ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ ವಿರುದ್ಧ ರಾಜ್ಯಪಾಲರಿಗೆ ದೂರು, ಏನಿದು ನೀತಿ ?

ರಾಜ್ಯ ಶಿಕ್ಷಣ ನೀತಿ ಆಯೋಗವು ರಾಜ್ಯದ ಎಲ್ಲಾ ಶಾಲೆಗಳಲ್ಲಿ 1 ರಿಂದ 5ನೇ ತರಗತಿವರೆಗೆ ದ್ವಿಭಾಷಾ ನೀತಿ ಕಡ್ಡಾಯಗೊಳಿಸಲು ಶಿಫಾರಸು ಮಾಡಿದೆ. ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿದ್ದು, ದ್ವಿಭಾಷಾ ನೀತಿಯನ್ನು ಅನುಷ್ಠಾನಗೊಳಿಸುವಂತೆ ಸಲಹೆಯನ್ನು ನೀಡಿದೆ. ಆದ್ರೆ, ಇದಕ್ಕೆ ವಿರೋಧ ವ್ಯಕ್ತವಾಗಿದ್ದು ಈ ಸಂಬಂಧ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಹಾಗಾದ್ರೆ, ಏನಿದು ದ್ವಿಭಾಷಾ ನೀತಿ? ಏಕೆ ವಿರೋಧ ಎನ್ನುವ ಡಿಟೇಲ್ಸ್ ಇಲ್ಲಿದೆ.

ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ ವಿರುದ್ಧ ರಾಜ್ಯಪಾಲರಿಗೆ ದೂರು, ಏನಿದು ನೀತಿ ?
Bilingual Policy
Edited By:

Updated on: Jul 21, 2026 | 3:40 PM

ಮುಖ್ಯಾಂಶಗಳು

  • ಸರ್ಕಾರಿ ಶಾಲೆಗಳಲ್ಲಿ 5ನೇ ತರಗತಿಯವರೆಗೆ ದ್ವಿ ಭಾಷಾ ನೀತಿ ಜಾರಿ ವಿಚಾರ
  • ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ರಾಜ್ಯಪಾಲರಿಗೆ ಮನವಿ
  • ಕನ್ನಡ ಭಾಷೆಯನ್ನು ಹಿನ್ನೆಲೆಗೆ ಸರಿಸುವ ಕುತಂತ್ರ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನಿಯೋಗದಿಂದ ದೂರು

ಬೆಂಗಳೂರು, (ಜುಲೈ 21): ರಾಜ್ಯ ಶಿಕ್ಷಣ ನೀತಿ ಆಯೋಗವು ರಾಜ್ಯದ ಎಲ್ಲಾ ಶಾಲೆಗಳಲ್ಲಿ 1 ರಿಂದ 5ನೇ ತರಗತಿವರೆಗೆ ದ್ವಿಭಾಷಾ ನೀತಿ (bilingual policy) ಜಾರಿಗೆಗೆ ಸರ್ಕಾರ ಮುಂದಾಗಿದ್ದು, ಮತ್ತೊಂದೆಡೆ ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ. ಸರ್ಕಾರಿ ಶಾಲೆಗಳಲ್ಲಿ 5ನೇ ತರಗತಿವರೆಗೆ ದ್ವಿಭಾಷಾ ನೀತಿ ಜಾರಿಗೆ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನಿಯೋಗ ಇಂದು (ಜುಲೈ 21) ಲೋಕಭವನದಲ್ಲಿ ಗವರ್ನರ್ ಥಾವರ್ ಚೆಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ದೂರು ನೀಡಿದೆ. ಕನ್ನಡ ಭಾಷೆಯನ್ನು ತೆರೆಮರೆಗೆ ಸರಿಸುವ ಕುತಂತ್ರವಾಗಿದೆ. ಹೀಗಾಗಿ ಇದಕ್ಕೆ ಅವಕಾಶ ನೀಡಬೇಡಿ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನಿಯೋಗವು ರಾಜ್ಯಪಾಲರಿಗೆ ಮನವಿ ಮಾಡಿದೆ.

ಹಾಲಿ ನಮ್ಮಲ್ಲಿ ತ್ರಿಭಾಷಾ ನೀತಿ ಜಾರಿಯಲ್ಲಿದೆ. ಪ್ರಥಮ-ಕನ್ನಡ, ದ್ವಿತೀಯ-ಆಂಗ್ಲಭಾಷೆ ಮತ್ತು ತೃತೀಯ-ಹಿಂದಿ ಭಾಷೆ ಬೋಧನೆ ಮಾಡಲಾಗುತ್ತಿದೆ. ದ್ವಿಭಾಷಾ ನೀತಿ ಜಾರಿಗೆ ಬಂದ ಮೇಲೆ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಕನ್ನಡ ಪ್ರಥಮ ಹಾಗೂ ದ್ವಿತೀಯ ಆಂಗ್ಲ ಮಾಧ್ಯಮವಾಗಿ ಮಾತ್ರ ವ್ಯಾಸಂಗ ಮಾಡುತ್ತಾರೆ. ತೃತೀಯ ಭಾಷೆ ಇರುವುದಿಲ್ಲ. ಇನ್ನು, ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಆಂಗ್ಲ ಭಾಷೆಯನ್ನು ಪ್ರಥಮ ಭಾಷೆಯಾಗಿ ವ್ಯಾಸಂಗ ಮಾಡಲಿದ್ದು, ಕನ್ನಡವನ್ನು ದ್ವಿತೀಯ ಭಾಷೆಯಾಗಿ ವ್ಯಾಸಂಗ ಮಾಡುತ್ತಾರೆ.

ಇದನ್ನೂ ಓದಿ: ಶಾಲಾ ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಸೇರಿದಂತೆ ಹಲವು ಶಿಫಾರಸು ಮಾಡಿದ ಎಸ್​ಇಪಿ

ದ್ವಿಭಾಷಾ ನೀತಿಗೆ ರಾಜ್ಯ ಶಿಕ್ಷಣ ನೀತಿ ಶಿಫಾರಸ್ಸು

ಪ್ರಾಥಮಿಕ ಶಿಕ್ಷಣದ ಎಲ್ಲಾ ಮಾದರಿಯ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕದಿಂದ 5ನೇ ತರಗತಿವರೆಗೆ ಕನ್ನಡ ಅಥವಾ ಮಾತೃ ಭಾಷೆ ಮತ್ತು ದ್ವಿಭಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸುವಂತೆ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಆಯೋಗ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ. ಆಯೋಗದ ಅಧ್ಯಕ್ಷ ಪ್ರೊ. ಸುಖ್‌ದೇವ್‌ ಥೋರಟ್‌ ನೇತೃತ್ವದ ನಿಯೋಗ ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.

ಶಿಫಾರಸ್ಸಿನಲ್ಲೇನಿದೆ?

ಇತ್ತೀಚಿನ ದಿನಗಳಲ್ಲಿ ಬೋಧನಾ ಮಾಧ್ಯಮ ಮತ್ತು ತ್ರಿಭಾಷಾ ಸೂತ್ರದ ವಿಷಯ ವಿವಾದ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮ ಸೇರಿದಂತೆ ಎಲ್ಲಾ ಮಂಡಳಿಗಳ ಶಾಲೆಗಳಲ್ಲಿ 5ನೇ ತರಗತಿವರೆಗೆ ಕನ್ನಡ, ಮಾತೃಭಾಷೆಯನ್ನೇ ಬೋಧನೆ ಮಾಡುವುದನ್ನು ಕಡ್ಡಾಯಗೊಳಿಸಬೇಕೆಂದು ಆಯೋಗ ತನ್ನ ವರದಿಯಲ್ಲಿ ಸಲಹೆ ನೀಡಿದೆ. ಅಲ್ಲದೆ, ದ್ವಿಭಾಷಾ ನೀತಿ ಅನುಷ್ಠಾನ ಮಾಡುವುದು ಸೂಕ್ತ. ಕನ್ನಡ ಅಥವಾ ಮಾತೃ ಭಾಷೆ ಜತೆಗೆ ಇಂಗ್ಲಿಷ್‌ ಭಾಷೆಯನ್ನು ಬೋಧಿಸುವುದು ಉತ್ತಮ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಆ ಮೂಲಕ ಆಯೋಗವು ಪರೋಕ್ಷವಾಗಿ ತ್ರಿಭಾಷಾ ನೀತಿ ಅವಶ್ಯಕತೆ ಇಲ್ಲ ಎಂದು ಪ್ರತಿಪಾದಿಸಿದೆ. ಅದೇ ರೀತಿ ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ವಿಭಾಗಗಳಲ್ಲಿ ಆಯೋಗ ಸರಕಾರಕ್ಕೆ ಪ್ರತ್ಯೇಕ ಶಿಫಾರಸುಗಳನ್ನು ಮಾಡಿದೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದ ವೇಳೆ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ರದ್ದುಗೊಳಿಸಿ ಎಸ್‌ಇಪಿ ಜಾರಿಗೆ ತರುವುದಾಗಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರುವ ಮೊದಲೇ ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ಘೋಷಿಸಿತ್ತು. ಆನಂತರ ಅಕಾರಕ್ಕೆ ಬಂದ ತಕ್ಷಣ 2023ರ ಅಕ್ಟೋಬರ್‌ನಲ್ಲಿ ರಾಜ್ಯ ಶಿಕ್ಷಣ ಆಯೋಗವನ್ನು ಶಿಕ್ಷಣ ತಜ್ಞ ಪ್ರೊ. ಸುಖ್‌ದೇವ್‌ ಥೋರಟ್‌ ಅಧ್ಯಕ್ಷತೆಯಲ್ಲಿ ರಚಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us