
ಬೆಂಗಳೂರು, (ಜೂನ್ 27): ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ (karnataka MLC Elections 2026) ಬಿಜೆಪಿ ಹಾಗೂ ಮಿತ್ರ ಪಕ್ಷ ಜೆಡಿಎಸ್ (BJP And JDS) ಶಾಸಕರು ಅಡ್ಡಮತದಾನ (Cross Voting) ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಅದರಲ್ಲೂ ಮುಖ್ಯವಾಗಿ ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಇದನ್ನು ಹೈಕಮಾಂಡ್ ನಾಯಕರು ಸಹ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಇನ್ನು ಈ ಸಂಬಂಧ ರಾಜ್ಯ ಬಿಜೆಪಿ ರಚಿಸಿದ್ದ ಸತ್ಯಶೋಧನಾ ಸಮಿತಿ ಮಧ್ಯಂತರ ವರದಿ ನೀಡಿದೆ. ಸಿಟಿ ರವಿ ನೇತೃತ್ವದ ಸಮಿತಿ ಇಂದು (ಜೂನ್ 27) ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ನೀಡಿದ್ದು, ಎನ್‌ಡಿಎ ಮೈತ್ರಿಗೆ ಸೇರಿದ್ದ 12 ಮತಗಳಲ್ಲಿ ಒಂದು ಅಸಿಂಧುವಾಗಿದೆ. ಇನ್ನುಳಿದ ಮೂರು ಮತಗಳು ಕ್ರಾಸ್ ವೋಟಿಂಗ್ ಆಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮೈತ್ರಿ ಅಭ್ಯರ್ಥಿಗೆ ನಿರೀಕ್ಷಿತ ಮತಗಳು ಸಿಗದ ಹಿನ್ನೆಲೆಯಲ್ಲಿ ಅಡ್ಡ ಮತದಾನದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಿ.ಟಿ. ರವಿ, ಮಾಜಿ ಸಚಿವ ಎನ್. ಮಹೇಶ್, ಶಾಸಕ ಮಹೇಶ್ ಟೆಂಗಿನಕಾಯಿ ನೇತೃತ್ವದ ತ್ರಿಸದಸ್ಯ ಸತ್ಯಶೋಧನಾ ಸಮಿತಿಯನ್ನು ರಚಿಸಿದ್ದರು. ನಾಲ್ಕು ದಿನಗಳ ಕಾಲ ಪಕ್ಷದ ಶಾಸಕರು, ಮುಖಂಡರು ಹಾಗೂ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ ಸಮಿತಿ, ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಯಲ್ಲಿ ಇಂದು ಮುಚ್ಚಿದ ಲಕೋಟೆಯಲ್ಲಿ ಸುಮಾರ 3 ಪುಟಗಳ ಮಧ್ಯಂತರ ವರದಿಯನ್ನು ವಿಜಯೇಂದ್ರ ಅವರಿಗೆ ಸಲ್ಲಿಸಿದೆ.
ವರದಿ ಸಲ್ಲಿಸಿದ ಬಳಿಕ ಮಾತನಾಡಿದ ಸಿ.ಟಿ. ರವಿ, ಪಕ್ಷದ ಅಧ್ಯಕ್ಷರ ಸೂಚನೆಯಂತೆ ಆಂತರಿಕ ತನಿಖೆ ನಡೆಸಿ ವರದಿ ನೀಡಿದ್ದೇವೆ ಎಂದರು. ಮಾಧ್ಯಮಗಳಲ್ಲಿ ಬಂದ ಮಾಹಿತಿ, ವಿವಿಧ ನಾಯಕರ ಅಭಿಪ್ರಾಯ ಹಾಗೂ ಲಭ್ಯ ಮಾಹಿತಿಯ ಆಧಾರದಲ್ಲಿ ವರದಿ ಸಿದ್ಧಪಡಿಸಲಾಗಿದೆ. ಇದು ಸಂಪೂರ್ಣ ಆಂತರಿಕ ವರದಿಯಾಗಿರುವುದರಿಂದ ಸಾರ್ವಜನಿಕವಾಗಿ ಬಹಿರಂಗಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಎನ್‌ಡಿಎ ಮೈತ್ರಿಗೆ ಸೇರಿದ್ದ 12 ಮತಗಳಲ್ಲಿ ಒಂದು ಅಸಿಂಧುವಾಗಿದ್ದು, ಮೂರು ಮತಗಳು ಕ್ರಾಸ್ ವೋಟಿಂಗ್ ಆಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಮಾಹಿತಿಯ ಪ್ರಕಾರ, ಬೆಳಗಾವಿ ಮೂಲದ ಹಿರಿಯ ಶಾಸಕರಿಂದಲೇ ಅಡ್ಡ ಮತದಾನ ನಡೆದಿದೆ ಎಂಬ ಶಂಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಸಮಿತಿ ಸಭೆಯಲ್ಲೂ ಈ ವಿಚಾರ ಪ್ರಸ್ತಾಪವಾಗಿದ್ದು, ಆಂತರಿಕವಾಗಿ ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ. ಕೇಂದ್ರ ನಾಯಕತ್ವದ ಮುಂದೆಯೂ ಬೆಳಗಾವಿ ರಾಜಕಾರಣ ಮತ್ತು ಅಡ್ಡ ಮತದಾನ ಪ್ರಕರಣ ಪ್ರಸ್ತಾಪವಾಗಿದ್ದು, ಕುತೂಹಲ ಹೆಚ್ಚಿಸಿದೆ. ಇದೀಗ ಕೇಂದ್ರ ನಾಯಕರು ಈ ವಿಚಾರವಾಗಿ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು, ರಾಜ್ಯ ನಾಯಕರಿಗೆ ಸೂಕ್ತ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ವಿಧಾನ ಪರಿಷತ್ ಚುನಾವಣೆಯ ಮತದಾನದ ಸಂದರ್ಭದಲ್ಲಿ ಶಾಸಕರಿಗೆ ವಿನೂತನ ಮಾದರಿಯ ಕೋಡ್ ವರ್ಡ್ ಸಲಹೆ ನೀಡಲಾಗಿತ್ತು. ಈ ಹಿಂದೆ ರಾಜ್ಯಸಭಾ ಮತ್ತು ಪರಿಷತ್ ಚುನಾವಣೆ ಸಂದರ್ಭದಲ್ಲಿ ಪ್ರತ್ಯೇಕ ಫಾರ್ಮೆಟ್ ರೆಡಿ ಮಾಡಿದ್ದರು. ಆ ಫಾರ್ಮೆಟ್ ಅನುಗುಣವಾಗಿ ಶಾಸಕರಿಗೆ ಇಂತಹ ವ್ಯಕ್ತಿಗೆ ಮತಹಾಕಲು ಕೋಡ್ ರೆಡಿ ಮಾಡುತ್ತಿದ್ದರು. ಆದ್ರೆ ರಾಜ್ಯ ನಾಯಕರು ಇದನ್ನ ಕಡಗಣಿಸಿರುವ ಆರೋಪ ಕೇಳಿ ಬರ್ತಿದೆ.
ಪರಿಸ್ಥಿತಿಯನ್ನ ಗಂಭೀರವಾಗಿ ಪರಿಗಣಿಸಿಲ್ಲ ಎಂದ ಹಿರಿಯ ನಾಯಕರು ಅಸಮಾಧಾನಗೊಂಡಿದ್ದಾರೆ. ಸಂಖ್ಯೆ ಕಡಿಮೆ ಇದ್ದರು ರೆಸಾರ್ಟ್‌ಗೆ ಕರೆದುಕೊಂಡು ಹೋಗಿ ಪ್ಲ್ಯಾನ್ ಮಾಡಿಲ್ಲ. ಮತದಾನದ ಬೆಳಗ್ಗೆ ವಿಪ್ ಜಾರಿ ಮಾಡಿದ್ದಾರೆಂದು ಬಿಜೆಪಿ ಹಿರಿಯ ನಾಯಕರು ಬೇಸರಗೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ 28 ಮತಗಳು ಅಗತ್ಯ. ಆದ್ರೆ 30 ಮತಗಳು ಹಾಕಿಸಿದ್ದಾರೆ. 29 ಮತದಾನ ಹಾಕಿದ್ರು ಪರವಾಗಿಲ್ಲ. ಆದ್ರೆ 30 ಮತ ಹಾಕಿಸಿ NDA ಅಭ್ಯರ್ಥಿಗೆ ಮತ ಕೊರತೆ ಉಂಟಾಗಿತ್ತು. ಹಿರಿಯರ ಸಲಹೆ ಪರಿಗಣಿಸುತ್ತಿಲ್ಲ ಎಂಬ ಆರೋಪಗಳು, ಅಸಮಾಧಾನವೂ ಜೋರಾಗಿಯೇ ಕೇಳಿ ಬರ್ತಿದೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಕೂಡ ಪ್ರತಿಕ್ರಿಯೆ ನೀಡಿದ್ದು, ವರದಿ ರಾಜ್ಯಾಧ್ಯಕ್ಷರಿಗೆ ಸಲ್ಲಿಕೆಯಾಗಿದೆ. ಮುಂದಿನ ಹಂತದಲ್ಲಿ ಅದನ್ನು ಪಕ್ಷದ ಹೈಕಮಾಂಡ್‌ಗೆ ರವಾನಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ವರದಿ ಆಂತರಿಕ ತನಿಖೆಯ ಭಾಗವಾಗಿರುವುದರಿಂದ ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು. ಅಡ್ಡ ಮತದಾನ ಮಾಡಿದವರ ಸಂಖ್ಯೆ ಬಗ್ಗೆ ಊಹಾಪೋಹ ನಡೆಸಬಾರದು ಎಂದು ಹೇಳಿದ ಅವರು, ಮುಂದಿನ ಕ್ರಮವನ್ನು ಪಕ್ಷದ ನಾಯಕರೇ ನಿರ್ಧರಿಸಲಿದ್ದಾರೆಂದು ಸ್ಪಷ್ಟಪಡಿಸಿದರು.
ಸದ್ಯಕ್ಕೆ ಸತ್ಯ ಶೋಧನಾ ವರದಿಯ ಆಧಾರದ ಮೇಲೆ ಕೋರ್ ಕಮಿಟಿ ಹಾಗೂ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳುತ್ತೆ ಅಂತ ಹೇಳಲಾಗ್ತಿದೆ. ಮತ್ತೊಂದೆಡೆ ಕೇಂದ್ರದ ನಾಯಕರು ಚುನಾವಣೆ ವೇಳೆ ನೀಡಿದ್ದ ಮಾದರಿಯ ಕೋಡ್ ವರ್ಡ್ ರಾಜ್ಯದ ನಾಯಕರು ಕಡಿಗಣಿಸಿದ್ದು ಮತ್ತೊಂದು ಅಸಮಾಧಾನಕ್ಕೆ ಕಾರಣವಾಗಿದೆ.