ನಿರಾಶ್ರಿತ ಕೇಂದ್ರದಲ್ಲೇ ಮದುವೆಯಾದ ಪ್ರೇಮಿಗಳು; 3 ವರ್ಷದ ಹಳೆಯ ಪ್ರೀತಿಗೆ ಚಿಕ್ಕಮಗಳೂರಿನಲ್ಲಿ ಕಂಕಣ ಭಾಗ್ಯ
ಳೆದ ಮೂರು ವರ್ಷಗಳ ಹಿಂದೆ ಗಾರೆ ಕೆಲಸ ಮಾಡುವಾಗ ಚನ್ನಗಿರಿಯಲ್ಲಿ ಪ್ರೇಮಾಂಕುರವಾಗಿತ್ತು. ಅಲ್ಲಿಂದ ಬಂದ ಇಬ್ಬರು ಚಿಕ್ಕಮಗಳೂರಿನ ಸಖರಾಪಟ್ಟಣದಲ್ಲಿ ನೆಲೆಸಿದ್ದರು. 45 ವರ್ಷದ ಕುಮಾರ ಎಂಬುವವರಿಗೆ, 40 ವರ್ಷದ ರೇಣುಕಾ ಮೇಲೆ ಪ್ರೀತಿ ಆಗಿದ್ದೇನೋ ನಿಜ ಆದರೆ ಮದುವೆ ಆಗಿರಲಿಲ್ಲ.
ಚಿಕ್ಕಮಗಳೂರು: ಲಾಕ್ಡೌನ್ ಸಮಯದಲ್ಲಿ ಎಲ್ಲಾ ಚಟುವಟಿಕೆಗಳು ಬಂದ್ ಆಗಿತ್ತು. ಒಂದೂರಿನಿಂದ ಮತ್ತೊಂದು ಊರಿಗೆ ಹೋದವರು ಕೂಡ ಅಲ್ಲಿಯೇ ನೆಲೆಸುವಂತಾಗಿತ್ತು. ಹೀಗೆ ಊರು ಬಿಟ್ಟು ಊರು ಸೇರಿದ ಹಲವರು ತಂಗಲು ನೆಲೆ ಇಲ್ಲದೆ, ನಿರಾಶ್ರೀತ ಕೇಂದ್ರದಲ್ಲಿ ವಾಸಿಸಿದ ಅನೇಕ ಘಟನೆಗಳ ಬಗ್ಗೆ ನಾವು ಓದಿದ್ದೇವೆ. ಆದರೆ ಚಿಕ್ಕಮಗಳೂರಿನಲ್ಲಿನ ನಿರಾಶ್ರೀತರ ಕೇಂದ್ರದಲ್ಲಿ ವಿಭಿನ್ನವಾದ ಸನ್ನಿವೇಶವೊಂದು ಎದುರಾಗಿದ್ದು, 3 ವರ್ಷದ ಹಳೆಯ ಪ್ರೀತಿ ಮದುವೆ ಬಂಧನಕ್ಕೆ ಒಳಗಾಗಿದೆ. ಚಿತ್ರದುರ್ಗದ ಚನ್ನಗಿರಿಯಲ್ಲಿ ಪ್ರಿತಿಸುತ್ತಿದ್ದ ಈ ಜೋಡಿ ಚಿಕ್ಕಮಗಳೂರಿನ ಸಖರಾಯಪಟ್ಟಣದಲ್ಲಿ ಜೊತೆಯಾಗಿದ್ದಾರೆ.
ಊರಿಂದ ಊರಿಗೆ ಸಾಗಿ, ಸಿಕ್ಕ ಸಣ್ಣಪುಟ್ಟ ಕೆಲಸವನ್ನೇ ಮಾಡಿಕೊಂಡು ಜೀವನ ಸಾಗಿಸುತ್ತಿದ ರೇಣುಕಾ ಮತ್ತು ಕುಮಾರ ಅವರಿಗೆ ಲಾಕ್ಡೌನ್ನಿಂದಾಗಿ ಕೆಲಸವಿಲ್ಲದಂತೆ ಆಗಿದೆ. ಹೀಗಾಗಿ ನಿರಾಶ್ರಿತ ಕೇಂದ್ರ ಸೇರಿದ್ದಾರೆ. ಇಬ್ಬರ ಮೂಲವು ಚಿತ್ರದುರ್ಗ ಜಿಲ್ಲೆ. ಕಳೆದ ಮೂರು ವರ್ಷಗಳ ಹಿಂದೆ ಗಾರೆ ಕೆಲಸ ಮಾಡುವಾಗ ಚನ್ನಗಿರಿಯಲ್ಲಿ ಪ್ರೇಮಾಂಕುರವಾಗಿತ್ತು. ಅಲ್ಲಿಂದ ಬಂದ ಇಬ್ಬರು ಚಿಕ್ಕಮಗಳೂರಿನ ಸಖರಾಪಟ್ಟಣದಲ್ಲಿ ನೆಲೆಸಿದ್ದರು. 45 ವರ್ಷದ ಕುಮಾರ ಎಂಬುವವರಿಗೆ, 40 ವರ್ಷದ ರೇಣುಕಾ ಮೇಲೆ ಪ್ರೀತಿ ಆಗಿದ್ದೇನೋ ನಿಜ ಆದರೆ ಮದುವೆ ಆಗಿರಲಿಲ್ಲ.
ಕೊರೊನಾ ಎರಡನೇ ಅಲೆಯ ಅಬ್ಬರದಲ್ಲಿ ಕೆಲಸ ಸಿಗದಿದ್ದಾಗ ಇಬ್ಬರು ಚಿಕ್ಕಮಗಳೂರಲ್ಲಿ ಮುಂದೇನು ಮಾಡುವುದು ಎಂದು ಚಿಂತೆಯಲ್ಲಿದ್ದರು. ಆಗ ಮಲೆನಾಡು ಕ್ರೈಸ್ತ ಸಂಘ 130 ಜನರಿಗೆ ಉಪಯೋಗವಾಗುವಂತೆ ನಿರಾಶ್ರಿತ ಕೇಂದ್ರ ತೆಗೆದಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಇಬ್ಬರು ಅಲ್ಲಿಗೆ ಸೇರಿಕೊಂಡಿದ್ದಾರೆ. ಆ 130ರಲ್ಲಿ ಇವರಿಬ್ಬರಾಗಿ ಲಾಕ್ಡೌನ್ ಸಮಯ ಕಳೆದಿದ್ದಾರೆ. ಪ್ರೀತಿಯ ವಿಷಯ ನಿರಾಶ್ರಿತ ಕೇಂದ್ರದಲ್ಲಿ ತಿಳಿದಿದ್ದು, ನಿರಾಶ್ರಿತ ಕೇಂದ್ರದ ಹಿರಿಯರು ಮದುವೆ ಮಾಡಿಸಿ ಹೊಸ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಮದುವೆ ಸಂಭ್ರಮದಲ್ಲಿ ನಿರಾಶ್ರಿತ ಕೇಂದ್ರದ 130 ಜನರೂ ಕುಣಿದು-ಕುಪ್ಪಳಿಸಿ ನವದಂಪತಿಗೆ ಶುಭಹಾರೈಸಿದ್ದಾರೆ. ಅಲ್ಲದೇ ನವಜೋಡಿಗೆ ಸಹಾಯ ಆಗುವಂತೆ ಇಬ್ಬರಿಗೂ ನಗರದ ಹೋಂ ಸ್ಟೇವೊಂದರಲ್ಲಿ ಕೆಲಸ ಕೂಡ ನೀಡಿದ್ದಾರೆ.
ಒಟ್ಟಾರೆ, ಎಲ್ಲೋ ಪ್ರೀತಿಸಿ ಇನ್ನೆಲ್ಲೋ ಬಂದು ನೆಲೆಸಿದ ಪ್ರೇಮಿಗಳಿಗೆ ಸಹೃದಯಿಗಳು ಹೊಸ ಬದುಕು ಕಟ್ಟಿಕೊಟ್ಟಿದ್ದಾರೆ. ಮದುವೆಯಾದ ನವದಂಪತಿ ಕೂಡ ಹೊಸ ಬದುಕಿನ ಬಗ್ಗೆ ಹೊಸ ಇಂಗಿತ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಪ್ತಪದಿಯ ಆರನೇ ಹೆಜ್ಜೆ ಇಡುತ್ತಿದ್ದಂತೆ ಮದುವೆಯೇ ಬೇಡವೆಂದ ವಧು; ಪರಿಪರಿಯಾಗಿ ಮನವೊಲಿಸಿದರೂ ವಿವಾಹಕ್ಕೆ ಒಪ್ಪಲೇ ಇಲ್ಲ