ದುಬೈನಿಂದ ಮಂಗಳೂರಿಗೆ ಬಂದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ! 35 ಜನರಿಗೆ ಐಸೋಲೇಷನ್
ದುಬೈನಿಂದ ಮಂಗಳೂರಿಗೆ ಬಂದಿದ್ದ ವಿಮಾನದಲ್ಲಿ ಒಟ್ಟು 191 ಪ್ರಯಾಣಿಕರಿದ್ದರು. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 15, ಉಡುಪಿಯ 6, ಕಾಸರಗೋಡು 13, ಕಣ್ಣೂರು 01 ಪ್ರಯಾಣಿಕರು ಇದ್ದರು.
ಮಂಗಳೂರು: ದುಬೈನಿಂದ ಮಂಗಳೂರಿಗೆ ಬಂದಿದ್ದ 31 ವರ್ಷದ ವ್ಯಕ್ತಿಗೆ ಮಂಕಿಪಾಕ್ಸ್ (Monkey Pox) ಇರುವುದು ದೃಢವಾಗಿದೆ. ವ್ಯಕ್ತಿ ಜುಲೈ 13ರಂದು ದುಬೈನಿಂದ ಮಂಗಳೂರು ಏರ್ ಪೋರ್ಟ್ಗೆ (Mangalore Airport) ಬಂದಿದ್ದರು. ಬಳಿಕ ಏರ್ ಪೋರ್ಟ್ನಿಂದ ಕೇರಳಕ್ಕೆ ತೆರಳಿದ್ದಾರೆ. ಮಂಕಿಪಾಕ್ಸ್ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆ ಕಣ್ಣೂರು ಮೆಡಿಕಲ್ ಕಾಲೇಜಿನಲ್ಲಿ ತಪಾಸಣೆ ನಡೆಸಲಾಗಿದೆ. ಮೆಡಿಕಲ್ ರಿಪೋರ್ಟ್ನಲ್ಲಿ ಮಂಕಿಪಾಕ್ಸ್ ಇರುವುದು ದೃಢಪಟ್ಟಿದೆ. ಈ ಮೂಲಕ ಕೇರಳದಲ್ಲಿ ಎರಡನೇ ಮಂಕಿಪಾಕ್ಸ್ ಇರುವುದು ಪತ್ತೆಯಾಗಿದೆ. ಇನ್ನು ಪ್ರಯಾಣಿಕನ ಸಂಪರ್ಕದಲ್ಲಿದ್ದ 35 ಜನರನ್ನ ಐಸೋಲೇಷನ್ಗೆ ಒಳಪಡಿಸಲಾಗಿದೆ.
ದುಬೈನಿಂದ ಮಂಗಳೂರಿಗೆ ಬಂದಿದ್ದ ವಿಮಾನದಲ್ಲಿ ಒಟ್ಟು 191 ಪ್ರಯಾಣಿಕರಿದ್ದರು. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 15, ಉಡುಪಿಯ 6, ಕಾಸರಗೋಡು 13, ಕಣ್ಣೂರು 01 ಪ್ರಯಾಣಿಕರು ಇದ್ದರು. ರೋಗ ಲಕ್ಷಣ ಇದ್ದಲ್ಲಿ ತಕ್ಷಣ ಆರೋಗ್ಯ ಇಲಾಖೆ ಅಥವಾ ಆಸ್ಪತ್ರೆಗೆ ದಾಖಲಾಗಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಇದನ್ನೂ ಓದಿ: ಹಳಿಯಾಳದ ಹಾಸ್ಟೆಲೊಂದರಲ್ಲಿ ರಾತ್ರಿಯೂಟ ಸೇವಿಸಿದ ನಂತರ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಯುವಕನ ರಕ್ತದ ಮಾದರಿಯನ್ನು ಪುಣೆ ವೈರಾಲಜಿ ಕೇಂದ್ರಕ್ಕೆ ವೈದ್ಯರು ಕಳುಹಿಸಿದ್ದು, ಅಲ್ಲಿ ಪಾಸಿಟಿವ್ ಬಂದಿರುವುದು ತಿಳಿದುಬಂದಿದೆ. ಮಂಗಳೂರು ಏರ್ಪೋರ್ಟ್ ಮೂಲಕ ಕೇರಳಕ್ಕೆ ತೆರಳಿದ್ದ ಯುವಕನಿಗೆ ಮಂಕಿಪಾಕ್ಸ್ ದೃಢಪಟ್ಟಿರುವುದರಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ ಮಂಗಳೂರಿನಲ್ಲಿ ಅಲರ್ಟ್ ಮಾಡಿದೆ.
ಕೇರಳದಲ್ಲಿ ಮೊದಲ ಮಂಕಿಫಾಕ್ಸ್ ಪ್ರಕರಣ ಜು.12 ರಂದು ತಿರುವನಂತಪುರದಲ್ಲಿ ದಾಖಲಾಗಿತ್ತು.
ಇದನ್ನೂ ಓದಿ: ನಡುಗಡ್ಡೆಯಾದ ಗಂಗಾವತಿಯ ನವಬೃಂದಾವನ ಗಡ್ಡೆ, ರಘುವರ್ಯ ಮಹಿಮೋತ್ಸವ ರದ್ದು
ಮಂಕಿಪಾಕ್ಸ್ ಎಂದರೇನು?: ಮಂಕಿಪಾಕ್ಸ್ ಎಂಬುದು ಸಿಡುಬು ಕುಟುಂಬಕ್ಕೆ ಸೇರಿದ ಅಪರೂಪದ ವೈರಲ್ ಪಾಕ್ಸ್ ತರಹದ ಸೋಂಕು ಕಾಯಿಲೆಯಾಗಿದೆ, ಆದರೆ ಇದು ಸೌಮ್ಯವಾಗಿರುತ್ತದೆ. ಇದು ಉಸಿರಾಟದಿಂದ ಹೊರಸೂಸುವ ಹನಿಗಳು, ದೇಹದಿಂದ ಸ್ರವಿಸುವ ದ್ರವಗಳ ಸ್ಪರ್ಶ ಅಥವಾ ಸೋಂಕಿತ ಪ್ರಾಣಿ ಅಥವಾ ಪ್ರಾಣಿ ಉತ್ಪನ್ನಗಳೊಂದಿಗೆ ಸಂಪರ್ಕವಾದಾಗ ಹರಡಬಹುದು. ಇಂತಹ ರೋಗ ಲಕ್ಷಣವನ್ನು ಮಂಕಿಪಾಕ್ಸ್ ಎಂದು ಕರೆಯಲಾಗುತ್ತದೆ. ಏಕೆಂದರೆ ಇದನ್ನು ಮೊದಲು ಪ್ರಯೋಗಾಲಯದ ಮಂಗಗಳಲ್ಲಿ ಗುರುತಿಸಲಾಗಿದೆ. ಮಂಕಿಪಾಕ್ಸ್ ಹೆಚ್ಚಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಕಂಡುಬರುತ್ತದೆ.
Published On - 11:50 am, Tue, 19 July 22