ವಿದ್ಯಾಕಾಶಿಯಲ್ಲಿ ನಿರ್ಮಾಣವಾಗುತ್ತಿದೆ ಉನ್ನತ ಶಿಕ್ಷಣ ಅಕಾಡೆಮಿಯ ಕಟ್ಟಡ
ಈ ನಿಟ್ಟಿನಲ್ಲಿ ಬೆಲ್ಲದ ಈ ಯೋಜನೆ ಜಾರಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಕಾನೂನು ವಿಶ್ವವಿದ್ಯಾಲಯ, ಐಐಟಿ, ಐಐಐಟಿ ಕಾರ್ಯ ನಿರ್ವಹಿಸುತ್ತಿವೆ. ಇವೆಲ್ಲವುಗಳ ಸಹಾಯದಿಂದ ಉನ್ನತ ಶಿಕ್ಷಣ ಅಕಾಡೆಮಿ ಉತ್ತಮ ಕಾರ್ಯ ನಿರ್ವಹಿಸಲಿದೆ ಎನ್ನುವುದು ಶಾಸಕ ಅರವಿಂದ ಬೆಲ್ಲದ ಅವರ ಆಶಯ.
ಧಾರವಾಡ: ಶಾಲಾ ಮಕ್ಕಳಿಗೆ ಹೇಗೆ ಶಿಕ್ಷಣ ನೀಡಬೇಕು ಎನ್ನುವುದರ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ತರಬೇತಿ ನೀಡುವ ಸಂಸ್ಥೆಗಳು ಎಲ್ಲಾ ಕಡೆಗಳಲ್ಲಿ ಸ್ಥಾಪನೆಯಾಗಿದೆ. ಆದರೆ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಲಿಸುವ ಅಧ್ಯಾಪಕರು, ಪ್ರಾಧ್ಯಾಪಕರುಗಳಿಗೆ ತರಬೇತಿ ನೀಡುವ ವ್ಯವಸ್ಥೆಯೇ ನಮ್ಮಲ್ಲಿಲ್ಲ. ಇದರಿಂದಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿಯ ಶಿಕ್ಷಣದಲ್ಲಿ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಸರಿಯಾಗಿ ತರಬೇತಿ ಸಿಗದ ಅಧ್ಯಾಪಕರು, ಪ್ರಾಧ್ಯಾಪಕರು ಅದೆಷ್ಟರಮಟ್ಟಿಗೆ ಕಲಿಸುತ್ತಾರೆ ಎನ್ನುವ ಪ್ರಶ್ನೆ ಎಲ್ಲರಲ್ಲು ಕಾಡುತ್ತಿದೆ. ಸದ್ಯ ಇದಕ್ಕೆ ಉತ್ತರ ಎನ್ನುವಂತೆ ವಿದ್ಯಾಕಾಶಿ ಧಾರವಾಡದಲ್ಲಿ ಶಿಕ್ಷಣ ತರಬೇತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಧಾರವಾಡದ ಹೊಯ್ಸಳ ನಗರದಲ್ಲಿ ನಿರ್ಮಾಣವಾಗುತ್ತಿದೆ ಅದ್ಭುತ ಕಟ್ಟಡ ಧಾರವಾಡ ನಗರದ ಹೊಯ್ಸಳ ನಗರ ಬಡಾವಣೆಯಲ್ಲಿ ಇದೀಗ ದೊಡ್ಡದೊಂದು ಕಟ್ಟಡ ನಿರ್ಮಾಣವಾಗುತ್ತಿದ್ದು, ಕರ್ನಾಟಕ ವಿಶ್ವವಿದ್ಯಾಲಯ ಅಧೀನದ ಸುಮಾರು 27 ಎಕರೆ ಜಾಗದಲ್ಲಿ ನಿರ್ಮಿಸಲಾಗುತ್ತಿರುವ ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿಯ ಕಟ್ಟಡ ಕಾಮಗಾರಿಯ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಕಾಡೆಮಿಯ ಆಡಳಿತ ಭವನ, ಹಾಸ್ಟೆಲ್, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಕ್ಯಾಂಟೀನ್, ಸ್ಟಾಫ್ ಕ್ವಾಟರ್ಸ್ ಕಟ್ಟಡಗಳ ನಿರ್ಮಾಣ ಕಾಮಗಾರಿಯನ್ನು ಶಾಸಕ ಬೆಲ್ಲದ ಪರಿಶೀಲಿಸಿದ್ದು, ಕಾಮಗಾರಿ ಕಳಪೆಯಾಗದಂತೆ ಕಾರ್ಯ ನಿರ್ವಹಿಸಬೇಕು ಎಂದು ಬೆಲ್ಲದ ಎಚ್ಚರಿಸಿದ್ದಾರೆ. ಆ ಮೂಲಕ ಈಗಾಗಲೇ ಕಾಮಗಾರಿ ಸಾಕಷ್ಟು ವಿಳಂಬವಾಗಿದ್ದು, ನಿಗದಿತ ಅವಧಿಗೆ ಕಾಮಗಾರಿ ಮುಕ್ತಾಯಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಶಾಸಕ ಬೆಲ್ಲದಗೂ ಈ ಕಟ್ಟಡಕ್ಕೂ ಸಂಬಂಧವೇನು? ಈ ಯೋಜನೆ ಶಾಸಕ ಅರವಿಂದ ಬೆಲ್ಲದ ಅವರ ಕನಸಿನ ಕೂಸು. 2014 ರಲ್ಲಿಯೇ ಬೆಲ್ಲದ ಇಂತಹದೊಂದು ಸಂಸ್ಥೆಯ ಅವಶ್ಯಕತೆ ಇದೆ ಎಂದು ವಿವರವಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಅಲ್ಲದೇ ಇಂತಹ ಸಂಸ್ಥೆಯನ್ನು ವಿದ್ಯಾಕಾಶಿ ಧಾರವಾಡದಲ್ಲಿಯೇ ಆರಂಭಿಸಬೇಕು ಎಂದು ಮನವಿ ಮಾಡಿ ಕೊಂಡಿದ್ದರು. ಹಿಂದಿನ ವರ್ಷ ಬಜೆಟ್ನಲ್ಲಿ ಈ ಪ್ರಸ್ತಾವನೆ ಸ್ವೀಕಾರವಾಗಿದ್ದು, ಅಕಾಡೆಮಿಗಾಗಿ ಕರ್ನಾಟಕ ವಿಶ್ವವಿದ್ಯಾಲಯದ 27 ಎಕರೆ ಜಮೀನು ನೀಡಿದರೆ, ಸರ್ಕಾರ ಕಟ್ಟಡ ನಿರ್ಮಾಣಕ್ಕೆ 90 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿತು. ಇದರಲ್ಲಿ 70 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಉನ್ನತ ಶಿಕ್ಷಣ ಅಕಾಡೆಮಿಯ ವೈಶಿಷ್ಟ್ಯವಾದರೂ ಏನು? ಇದು ದೇಶದಲ್ಲೇ ವಿಶಿಷ್ಟ ಸಂಸ್ಥೆ. ಶಾಲಾ ಶಿಕ್ಷಕಕರಾಗುವವರಿಗೆ ಬಿ.ಇಡಿ, ಎಂ.ಇಡಿಯಲ್ಲಿ ತರಬೇತಿ ಸಿಗುತ್ತದೆ. ಆದರೆ ಕಾಲೇಜು ಉಪನ್ಯಾಸಕರು, ಸಹಾಯಕ ಮತ್ತು ಸಹ ಪ್ರಾಧ್ಯಾಪಕರಿಗೆ ತಮ್ಮ ವಿಷಯ ಬಿಟ್ಟು ಬೇರೆ ವಿಷಯಗಳ ಸಮಗ್ರ ತರಬೇತಿ ಸಿಗುವುದೇ ಇಲ್ಲ. ಇದು ನೇರವಾಗಿ ಪರಿಣಾಮ ಬೀರುವುದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ. ಸರಿಯಾಗಿ ತರಬೇತಿ ಪಡೆಯದ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಸರಿಯಾಗಿ ಕಲಿಸುತ್ತಾರೆ ಎನ್ನುವುದನ್ನು ನಿರೀಕ್ಷೆ ಮಾಡುವುದಾದರೂ ಹೇಗೆ? ಇದನ್ನು ಮನಗಂಡು ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ 2014ರಲ್ಲಿಯೇ ಶಾಸಕ ಅರವಿಂದ ಬೆಲ್ಲದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಈ ನಿಟ್ಟಿನಲ್ಲಿ ಬೆಲ್ಲದ ಈ ಯೋಜನೆ ಜಾರಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಕಾನೂನು ವಿಶ್ವವಿದ್ಯಾಲಯ, ಐಐಟಿ, ಐಐಐಟಿ ಕಾರ್ಯ ನಿರ್ವಹಿಸುತ್ತಿವೆ. ಇವೆಲ್ಲವುಗಳ ಸಹಾಯದಿಂದ ಉನ್ನತ ಶಿಕ್ಷಣ ಅಕಾಡೆಮಿ ಉತ್ತಮ ಕಾರ್ಯ ನಿರ್ವಹಿಸಲಿದೆ ಎನ್ನುವುದು ಶಾಸಕ ಅರವಿಂದ ಬೆಲ್ಲದ ಅವರ ಆಶಯ. ಆ ಮೂಲಕ ದೇಶದ ಶಿಕ್ಷಣ ವ್ಯವಸ್ಥೆಗೆ ಧಾರವಾಡದ ಈ ಅಕಾಡೆಮಿ ದಿಕ್ಸೂಚಿಯಾಗುವ ಭರವಸೆ ಇದೆ ಎನ್ನುವುದು ಕೂಡ ಅವರ ನಂಬಿಕೆಯಾಗಿದೆ.
ಕೊವಿಡ್-19 ಅತಿವೃಷ್ಟಿಯಿಂದ ಕಾಮಗಾರಿ ವಿಳಂಬ: ಎಲ್ಲವೂ ಸರಿಯಾಗಿ ನಡೆದಿದ್ದರೆ, ಇಷ್ಟೊತ್ತಿಗೆ ಕಟ್ಟಡ ನಿರ್ಮಾಣ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿರುತ್ತಿತ್ತು. ಆದರೆ ಕೊರೊನಾ ಮತ್ತು ಮಳೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಕೊವಿಡ್-19 ಸಮಸ್ಯೆಯಿಂದ ಕೆಲಸ ನಿಂತೇ ಹೋಗಿತ್ತು. ಇನ್ನೇನು ಕೊರೊನಾ ಕಡಿಮೆಯಾಗಿ ಕಾಮಗಾರಿ ಶುರುವಾಗುತ್ತದೆ ಎನ್ನುವ ವೇಳೆಗೆ ಅತಿಯಾದ ಮಳೆಯಿಂದಾಗಿ ಕಾಮಗಾರಿಗೆ ಅಡ್ಡಿಯುಂಟಾಗಿದೆ. ಆದರೂ ನಿಗದಿತ ಅವಧಿಯಲ್ಲಿಯೇ ಕಾಮಗಾರಿಯನ್ನು ಮುಗಿಸುವ ಭರವಸೆಯನ್ನು ಅಕಾಡೆಮಿಯ ನಿರ್ದೇಶಕ ಡಾ. ಶಿವಪ್ರಸಾದ್ ವ್ಯಕ್ತಪಡಿಸಿದ್ದು, ಇನ್ನೊಂದು ವರ್ಷದಲ್ಲಿ ಸುಸಜ್ಜಿತವಾದ ಕ್ಯಾಂಪಸ್ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ಅಕಾಡೆಮಿ ವಿದ್ಯಾಕಾಶಿಯ ಕಿರೀಟಕ್ಕೆ ಮತ್ತೊಂದು ಗರಿ ಎಂದರೆ ತಪ್ಪಾಗಲಾರದು.