
ಬೆಂಗಳೂರು, (ಮೇ 18): ಕರ್ನಾಟಕ ಕಾಂಗ್ರೆಸ್‌ನಲ್ಲಿ (karnataka Congress) ಸಚಿವ ಸಂಪುಟ ಪುನಾರಚನೆ ( cabinet reshuffle) ಹಾಗೂ ನಾಯಕತ್ವ ಬದಲಾವಣೆ ಗೊಂದಲ ಮುಂದುವರೆದಿದೆ. ಇಷ್ಟು ದಿನ ಹೈಕಮಾಂಡ್ ನೋಡೋಣ ನೋಡೋಣ ಎಂದೇ ಮುಂದಕ್ಕೆ ತಳ್ಳುತ್ತಾ ಬಂದಿದೆ. ಆದ್ರೆ, ಇದೀಗ ಕೇರಳ ಚುನಾವಣೆ ಮುಗಿದು ಸರ್ಕಾರ ರಚನೆಯಾಗಿರುವ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿದೆ. ಕೇರಳದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕೇರಳಂನಲ್ಲಿ ಇಡೀ ಹೈಕಮಾಂಡ್ ನಾಯಕರೇ ಬೀಡು ಬಿಟ್ಟಿದ್ದು, ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದಾರೆ. ದೆಹಲಿಯಲ್ಲಿ ಸಚಿವ ಸಂಪುಟ ಪುನಾರಚನೆ ಕುರಿತು ಅಧಿಕೃತ ಚರ್ಚೆ ನಡೆಸಲು ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಬಹಳ ಸಮಯ ಹೈಕಮಾಂಡ್ ನಾಯಕರ ಜೊತೆ ಕಾಲ ಕಳೆದಿರುವುದರಿಂದ ಕೇರಳದಲ್ಲೇ ಕರ್ನಾಟಕದ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗಳು ನಡೆದಿರಬಹುದು ಮಾತುಗಳು ಕೇಳಿಬರುತ್ತಿವೆ.
ಈ ಮಧ್ಯೆ ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನಾ ಸಮಾವೇಶದ ನೆಪದಲ್ಲಿ ಕೈ ನಾಯಕರ ನಡುವೆ ಹೊಸ ಸಮರ ಶುರುವಾಗಿದೆ. ತುಮಕೂರಿನಲ್ಲಿ ನಡೆಯಲಿರುವ ಸಮಾವೇಶದ ಕುರಿತು ಪಕ್ಷದ ಒಳಗೇ ಪರ,ವಿರೋಧದ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಹೌದು..ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 3 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಾಳೆ (ಮೇ 19) ತುಮಕೂರಿನಲ್ಲಿ ಬೃಹತ್ ಸಾಧನಾ ಸಮಾವೇಶ ಆಯೋಜಿಸಲಾಗಿದೆ. ಆದರೆ, ತುಮಕೂರಿನಲ್ಲೇ ಈ ಸಮಾವೇಶ ನಡೆಯುತ್ತಿರುವುದರಿಂದ ಜಿ. ಪರಮೇಶ್ವರ್ ಅವರನ್ನು ಮುಂದಿನ ಮುಖ್ಯಮಂತ್ರಿ ಮಾಡಲು ವೇದಿಕೆ ಸಜ್ಜುಗೊಳಿಸಲಾಗುತ್ತಿದೆ ಎಂಬ ವ್ಯಾಖ್ಯಾನಗಳು ಶುರುವಾಗಿವೆ. ಇದಕ್ಕೆ ಪುಷ್ಟಿ ನೀಡುವಂತೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಸಿದ್ದರಾಮಯ್ಯ ಬದಲಾವಣೆಯಾದರೆ ಪರಮೇಶ್ವರ್ ಸಿಎಂ ಆಗಲಿ, ನಾವು ಅದನ್ನೇ ಬಯಸುತ್ತೇವೆ ಎಂದು ಹೇಳಿಕೆ ನೀಡಿ ಹೊಸ ಬಾಂಬ್ ಸಿಡಿಸಿದ್ದಾರೆ.
2013ರಲ್ಲಿ ಜಿ. ಪರಮೇಶ್ವರ್ ಗೆದ್ದಿದ್ದರೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಟ್ಟುಕೊಡುತ್ತಿದ್ದರಾ ಎಂಬ ಪ್ರಶ್ನೆಗೆ ಕೆ.ಎನ್. ರಾಜಣ್ಣ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಸಿಎಂ ಸ್ಥಾನ ಬಿಟ್ಟುಕೊಡದೇ ಇರಲು ಸಿದ್ದರಾಮಯ್ಯ ಅವರ ಮನೆ ಆಸ್ತಿ ಅಲ್ಲ, ಅದು ಜನರು ಕೊಡುವ ಭಿಕ್ಷೆ ಎಂದು ಹೇಳಿದ್ದಾರೆ. ಸಿಎಂ ಸ್ಥಾನ ಯಾವುದೇ ರಾಜಕಾರಣಿಗಳ ಸ್ವಂತ ಆಸ್ತಿಯಲ್ಲ ಎನ್ನುವ ಮೂಲಕ ಹೈಕಮಾಂಡ್ ಮಟ್ಟದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಗಂಭೀರವಾಗಿರುವುದನ್ನು ಒಪ್ಪಿಕೊಂಡಿದ್ದಾರೆ.
ಇನ್ನು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಈ ಸ್ಪೋಟಕ ಹೇಳಿಕೆಗಳ ಹಿಂದೆ ದೊಡ್ಡ ರಾಜಕೀಯ ತಂತ್ರಗಾರಿಕೆ ಅಡಗಿದೆ. “ಇದ್ದರೆ ಸಿದ್ದರಾಮಯ್ಯ ಇರಲಿ, ಬದಲಾದರೆ ಪರಮೇಶ್ವರ್ ಆಗಲಿ” ಎಂದು ಹೇಳುವ ಮೂಲಕ, ಕೆ.ಎನ್. ರಾಜಣ್ಣ ಅವರು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದು ತಮಗೆ ಇಷ್ಟವಿಲ್ಲ ಎಂಬುದನ್ನು ಮತ್ತೊಮ್ಮೆ ಬಹಿರಂಗವಾಗಿ ಗಟ್ಟಿಯಾಗಿ ಹೇಳಿದ್ದಾರೆ. ಇದು ಕೆಪಿಸಿಸಿ ಅಧ್ಯಕ್ಷರ ಬಣದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಒಂದು ಕಡೆ ಕೇರಳ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಜೊತೆ ನಾಯಕತ್ವದ ಕುರಿತು ಪ್ರತ್ಯೇಕ ಚರ್ಚೆ ನಡೆಸುತ್ತಿದ್ದರೆ, ಇನ್ನೊಂದೆಡೆ ರಾಜ್ಯದಲ್ಲಿ ಪರಮೇಶ್ವರ್ ಪರ ಬ್ಯಾಟಿಂಗ್ ಶುರುವಾಗಿದೆ. ಹೈಕಮಾಂಡ್ ನಾಯಕರ ನಡೆ ಹಾಗೂ ತುಮಕೂರಿನ ಸಾಧನಾ ಸಮಾವೇಶದ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಯಾವ ರೀತಿಯ ರಾಜಕೀಯ ಬದಲಾವಣೆಗಳಾಗಲಿವೆ ಎಂಬುದನ್ನು ಕಾದುನೋಡಬೇಕಿದೆ.
ಒಟ್ಟಿನಲ್ಲಿ ಸಂಪುಟ ಪುನಾರಚನೆಗೆ ಏನೋ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಬಹುದು. ಆದ್ರೆ, ಕರ್ನಾಟಕ ಕಾಂಗ್ರೆಸ್‌ನಲ್ಲಿನ ನಾಯಕತ್ವ ಗೊಂದಲ ಇನ್ನೂ ಮುಂದುರೆದಿದ್ದು, ಇದಕ್ಕೆ ಹೈಕಮಾಂಡ್ ಯಾವಾಗ ತೆರೆ ಎಳೆಯಲಿದೆ ಎನ್ನುವುದನ್ನು ಕಾದುನೋಡಬೇಕಿದೆ.