ಪಿಎಸ್ಐ ಪರಶುರಾಮ ಮನೆಯಲ್ಲಿ ಶಾಸಕ ಚೆನ್ನಾರೆಡ್ಡಿ ಲೆಟರ್​ ಹೆಡ್​​ ಪತ್ತೆ!

ಪಿಎಸ್ಐ ಪರಶುರಾಮ ಸಾವಿಗೆ ಕಾಂಗ್ರೆಸ್​ ಶಾಸಕ ಚೆನ್ನಾರೆಡ್ಡಿ ಕಾರಣವೆಂದು ಆರೋಪ ಕೇಳಿಬಂದಿದೆ. ಯಾದಗಿರಿ ಪಿಎಸ್ಐ ಪರಶುರಾಮ ಅನುಮಾನಸ್ಪದ ಸಾವು ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ನಡೆಸುತ್ತಿದ್ದಾರೆ. ಇದೀಗ ಸಿಐಡಿ ಅಧಿಕಾರಿಗಳು ಗುರುವಾರ ಪರಶುರಾಮ ಮನೆಯಲ್ಲಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪಿಎಸ್ಐ ಪರಶುರಾಮ ಮನೆಯಲ್ಲಿ ಶಾಸಕ ಚೆನ್ನಾರೆಡ್ಡಿ ಲೆಟರ್​ ಹೆಡ್​​ ಪತ್ತೆ!
ಯಾದಗಿರಿ ಪಿಎಸ್ಐ ಪರಶುರಾಮ
Follow us
ಅಮೀನ್​ ಸಾಬ್​
| Updated By: ವಿವೇಕ ಬಿರಾದಾರ

Updated on:Aug 09, 2024 | 10:01 AM

ಯಾದಗಿರಿ, ಆಗಸ್ಟ್​ 09: ಪಿಎಸ್ಐ ಪರಶುರಾಮ (Yadgiri PSI Parshuram) ಅನುಮಾನಾಸ್ಪದ ಸಾವು ಪ್ರಕರಣದ ತನಿಖೆಯನ್ನು ಸಿಐಡಿ (CID) ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಸಿಐಡಿ ಅಧಿಕಾರಿಗಳು ಗುರುವಾರ (ಆಗಸ್ಟ್​.08) ರಂದು ಪೊಲೀಸ್​ ವಸತಿ ಗೃಹದ ಪರಶುರಾಮ ಮನೆಗೆ ತೆರಳಿ ಸ್ಥಳ ಮಹಜರು ನಡೆಸಿದ್ದಾರೆ. ಮನೆಯಲ್ಲಿ ಕಾಂಗ್ರೆಸ್​ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹೆಸರಿನ ಲೆಟರ್​ ಹೆಡ್​ ಪತ್ತೆಯಾಗಿದೆ. ಕಾನೂನು ಸುವ್ಯವಸ್ಥೆ ಪೋಸ್ಟಿಂಗ್ ಬೇರೆಯವರಿಗೆ ಕೊಟ್ಟ ಹಿನ್ನೆಲೆಯಲ್ಲಿ ಅಪರಾಧ ವಿಭಾಗದ ಪೋಸ್ಟಿಂಗ್ ಕೊಡಿ ಎಂದು ಪರಶುರಾಮ ಕೇಳಿದ್ದರು. ಇದೇ ಕಾರಣಕ್ಕೆ ಕಾಂಗ್ರೆಸ್​ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಯಾದಗಿರಿ ನಗರ ಠಾಣೆಯ ಅಪರಾಧ ವಿಭಾಗದ ಪಿಎಸ್​ಐ ಪೋಸ್ಟಿಂಗ್​ಗಾಗಿ ಲೆಟರ್ ಹೆಡ್ ನೀಡಿದ್ದರು. ಈ ಲೆಟರ್​ ಹೆಡ್​​ ಸಿಐಡಿ ಅಧಿಕಾರಿಗಳು ಮಹಜರು ವೇಳೆ ಪತ್ತೆಯಾಗಿದ್ದು, ವಶಕ್ಕೆ ಪಡೆದಿದ್ದಾರೆ.

ಯಾದಗಿರಿ ನಗರ ಠಾಣೆಯ ಅಪರಾಧ ವಿಭಾಗದ ಪಿಎಸ್​ಐ ಪೋಸ್ಟಿಂಗ್​ಗಾಗಿ ಶಾಸಕ ಚೆನ್ನಾರೆಡ್ಡಿ 15 ಲಕ್ಷ ರೂ. ಕೇಳಿದ್ದರು ಎನ್ನಲಾಗಿದೆ. ಹೀಗಾಗಿ ಪಿಎಸ್​ಐ ಪರಶುರಾಮ ಹಣ ಹೊಂದಿಸುತ್ತಿದ್ದರು. ವಸತಿ ಗೃಹದಲ್ಲಿ ಪೋಸ್ಟಿಂಗ್​ಗಾಗಿ ಕೂಡಿಟ್ಟ 7.33 ಲಕ್ಷ ನಗದು ಸಿಕ್ಕಿದ್ದು, ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪರಶುರಾಮ ಅವರಿಗೆ ಸೇರಿದ ನಾಲ್ಕು ಬ್ಯಾಂಕ್ ಖಾತೆಯಲ್ಲಿನ ಹಣದ ಮಾಹಿತಿಯನ್ನೂ ಸಹ ಸಿಐಡಿ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಜೊತೆಗೆ ಇಲಾಖಾ ರಿವಾಲ್ವರ್​ (ಬಂದೂಕು), ಸಿಮ್​ಕಾರ್ಡ್​​, ಮೊಬೈಲ್ ಮತ್ತು ವಾಕಿಟಾಕಿ ಜಪ್ತಿ ಮಾಡಿದ್ದಾರೆ. ಪರಶುರಾಮ ಮೃತಪಟ್ಟ ಜಾಗದಲ್ಲಿ ಮುಗಿನಿಂದ ಬಾಯಿಂದ ಬಂದ ರಕ್ತದ ಮಾದರಿ ಸಹ ಸಂಗ್ರಹಿಸಲಾಗಿದೆ.

ಇದನ್ನೂ ಓದಿ: ಯಾದಗಿರಿ ಪಿಎಸ್​ಐ ಪರಶುರಾಮ ಸಹಜ ಸಾವು ಎಂದ ಪರಮೇಶ್ವರ್​: ಎ1 ಕಾಂಗ್ರೆಸ್​ ಶಾಸಕ ಚೆನ್ನಾರೆಡ್ಡಿ

ಮೊಬೈಲ್​ನಲ್ಲಿವೆ ಮಹತ್ವದ ಆಡಿಯೋಗಳು

ಮೃತ ಪಿಎಸ್​ಐ ಪರಶುರಾಮ ಪ್ರತಿಯೊಂದು ಕರೆಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಪೋಸ್ಟಿಂಗ್ ಆಗದೆ ಇರುವ ಬಗ್ಗೆ, ಸ್ನೇಹಿತರು ಮತ್ತು ಕಟುಂಬಸ್ಥರ ಮುಂದೆ ಪೋಸ್ಟಿಂಗ್ ಹಣ ಕೇಳಿರುವ ದೂರವಾಣಿ ಮೂಲಕ ಸಂಭಾಷಣೆ ಮಾಡಿದ್ದಾರೆ. ಎಲ್ಲ ಸಂಭಾಷಣೆಗಳ ಆಡಿಯೋ ಮೊಬೈಲ್​​ನಲ್ಲಿವೆ.

ಯಾದಗಿರಿ ಸೈಬರ್ ಕ್ರೈಂ ಠಾಣೆಯ ಪಿಎಸ್​​ಐ ಆಗಿದ್ದ ಪರಶುರಾಮ ಮನೆಯಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ಪಿಎಸ್​ಐ ಪರಶುರಾಮ ಸಾವಿಗೆ ಕಾಂಗ್ರೆಸ್​ ಶಾಸಕ ಚೆನ್ನಾರೆಡ್ಡಿ ಮತ್ತು ಅವರ ಪುತ್ರ ಪಂಪಾಗೌಡ ಕಾರಣವೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈಗಾಗಲೆ ಶಾಸಕ ಚೆನ್ನಾರೆಡ್ಡಿ ವಿರುದ್ಧ ಜಾತಿ ನಿಂದನೆ ಆರೋಪದಡಿ ದೂರು ದಾಖಲಾಗಿದೆ. ಪಿಎಸ್​ಐ ಪರಶುರಾಮ ಸಾವು ರಾಜ್ಯ ಸರ್ಕಾರಕ್ಕೆ ತಲೆನೋವಾಗಿದೆ. ಮತ್ತು ಪಿಎಸ್ಐ ಪರಶುರಾಮ ಸಾವು ಬಳಿಕ ಶಾಸಕ ಚೆನ್ನಾರೆಡ್ಡಿ ನಾಪತ್ತೆಯಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:53 am, Fri, 9 August 24