್ಬರಿ 50 ಸಾವಿರ ರೇಟ್ ಫಿಕ್ಸ್ ಅನ್ನೋ ಗುಸುಗುಸು ಪಿಸುಪಿಸು ಕೇಳಿ ಬರ್ತಿದ್ದು, ಎರಡು ಕಡೆಯಿಂದಲೂ ತಲಾ 50 ಸಾವಿರ ರೂಪಾಯಿ ಒಬ್ಬ ಸದಸ್ಯ ತೆಗೆದುಕೊಂಡರೆ ಒಟ್ಟು ಕಮಾಯಿ ಬರೋಬ್ಬರಿ 1 ಲಕ್ಷ. ಒಟ್ಟಿನಲ್ಲಿ ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎಂಬಂತೆ, ಗ್ರಾಮ ಪಂಚಾಯ್ತಿ ಸದಸ್ಯರಿಗೂ ಈ ಚುನಾವಣೆಯಲ್ಲಿ ಹೆಚ್ಚು ಡಿಮ್ಯಾಂಡ್ ಕ್ರಿಯೇಟ್ ಆಗಿರೋದು ಸುಳ್ಳಲ್ಲ..
“196 ಗ್ರಾಮ ಪಂಚಾಯ್ತಿಗಳಿಗೆ ಜನರೇಟರ್ ನೀಡಿದ್ದೇನೆ, ಪ್ರಾಮಾಣಿಕ ಕೆಲಸ ಮಾಡುತ್ತಿರುವ ನನಗೆ ಗ್ರಾ.ಪಂ ಸದಸ್ಯರ ಗೌರವಧನ ಹೆಚ್ಚಿಸಲು ನನಗೆ ಅವಕಾಶ ಮಾಡಿಕೊಡಿ“”- ಎಂ.ಕೆ ಪ್ರಾಣೇಶ್
“ಹಿಂದಿನ ಪರಿಷತ್ ಸದಸ್ಯರು ಗ್ರಾಮ ಪಂಚಾಯ್ತಿಗಳಿಗೆ ಏನೂ ಕೊಡುಗೆಯನ್ನ ನೀಡಿಲ್ಲ, ಆ ಕಡೆ ಮುಖ ಕೂಡ ಹಾಕಿಲ್ಲ. ಅವರ ಅವಧಿಯ ಅಭಿವೃದ್ಧಿ ಕೆಲಸಗಳ ಬಗ್ಗೆ ಶ್ವೇತ ಪತ್ರ ಹೊರಡಿಸಲಿ “- ಎ.ವಿ ಗಾಯತ್ರಿ ಶಾಂತೇಗೌಡ
– ಪ್ರಶಾಂತ್, ಚಿಕ್ಕಮಗಳೂರು
Published On - 8:37 am, Mon, 6 December 21