ಚಿತ್ರದುರ್ಗ: ಮರಕ್ಕೆ ಬೊಲೆರೊ ವಾಹನ ಡಿಕ್ಕಿ; ಒಂದೇ ಗ್ರಾಮದ ನಾಲ್ವರು ಕಾರ್ಮಿಕರು ಸಾವು
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಂದನೂರು ಬಳಿ ಬೊಲೆರೊ ವಾಹನ ಮರಕ್ಕೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದು, ಇನ್ನು ನಾಲ್ವರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ, ಜನವರಿ 06: ಮರಕ್ಕೆ ಬೊಲೆರೊ ವಾಹನ ಡಿಕ್ಕಿ (accident) ಹೊಡೆದ ಪರಿಣಾಮ ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಂದನೂರು ಬಳಿ ನಡೆದಿದೆ. ಕಿರಣ್(25), ಅರುಣ್(32), ಹನುಮಂತ(32) ಮತ್ತು ಗಿರಿರಾಜ್(46) ಮೃತರು. ಇನ್ನುಳಿದ ನಾಲ್ವರು ಕಾರ್ಮಿಕರಿಗೆ ಗಾಯಗಳಾಗಿದ್ದು, ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಜಾಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆ ತಾಲೂಕಿನ ಅಣಜಿ ಗ್ರಾಮದಲ್ಲಿ ಅಡಕೆ ಲೋಡ್ ಇಳಿಸಿ ಕಾರ್ಮಿಕರು ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ದುರಂತದಲ್ಲಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ದಾವಣಗೆರೆ ಆಸ್ಪತ್ರೆಯಲ್ಲಿ ಮತ್ತಿಬ್ಬರು ಕಾರ್ಮಿಕರು ಕೊನೆಯುಸಿರೆಳೆದಿದ್ದಾರೆ. ಮೃತ ಕಾರ್ಮಿಕರು ಕಲ್ಲವ್ವ ನಾಗತಿಹಳ್ಳಿ ಗ್ರಾಮದವರು.
ನೀರಿನ ಸಂಪ್ನಲ್ಲಿ ತಾಯಿ-ಇಬ್ಬರು ಮಕ್ಕಳ ಶವ ಪತ್ತೆ
ನೀರಿನ ಸಂಪ್ನಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳ ಶವ ಪತ್ತೆ ಆಗಿರುವಂತಹ ಘಟನೆ ತುಮಕೂರು ತಾಲೂಕಿನ ಸಿಂಗನಹಳ್ಳಿ ಕಾಲೋನಿಯಲ್ಲಿ ನಡೆದಿದೆ. ನೀರಿನ ಸಂಪ್ನಲ್ಲಿ 26 ವರ್ಷದ ವಿಜಯಲಕ್ಷ್ಮೀ ಹಾಗೂ ಮಕ್ಕಳಾದ ಚೇತನ್(5) ಮತ್ತು ಚೈತನ್ಯ(5) ಮೃತದೇಹ ಪತ್ತೆ ಆಗಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಯಲ್ಲಾಪುರ: ವಿವಾಹಿತ ಮಹಿಳೆ ಜತೆ ಯುವಕನ ಲವ್, ಮದುವೆಯಾಗಲು ಒಪ್ಪದ್ದಕ್ಕೆ ನಡುರಸ್ತೆಯಲ್ಲೇ ಕೊಲೆ ಮಾಡಿ ಪರಾರಿ
ಮೃತ ವಿಜಯಲಕ್ಷ್ಮೀ ಪತಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸ ಮುಗಿಸಿ ಪತಿ ಮನೆಗೆ ಬಂದಾಗ ಪತ್ನಿ, ಮಕ್ಕಳಿರಲಿಲ್ಲ. ಎಲ್ಲೆಡೆ ಹುಡುಕಾಡಿದ್ದಾರೆ. ಮನೆಯ ಹೊರಗಡೆಯ ಸಂಪ್ನಲ್ಲಿ ಶವಗಳು ಪತ್ತೆಯಾಗಿವೆ. ನೀರಿನ ಸಂಪ್ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ವಿಜಯಲಕ್ಷ್ಮೀ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಆಟೋ ಡಿಕ್ಕಿ: ಪಾದಚಾರಿ ವ್ಯಕ್ತಿ ಸ್ಥಳದಲ್ಲೇ ದುರ್ಮರಣ
ಹಾಸನ ನಗರದ ಸಾಲಗಾಮೆ ರಸ್ತೆ ಸುಬೇದಾರ್ ನಾಗೇಶ್ ವೃತ್ತದಲ್ಲಿ ಆಟೋ ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ನಡೆದಿದೆ. ಸಿಗ್ನಲ್ ಬಳಿ ನಡೆದುಕೊಂಡು ಹೊರಟಿದ್ದ ರಾಜ್ಕುಮಾರ್ಗೆ ಡಿಕ್ಕಿ ಹೊಡೆದು ಆಟೋ ಸಮೇತ ಚಾಲಕ ಪರಾರಿ ಆಗಿದ್ದಾರೆ.
ಇದನ್ನೂ ಓದಿ: ಪ್ರತ್ಯೇಕ ರಸ್ತೆ ಅಪಘಾತ: ತಮ್ಮದಲ್ಲದ ತಪ್ಪಿಗೆ ಮಗು ಸೇರಿ ನಾಲ್ವರು ದಾರುಣವಾಗಿ ಸಾವು
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿಪುರ ಗ್ರಾಮದ ರಾಜ್‌ಕುಮಾರ್(51) ಮೃತ ವ್ಯಕ್ತಿ. ದಾಸರಕೊಪ್ಪಲಿನಲ್ಲಿ ಕುಟುಂಬದ ಜೊತೆ ವಾಸವಿದ್ದರು. ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:24 pm, Tue, 6 January 26