AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ ಬ್ಯಾಂಕ್​ನಿಂದ 2.3 ಕೋಟಿ ರೂ. ಎಗರಿಸಿದ ಸೈಬರ್ ವಂಚಕರು

ಬೀದರ್​​​ನಲ್ಲಿ ಎಟಿಎಂಗೆ ಹಣ ತುಂಬಲು ಬಂದವರ ಮೇಲೆ ಶೂಟೌಟ್ ಮಾಡಿದ್ದಾಯ್ತು, ಮಂಗಳೂರಿನ ಉಳ್ಳಾಲದಲ್ಲಿ ಕೋಟೆಕಾರು ಬ್ಯಾಂಕ್ ದರೋಟೆ ಆಯ್ತು ಇದೀಗ ವಿಜಯನಗರದಲ್ಲಿಯೂ ಬ್ಯಾಂಕ್ ದರೋಡೆ ನಡೆದಿದೆ. ಆದರೆ, ವಿಜಯನಗರದಲ್ಲಿ ನಡೆದಿದ್ದು ಸೈಬರ್ ದರೋಡೆ! ಸಹಕಾರಿ ಬ್ಯಾಂಕೊಂದರಿಂದ ಸೈಬರ್ ವಂಚಕರು 2 ಕೋಟಿ ರೂಪಾಯಿಗೂ ಹೆಚ್ಚು ದರೋಡೆ ನಡೆಸಿರುವುದು ತಡವಾಗಿ ವರದಿಯಾಗಿದೆ. ವಿವರಗಳು ಇಲ್ಲಿವೆ.

ಬಳ್ಳಾರಿ ಬ್ಯಾಂಕ್​ನಿಂದ 2.3 ಕೋಟಿ ರೂ. ಎಗರಿಸಿದ ಸೈಬರ್ ವಂಚಕರು
ಸಾಂದರ್ಭಿಕ ಚಿತ್ರ
ವಿನಾಯಕ ಬಡಿಗೇರ್​
| Updated By: Ganapathi Sharma|

Updated on:Jan 24, 2025 | 12:16 PM

Share

ವಿಜಯನಗರ, ಜನವರಿ 24: ವಿಜಯನಗರ ಮತ್ತು ಬಳ್ಳಾರಿ ಅವಳಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ (ಬಿಡಿಸಿಸಿ) ಬ್ಯಾಂಕ್‌ನ ಕೆಲವು ಶಾಖೆಗಳಲ್ಲಿ ಗ್ರಾಹಕರು ತಮ್ಮ ಖಾತೆಗೆ ಹಣ ಜಮೆ ಆಗುತ್ತಿಲ್ಲ ಎಂದು ದೂರುಗಳನ್ನು ಸಲ್ಲಿಸಿದ ನಂತರ ದೊಡ್ಡ ಮೊತ್ತದ ಹಣ ದರೋಡೆಯಾಗಿರುವುದು ಪತ್ತೆಯಾಗಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಅಪರಾಧಿಯು ಬ್ಯಾಂಕ್‌ನ ಆರ್​​ಟಿಜಿಎಸ್ /ನೆಫ್ಟ್​​ ವಹಿವಾಟು ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡಿದ್ದಾನೆ.

ಬಿಡಿಸಿಸಿ ಬ್ಯಾಂಕ್‌ನಿಂದ ಐಡಿಬಿಐ ಬ್ಯಾಂಕ್‌ಗೆ ವಾಡಿಕೆಯಂತೆ ಹಣ ವರ್ಗಾವಣೆಯ ಸಮಯದಲ್ಲಿ, 2025 ರ ಜನವರಿ 10 ರಂದು ಹ್ಯಾಕರ್‌ಗಳು ಎಕ್ಸ್​ಎಂಎಲ್​​ ಫೈಲ್‌ಗಳಲ್ಲಿನ ಖಾತೆ ಸಂಖ್ಯೆಗಳು ಮತ್ತು ಐಎಫ್​​ಎಸ್​​ಸಿ ಕೋಡ್‌ಗಳನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದರು ಎಂಬುದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.

ಉತ್ತರದ ರಾಜ್ಯಗಳ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ!

ಫಲಾನುಭವಿಗಳ ಹೆಸರುಗಳು ಬದಲಾಗದೆ ಉಳಿದಿದ್ದರೂ, ಯಾರ ಖಾತೆಗೆ ಹಣ ವರ್ಗಾವಣೆಯಾಗಬೇಕಿತ್ತೋ ಅವುಗಳ ಬದಲಿಗೆ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿನ 25 ವಿಭಿನ್ನ ಖಾತೆಗಳಿಗೆ ಹಣ ಜಮೆ ಆಗಿರುವುದು ಗೊತ್ತಾಗಿದೆ.

ತಡವಾಗಿ ಬೆಳಕಿಗೆ ಬಂದ ಆನ್​ಲೈನ್ ದರೋಡೆ

ಜನವರಿ 10 ರಿಂದ ಆನ್‌ಲೈನ್ ಹಣ ವರ್ಗಾವಣೆಗಳು ಉದ್ದೇಶಿತ ಗ್ರಾಹಕರ ಖಾತೆಗಳಿಗೆ ಜಮೆಯಾಗಿಲ್ಲ ಎಂಬ ಬಗ್ಗೆ ಹಲವು ಶಾಖೆಗಳು ವರದಿ ಮಾಡಿದ ನಂತರ ಜನವರಿ 13ರಂದು ಆನ್​ಲೈನ್ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. 5 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ವಹಿವಾಟುಗಳು ಇತರ ಖಾತೆಗಳಿಗೆ ಜಮೆ ಆಗಿರುವುದು ಬ್ಯಾಂಕ್‌ನ ತನಿಖೆಯಿಂದ ತಿಳಿದುಬಂದಿದೆ.

ಘಟನೆ ಬೆಳಕಿಗೆ ಬಂದ ತಕ್ಷಣವೇ ಬ್ಯಾಂಕ್ ತನ್ನ ಆರ್‌ಟಿಜಿಎಸ್/ನೆಫ್ಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ ಮತ್ತು ಹೊಸಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ನಂತರ ಅವರು ಪ್ರಕರಣವನ್ನು ಬಳ್ಳಾರಿ ಸಿಇಎನ್ (ಸೈಬರ್ ಎಕನಾಮಿಕ್ ನಾರ್ಕೋಟಿಕ್ಸ್) ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

ಇದನ್ನೂ ಓದಿ: ಕೋಟೆಕಾರು ಬ್ಯಾಂಕ್ ದರೋಡೆಯಲ್ಲಿ ಶಾಮೀಲಾದ ಸ್ಥಳೀಯರಿಗೆ ರಾಜಕೀಯ ಬೆಂಬಲ: ಶಾಸಕ ಭರತ್ ಶೆಟ್ಟಿ ಗಂಭೀರ ಆರೋಪ

ಕಂಪ್ಯೂಟರ್ ಮೂಲಗಳನ್ನು ಬಳಸಿಕೊಂಡು ವಂಚನೆ ಎಸಗುವುದು ಮತ್ತು ವಂಚನೆಗೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತ್ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:11 pm, Fri, 24 January 25