
ಚಿಕ್ಕಮಗಳೂರು, ಸೆಪ್ಟೆಂಬರ್ 28: ಇಡೀ ರಾಜ್ಯವೇ ಹನಿ ನೀರಿಗೂ ಹಾಹಾಕಾರ ಪಡುತ್ತಿದೆ. ಇತ್ತ ಮಳೆಯನಾಡೆಂದೇ ಖ್ಯಾತಿ ಪಡೆದಿರುವ ಚಿಕ್ಕಮಗಳೂರಿನ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹುಟ್ಟಿ ಹರಿಯುವ ಜೀವನಾಡಿ ತುಂಗಾ ನದಿಯ ಹರಿವು ಸಂಪೂರ್ಣ ಕ್ಷೀಣಿಸಿದ್ದು, ಬರಿದಾಗುವ ಭೀತಿ ಎದುರಾಗಿದೆ. ವಾಡಿಕೆಯಷ್ಟು ಮಳೆಯಾಗದ ಹಿನ್ನೆಲೆಯಲ್ಲಿ ನದಿಯನ್ನೇ ನಂಬಿಕೊಂಡಿರುವ ಲಕ್ಷಾಂತರ ಮಂದಿಗೆ ಕುಡಿಯುವ ನೀರು ಹಾಗೂ ಕೃಷಿಗೆ ತೀವ್ರ ಸಂಕಷ್ಟ ಎದುರಾಗುವ ಆತಂಕ ಸೃಷ್ಟಿಯಾಗಿದೆ.
ಈ ಬಾರಿ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ವಾಡಿಕೆಯಷ್ಟು ಮಳೆಯಾಗದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸೇರಿದಂತೆ ಕುಡಿಯುವ ನೀರಿಗೆ ಜನರು ಹಾಹಾಕಾರ ಪಡುವ ಆತಂಕ ಎದುರಾಗಿದೆ. ಅದರಲ್ಲೂ ಪ್ರತಿ ವರ್ಷ ಮಳೆಗಾಲದಲ್ಲಿ ಮೈದುಂಬಿ ಹರಿದು ಹಲವು ಅವಾಂತರ ಸೃಷ್ಟಿಸುತ್ತಿದ್ದ ತುಂಗಾ ನದಿ ಹರಿವಿನ ಪ್ರಮಾಣ ಸಂಪೂರ್ಣ ಕಡಿಮೆ ಆಗಿದೆ.
ಇದನ್ನೂ ಓದಿ: ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ: ಸಿಎಂ ಜೊತೆ ಚರ್ಚೆ, ಬರಪೀಡಿತ ತಾಲೂಕುಗಳ ಪರಿಶೀಲನೆ
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಈ ಬಾರಿ ವಾಡಿಕೆ ಎಷ್ಟು ಮಳೆಯಾಗಿಲ್ಲ. ಆರಂಭದ ಕೆಲ ದಿನಗಳಲ್ಲಿ ಮಳೆ ಆರ್ಭಟಿಸಿದರೆ ಅಗತ್ಯ ಸಮಯದಲ್ಲಿ ಮಳೆ ಕೈಕೊಟ್ಟಿತು. ಇದರಿಂದಾಗಿ ಮಲೆನಾಡಿನ ಶೃಂಗೇರಿ, ಎನ್.ಆರ್. ಪುರ, ಕೊಪ್ಪ ಭಾಗದಲ್ಲಿ ಜಲ ಮೂಲಗಳೆಲ್ಲಾ ಸಂಪೂರ್ಣ ಬರಿದಾಗುತ್ತಿವೆ. ವರ್ಷ ಪೂರ್ತಿ ಮೈದುಂಬಿ ಹರಿಯುತ್ತಿದ್ದ ತುಂಗಾ ನದಿ ಕೂಡ ಬರಿದಾಗುತ್ತಿದ್ದು, ಇನ್ನೇನು ಕೆಲವೇ ದಿನದಲ್ಲಿ ಮಲೆನಾಡಿನಲ್ಲೂ ಜಲಕ್ಷಾಮ ಸೃಷ್ಟಿಯಾಗುವ ಆತಂಕ ಎದುರಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಗಂಗಾ ಮೂಲದಲ್ಲಿ ಹುಟ್ಟುವ ತುಂಗಾ ನದಿ ಲಕ್ಷಾಂತರ ಜನರ ಜೀವನಾಡಿ. ಮುಂಗಾರು ಕೈಕೊಟ್ಟಿದ್ದು, ಇದೆ ಸ್ಥಿತಿ ಮುಂದುವರೆದರೆ ತುಂಗಾ ನದಿ ಒಡಲು ಖಾಲಿಯಾಗುವ ಸೂಚನೆ ಮಳೆಗಾಲದಲ್ಲೇ ಸಿಕ್ಕಿದೆ.
ಕೃಷಿ ಹಾಗೂ ಲಕ್ಷಾಂತರ ಜನರ ಜೀವನಾಡಿ ಆಗಿರುವ ತುಂಗಾ ನದಿ ವರ್ಷ ಪೂರ್ತಿ ಮೈದುಂಬಿ ಹರಿಯುತ್ತಿತ್ತು. ಆದರೆ ಈ ಬಾರಿ ಸರಿಯಾಗಿ ಮಳೆಯಾಗದೆ ತುಂಗಾ ನದಿಯ ಹರಿವಿನ ಪ್ರಮಾಣದಲ್ಲಿ ಕಡಿಮೆಯಾಗುತ್ತಿದ್ದು, ಕುಡಿಯುವ ನೀರು ಕೃಷಿ ಚಟುವಟಿಕೆಗಳಿಗೆ ಸಮಸ್ಯೆ ಎದುರಾಗುವ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿವೆ. ಅಷ್ಟೇ ಅಲ್ಲದೆ ತುಂಗಾ ನದಿಯನ್ನೇ ಅವಲಂಬಿಸಿರುವ ರೈತರಿಗೂ ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ನೀರಿನ ಅಭಾವ ಎದುರಾಗುವ ಲಕ್ಷಣಗಳು ಕಂಡು ಬರುತ್ತಿವೆ.
ಮಳೆ ಕೊರತೆಯ ಇದೇ ಪರಿಸ್ಥಿತಿ ಮುಂದುವರಿದರೆ ಐತಿಹಾಸಿಕ ಶೃಂಗೇರಿ ಶ್ರೀ ಶಾರದಾ ಪೀಠಕ್ಕೆ ಬರುವ ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರಿಗೂ ನೀರಿನ ಅಭಾವ ಎದುರಾಗಲಿದೆ. ಒಟ್ಟಾರೆಯಾಗಿ ವಾಡಿಕೆ ಮಳೆಯಾಗದ ಪರಿಣಾಮ ಕೇವಲ ಚಿಕ್ಕಮಗಳೂರು ಜಿಲ್ಲೆಗೆ ಮಾತ್ರವಲ್ಲದೆ, ತುಂಗಾ ನದಿಯನ್ನೇ ನಂಬಿಕೊಂಡಿರುವ ಅಕ್ಕಪಕ್ಕದ ಜಿಲ್ಲೆಗಳಿಗೂ ಜಲಕ್ಷಾಮದ ಭೀತಿ ಆವರಿಸುವ ಮುನ್ಸೂಚನೆ ಸಿಕ್ಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.