ವಸತಿ ಯೋಜನೆಯಲ್ಲಿ ಲಂಚಾವತಾರದ ಬಿ.ಆರ್ ಪಾಟೀಲ್ ಆಡಿಯೋ ಲೋಕಾಯುಕ್ತ ಅಂಗಳಕ್ಕೆ
ವಸತಿ ಯೋಜನೆ ಮನೆಗಳನ್ನು ಹಂಚಲು ಲಂಚ ಸ್ವೀಕರಿಸಲಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಮಾಡಿರುವ ಆರೋಪ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಆಡಿಯೋ ಆಡಳಿತರೂಢ ಕಾಂಗ್ರೆಸ್ ಸರ್ಕಾರ ತೀವ್ರ ಮುಜುಗರ ಉಂಟಾಗುವಂತೆ ಮಾಡಿದೆ. ಅಲ್ಲದೇ, ಈ ಆಡಿಯೋ ವಿಪಕ್ಷ ನಾಯಕರಿಗೆ ಅಸ್ತ್ರವಾಗಿದ್ದು, ಸರ್ಕಾರದ ವಿರುದ್ಧ ವಾಗ್ದಾಳಿ ಮಾಡುತ್ತಿದ್ದಾರೆ.

ಬೆಂಗಳೂರು, ಜೂನ್ 24: ರಾಜೀವ್ ಗಾಂಧಿ ವಸತಿ ಯೋಜನೆ ಅಡಿ (Rajiv Gandhi Housing Scheme) ಮನೆಗಳ ಹಂಚಿಕೆಗೆ ಲಂಚ ಪಡೆಯಲಾಗಿದೆ ಎಂದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕ, ಕರ್ನಾಟಕ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್ ಪಾಟೀಲ್ (BR Patil) ಮಾಡಿರುವ ಆರೋಪದ ಆಡಿಯೋ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ತಮ್ಮದೇ ಸರ್ಕಾರದ ವಿರುದ್ಧ ಬಿ ಆರ್ ಪಾಟೀಲ್ ಅವರು ಮಾಡಿರುವ ಆರೋಪ ರಾಜ್ಯ ರಾಜಕೀಯದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ. ಸದ್ಯ, ಈ ವಿಚಾರ ಲೋಕಾಯುಕ್ತ ಮೆಟ್ಟಿಲು ಹತ್ತಿದೆ. ಬಿ.ಆರ್.ಪಾಟೀಲ್-ಸರ್ಫರಾಜ್ ಸಂಭಾಷಣೆ ಆಡಿಯೋ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ನೈಜ ಹೋರಾಟಗಾರರ ವೇದಿಕೆ ಅಧ್ಯಕ್ಷ ವೆಂಕಟೇಶ್ ಅವರು ದೂರು ನೀಡಿದ್ದಾರೆ.
ಲಂಚ ಕೊಟ್ಟರೇ ನಿವೇಶನ ಕೊಡುವ ವಿಚಾರವಾಗಿ ಶಾಸಕ ಬಿ.ಆರ್.ಪಾಟೀಲ್ ಮತ್ತು ಸರ್ಫರಾಜ್ ನಡುವೆ ಮಾತುಕತೆ ನಡೆದಿದೆ. ಲೋಕಾಯುಕ್ತರು ಸುಮೋಟೋ ಕೇಸ್ ದಾಖಲಿಸಿಕೊಳ್ಳಬೇಕಿತ್ತು. ಜನರ ತೆರಿಗೆ ಹಣವನ್ನು ಇವರು ಬಳಸಿಕೊಂಡು ವಂಚನೆ ಮಾಡಿದ್ದಾರೆ. ಸರ್ಫರಾಜ್ ಖಾನ್ ಅವರು ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆಗಳು ಹಂಚಬೇಕಿತ್ತು. ದುರ್ಬಲರಿಗೆ ಹಂಚಿಕೆಯಾಗಬೇಕಿದ್ದ ಮನೆಗಳಿಗೆ ಹಣ ಪಡೆಯುತ್ತಿದ್ದಾರೆ. ಮನೆಗಳ ಹಂಚಿಕೆಗೆ ಪ್ರತಿ ಮನೆಗೆ 10 ಸಾವಿರ ಹಣ ಪಡೆಯಲಾಗಿದೆ. ಬಿಆರ್ಪಿ, ಸರ್ಫರಾಜ್ ಮಾತನಾಡಿರುವುದರಲ್ಲಿ ಸತ್ಯಾಂಶ ಇರಬಹುದು. ಹೀಗಾಗಿ ಆಡಿಯೋ ಇಟ್ಟುಕೊಂಡು ತನಿಖೆ ನಡೆಸುವಂತೆ ದೂರು ನೀಡಿದ್ದಾರೆ.
ಸಿಎಂ, ಡಿಸಿಎಂ ಭೇಟಿಯಾಗಲಿರುವ ಬಿಆರ್ ಪಾಟೀಲ್
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭೇಟಿ ಮಾಡುವಂತೆ ನನ್ನನ್ನು ಕರೆದಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್ ಅವರು ಈವರೆಗೆ ನನ್ನ ಜತೆ ಮಾತನಾಡಿಲ್ಲ. ವಸತಿ ಸಚಿವ ಜಮೀರ್ ಅಹ್ಮದ್ ಕರೆದರೆ ಹೋಗಿ ಮಾತನಾಡುತ್ತೇನೆ ಎಂದು ಶಾಸಕ ಬಿ.ಆರ್.ಪಾಟೀಲ್ ಹೇಳಿದರು.
ಬಿಆರ್ ಪಾಟೀಲ್ ಹೇಳಿಕೆಗೆ ವಿರೋಧ
ವಸತಿ ಯೋಜನೆ ಮನೆಗಳ ಹಂಚಿಕೆಗೆ ಲಂಚ ಪಡೆದ ಆರೋಪ ಮಾಡಿರುವ ಶಾಸಕರಾದ ಬಿ.ಆರ್.ಪಾಟಿಲ್ ಮತ್ತು ರಾಜು ಕಾಗೆ ಅವರ ಹೇಳಿಕೆಗೆ ನನ್ನ ವಿರೋಧ ಇದೆ. ಪಕ್ಷಕ್ಕೆ ಡ್ಯಾಮೇಜ್ ಆಗುವಂತಹ ಹೇಳಿಕೆಯನ್ನ ಕೊಡಬಾರದು ಸರ್ಕಾರ ಅಲ್ಲಾಡುತ್ತೆ ಎಂಬ ಹೇಳಿಕೆ ತಪ್ಪು ಎಂದು ಕೋಲಾರದಲ್ಲಿ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಇದನ್ನೂ ಓದಿ: ಲಂಚದ ಆರೋಪ ಸಮರ್ಥಿಸಿದ ಬಿಆರ್ ಪಾಟೀಲ್: ‘ಟಿವಿ9’ ರಿಯಾಲಿಟಿ ಚೆಕ್ನಲ್ಲಿ ಬಯಲಾಯ್ತು ಅಕ್ರಮದ ರಹಸ್ಯ
ಶಾಸಕರಿಗೆ ಸಚಿವ ಜಮೀರ್ ಅಹ್ಮದ್ ಖಾನ್ ಗೌರವ ಕೊಡುತ್ತಾರೆ. ಜಮೀರ್ ಅಹ್ಮದ್ ವಿಚಾರದಲ್ಲಿ ನನ್ನದು ಯಾವ ದೂರುಗಳಿಲ್ಲ. ಹಣ ಕೊಟ್ಟು ಯಾವುದೇ ಕೆಲಸ ಮಾಡಿಕೊಂಡಿಲ್ಲ. ಜಮೀರ್ ಅಹ್ಮದ್ ವಿರುದ್ಧ ನೀಡಿರುವ ಹೇಳಿಕೆ ಅಚ್ಚರಿ ತಂದಿದೆ. ಅಸಮಾಧಾನಿತ ಶಾಸಕರನ್ನು ಕರೆದು ವರಿಷ್ಠರು ಮಾತನಾಡಬೇಕು. ಬಿ.ಆರ್.ಪಾಟೀಲ್ ಹಿರಿಯ ಶಾಸಕ, ಆ ರೀತಿ ಹೇಳಿಕೆ ನೀಡಬಾರದು. ಎಲ್ಲಾ ಶಾಸಕರಿಗೂ ಪ್ರತಿ ದಿನ ಸಿಎಂ ಹಾಗೂ ಡಿಸಿಎಂ ಸಿಗುತ್ತಾರೆ ಎಂದರು.
ಬಿ.ಆರ್.ಪಾಟೀಲ್ ಹೇಳಿಕೆ ಅಕ್ಷರಶಃ ಸತ್ಯ
ಶಾಸಕ ಬಿ.ಆರ್.ಪಾಟೀಲ್ ಹೇಳಿಕೆ ಅಕ್ಷರಶಃ ಸತ್ಯ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೊಂಚಿಗೇರಿ ಗ್ರಾಮ ಪಂಚಾಯಿತಿಯಲ್ಲಿ ಹಗರಣ ನಡೆದಿದೆ. ಶಾಸಕರ ಶಿಫಾರಸು ಪತ್ರ ಇಲ್ಲದೇ 150 ಮನೆಗಳನ್ನು ಮಂಜೂರು ಮಾಡಲಾಗಿದೆ. ಹಣ ಪಡೆದು ಇಲಾಖೆಯ ಅಧಿಕಾರಿಗಳು ಮನೆ ಮಂಜೂರು ಮಾಡಿದ್ದಾರೆ. ಶಾಸಕರ ಶಿಫಾರಸು ಪತ್ರ ಇಲ್ಲದೆ ಮನೆಗಳ ಮಂಜೂರು ಸಾಧ್ಯವಿಲ್ಲ. ನನ್ನ ಕ್ಷೇತ್ರದಲ್ಲೂ ಹಣ ಪಡೆದು ಮನೆಗಳ ಹಂಚಿಕೆಯಾಗಿದೆ. ಈ ಹಗರಣ ಆಗಿದ್ದು ಅಕ್ಷರಶಃ ಸತ್ಯ, ಯಾವುದೇ ಸಂಶಯ ಬೇಡ ಎಂದು ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಆರೋಪ ಮಾಡಿದರು.
ವರದಿ: ವಿಕಾಸ್
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








