ತುಮಕೂರು ಶ್ರೀಗಳ 2ನೇ ಪುಣ್ಯಸ್ಮರಣೆ ದಿನವನ್ನು ‘ದಾಸೋಹ ದಿನ’ ಎಂದು ಘೋಷಣೆ ಮಾಡಿದ CM ಯಡಿಯೂರಪ್ಪ

ಶ್ರೀಗಳು ಕೋಟ್ಯಂತರ ಭಕ್ತರ ನಡೆದಾಡುವ ದೇವರು. ಅವರ ಆಶೀರ್ವಾದ ಪಡೆದರೆ ಸಾಕು ಕಷ್ಟ ಬಗೆಹರಿಯುವ ನಂಬಿಕೆ ಇತ್ತು. ಧರ್ಮ, ಜಾತಿ ಭೇದವಿಲ್ಲದೆ ಎಲ್ಲರಿಗೂ ಆಶ್ರಯ ನೀಡಿ ಸಿದ್ಧಗಂಗಾ ಮಠದ ಕೀರ್ತಿ ವಿಶ್ವ ಮಟ್ಟಕ್ಕೆ ಕೊಂಡೊಯ್ದರು. ಶ್ರೀಗಳು ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದರು ಎಂದು ಸಿಎಂ ಬಿಎಸ್​ವೈ ಶ್ರೀಗಳನ್ನು ಸ್ಮರಿಸಿಕೊಂಡ್ರು.

ತುಮಕೂರು ಶ್ರೀಗಳ 2ನೇ ಪುಣ್ಯಸ್ಮರಣೆ ದಿನವನ್ನು ‘ದಾಸೋಹ ದಿನ’ ಎಂದು ಘೋಷಣೆ ಮಾಡಿದ CM ಯಡಿಯೂರಪ್ಪ
ಡಾ.ಶಿವಕುಮಾರಶ್ರೀಗಳ 2ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಿಎಂ
Edited By:

Updated on: Jan 21, 2021 | 2:44 PM

ತುಮಕೂರು: ಲಿಂಗೈಕ್ಯ ಡಾ.ಶಿವಕುಮಾರಶ್ರೀಗಳ 2ನೇ ಪುಣ್ಯಸ್ಮರಣೆ ಹಿನ್ನೆಲೆ ಸಿದ್ಧಗಂಗಾ ಮಠಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಡಿಸಿಎಂ ಡಾ. ಅಶ್ವಥ್ ನಾರಾಯಣ್ ಇಂದು ಬೆಳಗ್ಗೆ ಆಗಮಿಸಿದ್ದರು. ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದ ಇಬ್ಬರೂ ನಾಯಕರು ಬಳಿಕ, ಸಿದ್ಧಗಂಗಾ ಮಠದ ಆವರಣದಲ್ಲಿ ಆಯೋಜನೆ ಮಾಡಲಾಗಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಶ್ರೀಗಳ ಪುಣ್ಯಸ್ಮರಣೆ ದಿನ ದಾಸೋಹ ದಿನ
ಕಾರ್ಯಕ್ರಮದಲ್ಲಿ ಸಿಎಂ B.S.ಯಡಿಯೂರಪ್ಪ ಗ್ರಾಮದ ಸಮಗ್ರ ಯೋಜನೆಯ 3ಡಿ ಚಿತ್ರದ ಅನಾವರಣ ಮಾಡಿದರು. ಹಾಗೂ ಲಿಂಗೈಕ್ಯ ಡಾ. ಶಿವಕುಮಾರ ಶ್ರೀಗಳ 111 ಅಡಿ ಎತ್ತರದ ಪ್ರತಿಮೆ ಅನಾವರಣಗೊಳಿಸಿದ್ದಾರೆ. ಇನ್ನು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ B.S.ಯಡಿಯೂರಪ್ಪ “ಶ್ರೀಗಳ ಪುಣ್ಯಸ್ಮರಣೆ ದಿನ ದಾಸೋಹ ದಿನ” ಎಂದು ಘೋಷಣೆ ಮಾಡಿದ್ದು ಸರ್ಕಾರದಿಂದ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಾಗುತ್ತೆ ಎಂದ್ರು.

ಶ್ರೀಗಳು ಕೋಟ್ಯಂತರ ಭಕ್ತರ ನಡೆದಾಡುವ ದೇವರು. ಅವರ ಆಶೀರ್ವಾದ ಪಡೆದರೆ ಸಾಕು ಕಷ್ಟ ಬಗೆಹರಿಯುವ ನಂಬಿಕೆ ಇತ್ತು. ಅವರು ಸಲಹೆಗಳನ್ನು ನೀಡಿ ಪ್ರಸಾದ ನೀಡಿ ಕಳಿಸುತ್ತಿದ್ದರು. 80 ವರ್ಷಗಳ ಕಾಲ ನಿರಂತರವಾಗಿ ಅಕ್ಷರ, ಅನ್ನ ನೀಡಿ ಉತ್ತಮ ವ್ಯಕ್ತಿಗಳಾಗಲು ಶ್ರಮಿಸಿದ್ದರು. ಧರ್ಮ, ಜಾತಿ ಭೇದವಿಲ್ಲದೆ ಎಲ್ಲರಿಗೂ ಆಶ್ರಯ ನೀಡಿ ಸಿದ್ಧಗಂಗಾ ಮಠದ ಕೀರ್ತಿ ವಿಶ್ವ ಮಟ್ಟಕ್ಕೆ ಕೊಂಡೊಯ್ದರು. ಶ್ರೀಗಳು ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದರು. ಅವರು ಭೌತಿಕವಾಗಿ ದೂರವಾಗಿದ್ದರೂ ಅವರ ತತ್ವಗಳು ನಮ್ಮೊಂದಿಗಿವೆ. ಸಿದ್ಧಗಂಗಾ ಮಠ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಸಿಎಂ ಬಿಎಸ್​ವೈ ಶ್ರೀಗಳನ್ನು ಸ್ಮರಿಸಿದರು.

ವೀರಾಪುರ ಗ್ರಾಮಕ್ಕೆ 25 ಕೋಟಿ ರೂ ಬಿಡುಗಡೆ
ಸರ್ಕಾರವು ಸ್ವಾಮೀಜಿಯವರ ಹುಟ್ಟೂರು ವೀರಪುರ ಗ್ರಾಮಕ್ಕೆ 25 ಕೋಟಿ ರೂ. ನೀಡಿದೆ. ಪ್ರತಿಮೆ, ಅಭಿವೃದ್ಧಿಗೆ ಹಣ ರಿಲೀಸ್ ಆಗಿದೆ. ವೀರಾಪುರ ಗ್ರಾಮ ಮುಂದಿನ ದಿನಗಳಲ್ಲಿ ತೀರ್ಥ ಕ್ಷೇತ್ರವಾಗಲು ಅಪೇಕ್ಷೆ ಇದೆ. ಯಾರೇ ಬಂದರೂ ಅಲ್ಲಿಗೆ ಭೇಟಿ ನೀಡ್ತಾರೆ ಎಂದರು.

ಇದೇ ವೇಳೆ ಮಾತನಾಡಿದ ಡಿಸಿಎಂ ಅಶ್ವತ್ಥ್ ನಾರಾಯಣ್ ಅವರು ಡಾ. ಶಿವಕುಮಾರ ಶ್ರೀಗಳು ಸಾರ್ಥಕ ಜೀವನ ನಡೆಸಿದ್ದರು. ಸಮಾಜಕ್ಕೆ ಅನ್ನ, ವಿದ್ಯೆ ಕೊಟ್ಟಿದ್ದಾರೆ. ಶ್ರೀಗಳು ಅಗಲಿದ್ದರೂ ಸದಾಕಾಲ ನಮ್ಮ ಜತೆ ಇರುತ್ತಾರೆ. ಸಾಮೀಜಿಗಳು ಮಾಡಿದ ಕಾರ್ಯದಿಂದ ಇಡೀ ವಿಶ್ವದಲ್ಲೇ ಅವರು ಭಕ್ತರು ಇದ್ದಾರೆ. ಶಿವಕುಮಾರ್ ಸ್ವಾಮೀಜಿಯವರ ಹುಟ್ಟೂರು ವೀರಪುರ ಗ್ರಾಮದಲ್ಲಿ ಅವರ ಪ್ರತಿಮೆ‌ ನಿರ್ಮಾಣ ಮಾಡುತ್ತೇವೆ” ಎಂದು ತುಮಕೂರಿನ ಕ್ಯಾತ್ಸಂದ್ರದಲ್ಲಿರುವ ಸಿದ್ಧಗಂಗಾ ಮಠದಲ್ಲಿ ಹೇಳಿದ್ರು.

ಸಿದ್ಧಗಂಗಾ ಮಠದ ಪೀಠಾಧಿಪತಿ ಸಿದ್ಧಲಿಂಗಶ್ರೀ ಮಾತನಾಡುತ್ತ “ಡಾ.ಶಿವಕುಮಾರಶ್ರೀಗಳನ್ನು ಪಡೆದಿದ್ದು ನಮ್ಮೆಲ್ಲರ ಪುಣ್ಯ. ಶ್ರೀಗಳು ತನು, ಮನ, ಧನ ಸಮಾಜಕ್ಕೆ ಅರ್ಪಿಸಿದ್ದರು. ಅವರ ಸೇವಾಜೀವನ ಎಲ್ಲರಿಗೂ ಆದರ್ಶ. ಮಕ್ಕಳಿಗೆ ಶಿಕ್ಷಣ ನೀಡುವ ಕನಸು ಸಾಕಾರಗೊಳಿಸಿದ್ರು” ಎಂದರು.

ಇನ್ನು ಸಿಎಂ B.S‌.ಯಡಿಯೂರಪ್ಪ ಕಷ್ಟದ ಪರಿಸ್ಥಿತಿಯಲ್ಲೂ ಹಲವು ಕಾರ್ಯಕ್ರಮ ಕೊಡುತ್ತಿದ್ದಾರೆ. ಯಡಿಯೂರಪ್ಪ ಶ್ರೀಗಳ ಅಂತರಂಗದ ಶಿಷ್ಯರಾಗಿದ್ದರು. ವೀರಾಪುರದಲ್ಲಿ ವಿಶ್ವವೇ ಗಮನಿಸುವ ಕೆಲಸವಾಗುತ್ತಿದೆ ಎಂದು ಸಿಎಂ B.S‌. ಯಡಿಯೂರಪ್ಪನವರ ಕಾರ್ಯವನ್ನು ಶ್ಲಾಘಿಸಿದ್ರು.

ಇಂದು ಕಾಯಕ ಯೋಗಿ ಶಿವಕುಮಾರ ಶ್ರೀಗಳ 2ನೇ ವರ್ಷದ ಪುಣ್ಯಸ್ಮರಣೆ!