
ಬೆಂಗಳೂರು, ಜೂನ್ 25: ‘ಮುಂದೆ ಹೀಗೆ ಆದರೆ ಸಹಿಸಲು ಸಾಧ್ಯವಿಲ್ಲ. ಕರೆದು ಮಾತನಾಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ (Siddaramaih) ಕಾಂಗ್ರೆಸ್ ಹೈಕಮಾಂಡ್ (Congress High Command) ಖಡಕ್ ಸಂದೇಶ ರವಾನಿಸಿದೆ ಎಂಬುದು ತಿಳಿದುಬಂದಿದೆ. ದೆಹಲಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಬುಧವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇದೇ ವೇಳೆ, ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಹಾಗೂ ಇತರರು ನೀಡಿರುವ ಬಹಿರಂಗ ಹೇಳಿಕೆಗಳ ಬಗ್ಗೆ ಚರ್ಚೆ ನಡೆದಿದೆ.
ಬಿಆರ್ ಪಾಟೀಲ್ ಎರಡನೇ ಬಾರಿ ಈ ರೀತಿಯಾದ ಹೇಳಿಕೆ ನೀಡಿದ್ದಾರೆ. ಅವರನ್ನು ಕರೆದು ಮಾತನಾಡಿ. ಮುಂದೆ ಇದೇ ರೀತಿ ಆದರೆ ಸಹಿಸಲು ಸಾಧ್ಯವಿಲ್ಲ. ಇನ್ನೊಮ್ಮೆ ಬಹಿರಂಗ ಹೇಳಿಕೆ ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ಸಿದ್ದರಾಮಯ್ಯನವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರನ್ನು ದೆಹಲಿಯ ಲೋದಿ ಎಸ್ಟೇಟ್ನಲ್ಲಿರುವ ನಿವಾಸದಲ್ಲಿ ಭೇಟಿಯಾದರು. ಸಿಎಂಗೆ ಸಚಿವ ಮಹದೇವಪ್ಪ, ಶಾಸಕ ಅಶೋಕ್ ಪಟ್ಟಣ್ ಸಾಥ್ ನೀಡಿದರು. ಶಾಸಕರ ಅಸಮಾಧಾನ ಸೇರಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಿತು.
ಸರ್ಕಾರ ಬಗ್ಗೆ ಕಾಂಗ್ರೆಸ್ ಶಾಸಕರಿಂದ ಬಹಿರಂಗ ಹೇಳಿಕೆ ವಿಚಾರವಾಗಿ ಚರ್ಚಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮುಂದಿನ ವಾರ ಬೆಂಗಳೂರಿಗೆ ಬರಲಿದ್ದಾರೆ. ರಾಜ್ಯ ನಾಯಕರ ಜತೆ ಸಭೆ ನಡೆಸುವ ರಣದೀಪ್ ಸುರ್ಜೇವಾಲ ಪಕ್ಷದ ಪದಾಧಿಕಾರಿಗಳು, ಮಂತ್ರಿಗಳ ಜತೆ ಪ್ರತ್ಯೇಕ ಸಭೆ ನಡೆಸುವ ಸಾಧ್ಯತೆ ಇದೆ. ಕಾಂಗ್ರೆಸ್ ಶಾಸಕರ ಬಹಿರಂಗ ಹೇಳಿಕೆಗೆ ಬ್ರೇಕ್ ಹಾಕಲು ಸೂಚನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಂಎಲ್ಸಿಗಳ ಪಟ್ಟಿಯಲ್ಲಿ ಹೆಸರು ಬದಲಾವಣೆ ಬಗ್ಗೆಯೂ ಹೈಕಾಂಡ್ ನಾಯಕರ ಜತೆ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ನಾಲ್ಕರಲ್ಲಿ ಒಂದು ಹೆಸರು ಕೈ ಬಿಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ರಮೇಶ್ ಬಾಬು ಅಥವಾ ದಿನೇಶ್ ಅಮಿನ್ ಮಟ್ಟು ಹೆಸರು ಕೈ ಬಿಡುವ ಪ್ರಸ್ತಾಪವಿದೆ ಎನ್ನಲಾಗಿದೆ.
ಇದನ್ನೂ ಓದಿ: ವಸತಿ ಯೋಜನೆಯಲ್ಲಿ ಲಂಚಾವತಾರದ ಬಿ.ಆರ್ ಪಾಟೀಲ್ ಆಡಿಯೋ ಲೋಕಾಯುಕ್ತ ಅಂಗಳಕ್ಕೆ
ಎಂಎಲ್ಸಿಗಳ ಪಟ್ಟಿಯಲ್ಲಿ ನೂತನ ಹೆಸರು ಸೇರ್ಪಡೆಗೊಳಿಸಿ ಶೀಘ್ರದಲ್ಲೇ ಪಟ್ಟಿ ರವಾನೆ ಮಾಡುವ ನಿರೀಕ್ಷೆ ಇದೆ. ಈ ವಿಚಾರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ವಿಶ್ವಾಸಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.