ಘೋರ: ಕೋಟೆನಾಡಲ್ಲಿ ಭೀತಿ ಸೃಷ್ಟಿಸಿದ್ದ ಗೂಳಿ ನಿಗೂಢ ಸಾವು, ವಿಷಪೂರಿತ ಆಹಾರ ನೀಡಿ ಆ ಗೂಳಿಯ ಹತ್ಯೆ ಮಾಡಿರುವ ಶಂಕೆ
ಗೂಳಿ ಹಾವಳಿ ಬಗ್ಗೆ ಬಡಾವಣೆಯ ಜನರು ನಗರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನ ಆಗಿರಲಿಲ್ಲ. ಇಂದು ಏಕಾಏಕಿ ಗೂಳಿ ನಿಗೂಢ ಸಾವಿಗೀಡಾಗಿದೆ. ಸರಸ್ವತಿಪುರಂ ಬಡಾವಣೆಯ ಸೇತುವೆ ಬಳಿ ಗೂಳಿ ಶವವಾಗಿ ಪತ್ತೆ ಆಗಿದೆ. ವಿಷ ಆಹರವಿಟ್ಟು ಗೂಳಿಯನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಚಿತ್ರದುರ್ಗ: ನಗರದ ಸರಸ್ವತಿಪುರಂ ಬಡಾವಣೆಯಲ್ಲಿ ಕೆಲ ದಿನಗಳಿಂದ ಬೀಡು ಬಿಟ್ಟಿದ್ದ ಗೂಳಿ ಕಂಡಕಂಡವರ ಮೇಲೆ ದಾಳಿ ನಡೆಸಿ ಜನರಲ್ಲಿ ಭಾರೀ ಭೀತಿ ಸೃಷ್ಠಿಸಿತ್ತು. ಸದ್ಯ ಸರಸ್ವತಿಪುರಂ ಬಳಿಯ ಸೇತುವೆ ಬಳಿ ಗೂಳಿ ನಿಗೂಢ ಸಾವಿಗೀಡಾಗಿದ್ದು ಬಡಾವಣೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಸರಸ್ವತಿಪುರಂ ಬಡಾವಣೆಯಲ್ಲಿ ಜಾನುವಾರುಗಳ ದಂಡೇ ಬೀಡು ಬಿಟ್ಟಿರುತ್ತವೆ. ದನ ಕರುಗಳು ಮರಗಿಡಗಳ ನೆರಳಿಗೆ ಮಲಗಿರುತ್ತವೆ. ಮನೆ ಬಾಗಿಲಿಗೆ ಬಂದಾಗ ಜನರು ನೀಡಿದ ಆಹಾರ ತಿಂದು ತೆರಳುತ್ತವೆ. ಅಂತೆಯೇ ಬಡಾವಣೆಯ ಜನರು ಸಹ ಜಾನುವಾರುಗಳನ್ನು ಪ್ರೀತಿಯಿಂದ ಕಾಣುತ್ತಾರೆ. ಆದರೆ, ಸುಮಾರು ಹದಿನೈದು ದಿನಗಳಿಂದ ಬಿಳಿ ಮತ್ತು ಕಪ್ಪು ಬಣ್ಣ ಮಿಶ್ರಿತ ಗೂಳಿಯೊಂದು ಬಡಾವಣೆಯಲ್ಲಿ ಬೀಡುಬಿಟ್ಟಿದ್ದು ಹಾವಳಿ ಸೃಷ್ಠಿಸಿತ್ತು. ಕಳೆದ ಹದಿನೈದು ದಿನದಲ್ಲಿ ಮಹಿಳೆಯರು, ವೃದ್ಧರು ಸೇರಿ ಸುಮಾರು ಹತ್ತು ಜನರ ಮೇಲೆ ಗೂಳಿ ಏಕಾಏಕಿ ದಾಳಿ ನಡೆಸಿತ್ತು. ಈ ಪರಿಣಾಮ ಗೂಳಿ ಕಂಡರೆ ಸಾಕು ಜನರು ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಮನೆಯಿಂದ ಹೊರಬರಲು ಭಯ ಪಡುವಂತಾಗಿತ್ತು.
ಬಡಾವಣೆಯಲ್ಲಿ ಮಹಿಳೆಯರು ಮಕ್ಕಳು ಓಡಾಡದ ಪರಿಸ್ಥಿತಿ ನಿರ್ಮಾಣ ಆಗಿತ್ತು. ಮನೆಯಿಂದ ಹೊರಬರಬೇಕಾದರೆ ಜೀವ ಭಯದಲ್ಲೇ ಬರುವಂತಾಗಿತ್ತು ಎಂದು ಬಡಾವಣೆಯ ನಿವಾಸಿ ತೇಜಸ್ವಿನಿ ತಮ್ಮ ಆತಂಕ ವ್ಯಕ್ತಪಡಿಸಿದ್ರು.
ಗೂಳಿ ಹಾವಳಿ ಬಗ್ಗೆ ಬಡಾವಣೆಯ ಜನರು ನಗರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನ ಆಗಿರಲಿಲ್ಲ. ಇಂದು ಏಕಾಏಕಿ ಗೂಳಿ ನಿಗೂಢ ಸಾವಿಗೀಡಾಗಿದೆ. ಸರಸ್ವತಿಪುರಂ ಬಡಾವಣೆಯ ಸೇತುವೆ ಬಳಿ ಗೂಳಿ ಶವವಾಗಿ ಪತ್ತೆ ಆಗಿದೆ. ವಿಷ ಆಹರವಿಟ್ಟು ಗೂಳಿಯನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಹದಿನೈದು ದಿನದಿಂದ ಬಡಾವಣೆಯ ಜನರು ಗೂಳಿ ಹಾವಳಿಯಿಂದ ಕಂಗೆಟ್ಟಿದ್ದರು. ಮನೆಗೆ ಬರುತ್ತಿರುವವನ ಮೇಲೆ ಏಕಾಏಕಿ ದಾಳಿ ನಡೆಸಿತ್ತು. ಸದ್ಯ ನೆಲದ ಮೇಲೆ ಉರುಳಾಡಿಸಿ ಅಷ್ಟಕ್ಕೆ ಬಿಟ್ಟ ಕಾರಣ ನಾನು ಬಚಾವಾದೆನು ಅಂತಾ ನಿವೃತ್ತ ಸೈನಿಕ ಜಯಶೀಲರೆಡ್ಡಿ ಗೂಳಿಯಿಂದ ದಾಳಿಗೊಳಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.
ವರದಿ: ಬಸವರಾಜ ಮುದನೂರ್, ಟಿವಿ9 ಚಿತ್ರದುರ್ಗ
ಇದನ್ನೂ ಓದಿ: Viral Video: ರಸ್ತೆ ಬದಿಯಲ್ಲಿ ನಿಂತು ವಿದೇಶಿಗನ ಜೊತೆ ಸಕತ್ ಸ್ಟೆಪ್ ಹಾಕಿದ ವೃದ್ಧ; ವಿಡಿಯೊ ನೋಡಿ
Published On - 10:52 am, Thu, 25 November 21