ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ವಿಳಂಬ: ಸಿಡಿದೆದ್ದ ರೈತರಿಂದ ನಾಳೆ ಬಂದ್‌ಗೆ ಕರೆ

ಭದ್ರಾ ಮೇಲ್ದಂಡೆ ಯೋಜನೆ ಎರಡು ದಶಕಗಳಿಂದ ಆಮೆಗತಿಯಲ್ಲಿ ಸಾಗಿದೆ. ಯೋಜನೆ ಅಪೂರ್ಣಗೊಂಡಿದ್ದು, ಕೇಂದ್ರ-ರಾಜ್ಯ ಸರ್ಕಾರದ ನಡುವಿನ ಆಪಾದನೆಗಳಿಂದ ಅನುದಾನ ಕೂಡ ಬಿಡುಗಡೆಯಾಗಿಲ್ಲ. ಹೀಗಾಗಿ ಸಿಡಿದೆದ್ದ ರೈತರು ಫೆ 10ಕ್ಕೆ ಹಿರಿಯೂರು, ಹೊಳಲ್ಕೆರೆ ಬಂದ್​​ಗೆ ಕರೆ ನೀಡಿದ್ದಾರೆ. ಜೊತೆಗೆ ನ್ಯಾಯಯುತ ನೀರು ಹಂಚಿಕೆಗೆ ಆಗ್ರಹಿಸಿದ್ದಾರೆ.

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ವಿಳಂಬ: ಸಿಡಿದೆದ್ದ ರೈತರಿಂದ ನಾಳೆ ಬಂದ್‌ಗೆ ಕರೆ
ಭದ್ರಾ ಮೇಲ್ದಂಡೆ ಯೋಜನೆ, ರೈತರಿಂದ ಪ್ರತಿಭಟನೆ
Edited By:

Updated on: Feb 09, 2026 | 9:35 PM

ಚಿತ್ರದುರ್ಗ, ಫೆಬ್ರವರಿ 09: ಭದ್ರಾ ಮೇಲ್ದಂಡೆ ಯೋಜನೆ (Upper Bhadra Project) ಬಯಲು ಸೀಮೆಯ ಜನರ ಬಹುಕಾಲದ ಕನಸು. ಆದರೆ ಯೋಜನೆ ಆರಂಭವಾಗಿ ಎರಡು ದಶಕಗಳೇ ಕಳೆಯುತ್ತ ಬಂದರೂ ಯೋಜನೆ ಮಾತ್ರ ಪೂರ್ಣಗೊಂಡಿಲ್ಲ. ಹೀಗಾಗಿ ಕಾದು ಕಾದು ಸಿಡಿದೆದ್ದ ಚಿತ್ರದುರ್ಗದ ರೈತರು ನಾಳೆ ಅಂದರೆ ಫೆಬ್ರವರಿ 10ರಂದು ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳ ಬಂದ್​ಗೆ (Bandh) ಕರೆ ನೀಡಿದ್ದಾರೆ.

ಪೂರ್ಣಗೊವಾದ ಯೋಜನೆ 

ಚಿತ್ರದುರ್ಗದ ಜನರ ದಶಕಗಳ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಜಾರಿ ಆಗಿದೆ. ಆದರೆ ಯೋಜನೆಗೆ ಚಾಲನೆ ಸಿಕ್ಕು ಎರಡು ದಶಕಗಳೇ ಕಳೆಯುತ್ತ ಬಂದರೂ ಯೋಜನೆ ಮಾತ್ರ ಪೂರ್ಣಗೊಂಡಿಲ್ಲ. ಅನುದಾನ ಬಿಡುಗಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಬ್ಬರ ಮೇಲೊಬ್ಬರು ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಮುತ್ತಿನಕೊಪ್ಪದಿಂದ ಭದ್ರಾ ಡ್ಯಾಂವರೆಗೆ ಶೇ 25ರಷ್ಟು ಕಾಮಗಾರಿ ಬಾಕಿಯಿದೆ. ಅರಣ್ಯ ವ್ಯಾಪ್ತಿಯಲ್ಲಿ ಎರಡು ಕಡೆ ಟವರ್ ಹಾಕುವ ಕೆಲಸ ಬಾಕಿಯಿದೆ.

ಇದನ್ನೂ ಓದಿ: ಪಾವಗಡ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕೆಲಸ ನಮ್ಮ ಸರ್ಕಾರ ಮಾಡಲಿದೆ: ಸಿದ್ದರಾಮಯ್ಯ, ಸಿಎಂ

ಅಲ್ಲದೆ ಸೂಕ್ಷ್ಮ ಹನಿ ನೀರಾವರಿ ಯೋಜನೆಗೆ ಹೊಳಲ್ಕೆರೆ ಕೈಬಿಡಲಾಗಿದೆ. ಹೀಗಾಗಿ ತಾರತಮ್ಯ ಬಿಟ್ಟು ಜಿಲ್ಲೆಯ ಎಲ್ಲೆಡೆ ನೀರು ಹರಿಸುವವರೆಗೆ ಟ್ರಯಲ್ ಟೆಸ್ಟ್​ಗೆ ಅವಕಾಶ ಕೊಡುವುದಿಲ್ಲ ಎಂದು ರೈತ ಮುಖಂಡ ಈಚಘಟ್ಟ ಸಿದ್ದವೀರಪ್ಪ ಎಚ್ಚರಿಕೆ ನೀಡಿದ್ದಾರೆ.

ಇನ್ನು ಈಗಾಗಲೇ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪ್ರತಿ ತಾಲೂಕಿನಲ್ಲಿ ಫೆಬ್ರವರಿ 4ರಿಂದ ಧರಣಿ ನಡೆಸಲಾಗುತ್ತಿದೆ. ಫೆಬ್ರವರಿ 10ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಹೊಳಲ್ಕೆರೆ, ಮೊಳಕಾಲ್ಮೂರು ಮತ್ತು ಹೊಸದುರ್ಗ ತಾಲೂಕು ಕೇಂದ್ರಗಳ ಬಂದ್​​ಗೆ ಕರೆ ನೀಡಿದ್ದೇವೆ. ಫೆಬ್ರವರಿ 12ಕ್ಕೆ ಚಳ್ಳಕೆರೆ ಪಟ್ಟಣ ಬಂದ್ ಮಾಡಲಾಗುವುದು. ಫೆಬ್ರವರಿ 13ಕ್ಕೆ ಚಿತ್ರದುರ್ಗ ನಗರಕ್ಕೆ ಪಾದಯಾತ್ರೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸುತ್ತೇವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಬಗ್ಗೆ ಮತ್ತಷ್ಟು ವಿವರ ಕೇಳಿದ ಕೇಂದ್ರ; ಕಿಡಿಕಾರಿದ ಟಿ.ಬಿ.ಜಯಚಂದ್ರ

ಒಟ್ಟಾರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸಿಡಿಸಿದೆದ್ದಾರೆ. ಕೇಂದ್ರ ಸರ್ಕಾರ ಭದ್ರಾ ಯೋಜನೆಗೆ 5300 ಕೋಟಿ ರೂ ಅನುದಾನ ಘೋಷಿಸಿದ್ದು ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರವೂ ಭದ್ರಾ ಯೋಜನೆಗೆ ಆದ್ಯತೆ ನೀಡಿ ಹೆಚ್ಚಿನ ಹಣ ಬಿಡುಗಡೆ ಮಾಡುವಲ್ಲಿ ಮೀನಮೇಷ ಎಣಿಸುತ್ತಿದೆ. ಪರಿಣಾಮ ಬಯಲು ಸೀಮೆಯ ಜನರ ಕನಸಾದ ಭದ್ರಾ ಯೋಜನೆ ಆಮೆಗತಿಯಲ್ಲಿ ಸಾಗಿದ್ದು, ರೈತಾಪಿ ವರ್ಗ ಹೈರಾಣಾಗಿದ್ದಾರೆ. ಹೀಗಾಗಿ, ಕೂಡಲೇ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂಬುದು ರೈತರ ಆಗ್ರಹವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬಸವರಾಜ ಮುದನೂರ್, ಚಿತ್ರದುರ್ಗ

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us