ಬಸ್ನಿಂದ ಬಿದ್ದು ಮೆದುಳು ನಿಷ್ಕ್ರಿಯ: ಸಾವಿನಲ್ಲೂ ವಿದ್ಯಾರ್ಥಿಯ ಸಾರ್ಥಕತೆ
ವೇಗವಾಗಿ ಚಲಿಸುತ್ತಿದ್ದ ಖಾಸಗಿ ಬಸ್ನಿಂದ ಹೊರಕ್ಕೆ ಎಸೆಯಲ್ಪಟ್ಟಿದ್ದ ಮಂಗಳೂರಿನ ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆ ಆತನ ಕುಟುಂಬಸ್ಥರು ಮಗನನ್ನು ಕಳೆದುಕೊಂಡ ದುಃಖದ ನಡುವೆಯೂ ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಂಗಳೂರು: ವೇಗವಾಗಿ ಚಲಿಸುತ್ತಿದ್ದ ಖಾಸಗಿ ಬಸ್ನಿಂದ ಹೊರಕ್ಕೆ ಎಸೆಯಲ್ಪಟ್ಟಿದ್ದ ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆ ಆತನ ಕುಟುಂಬಸ್ಥರು ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ವಾರದ ಹಿಂದೆ ನಡೆದ ಘಟನೆಯಲ್ಲಿ ಉಳ್ಳಾಲದ ಮಾಸ್ತಿಕಟ್ಟೆ ನಿವಾಸಿ ಯಶ್ ರಾಜ್(16) ಎಂಬಾತನಿಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನಿಡಲಾಗುತ್ತಿತ್ತು. ಸದ್ಯ ಆತನ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆ ಅಂಗಾಂಗಗಳನ್ನು ದಾನ ಮಾಡಲಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಅಂಗಾಂಗ ಜೋಡಣೆ ಮಾಡಲಾಗಿದೆ.
ಮಂಗಳೂರಿನ ಖಾಸಗಿ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿ ಯಶ್ ರಾಜ್ ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ. ಸೆ.7ರಂದು ಕಾಲೇಜಿಗೆ ಹೋಗಲು ಎಂದಿನಂತೆ ಖಾಸಗಿ ಬಸ್ನಲ್ಲಿ ಸಂಚರಿಸುತ್ತಿದ್ದಾಗ ಆಡಂ ಕುದ್ರು ಎಂಬಲ್ಲಿ ಬಸ್ನಿಂದ ಹೊರಕ್ಕೆ ಎಸೆಯಲ್ಪಟ್ಟಿದ್ದಾನೆ. ಘಟನೆಯಲ್ಲಿ ಯಶ್ರಾಜ್ನ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಕೂಡಲೇ ಯಶ್ರಾಜ್ನನ್ನು ಖಾಸಗಿ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ನೀಡಲಾಗುತ್ತಿತ್ತು. ವಿದ್ಯಾರ್ಥಿಯನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ಪ್ರಯತ್ನ ಮಾಡಿದ್ದರೂ ಮೆದುಳು ನಿಷ್ಕ್ರಿಯ ಗೊಂಡಿದೆ.
ಸದ್ಯ ಆತನ ಪೋಷಕರು ಮಗನನ್ನು ಕಳೆದುಕೊಂಡ ದುಃಖದ ನಡುವೆಯೂ ಅಂಗಾಂಗ ದಾನ ಮಾಡುವ ಮೂಲಕ ಮತ್ತೊಬ್ಬರ ಜೀವನಕ್ಕೆ ಬೆಳಕು ನೀಡಿದ್ದಾರೆ. ಗ್ರೀನ್ ಕಾರಿಡಾರ್ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಮೃತ ವಿದ್ಯಾರ್ಥಿಯ ಅಂಗಾಂಗಗಳನ್ನು ರವಾನೆ ಮಾಡಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕೊಂಡೊಯ್ಯಲಾಗಿದೆ. ಅಲ್ಲಿ ಓರ್ವ ರೋಗಿಗೆ ಅವುಗಳನ್ನು ಜೋಡಣೆ ಮಾಡಲಾಗಿದೆ.
ಶಾಲಾ ಕಾಲೇಜು ಆರಂಭವಾದರೆ ಸಾಕು ಖಾಸಗಿ, ಸರ್ಕಾರಿ ಬಸ್ಗಳು ಭರ್ತಿಗೊಂಡು ಸಂಚರಿಸುತ್ತಿರುತ್ತವೆ. ಸದ್ಯ ಮೃತನ ಕುಟುಂಬಸ್ಥರು ಖಾಸಗಿ ಬಸ್ಸಿನ ನಿರ್ಲಕ್ಷ್ಯ ಮತ್ತು ಅತೀ ವೇಗದ ಚಾಲನೆಯೇ ಯಶ್ ರಾಜ್ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಮೆಟ್ಟಿಲಿನಲ್ಲೂ ಪ್ರಯಾಣಿಕರನ್ನು ತುಂಬಿಸಿ ವೇಗವಾಗಿ ಸಾಗಿಸಲಾಗುತ್ತಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪೊಲೀಸರಿಗೆ ಕುಟುಂಬಸ್ಥರು ದೂರು ನೀಡಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:47 pm, Wed, 14 September 22