ಹಡಗುಗಳ ಮೇಲಿನ ಇರಾನ್ ದಾಳಿಯಿಂದ ಪಾರಾದ ಮಂಗಳೂರಿನ ಯುವಕ: ಜೀವ ಉಳಿಸಿಕೊಳ್ಳಲು ಮಾಡಿದ್ದೇನು ನೋಡಿ

ಕೊಲ್ಲಿ ವಲಯದಲ್ಲಿ ಇರಾನ್ ಕ್ಷಿಪಣಿ ದಾಳಿಯಿಂದ 'ಜೆಎಫ್ಎಸ್ ಗ್ಯಾಲಕ್ಸಿ' ಹಡಗಿನಲ್ಲಿದ್ದ ಬಂಟ್ವಾಳದ ರಚನ್ ಪೂಜಾರಿ ಸೇರಿದಂತೆ ಎಲ್ಲಾ ಭಾರತೀಯ ಸಿಬ್ಬಂದಿ ಪಾರಾಗಿದ್ದಾರೆ. ಒಮಾನ್ ಕರಾವಳಿಯಲ್ಲಿ ಎಂಜಿನ್ ಕೊಠಡಿಯನ್ನು ಗುರಿಯಾಗಿಸಿ ದಾಳಿ ನಡೆದಿತ್ತು. ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾದ ಅವರನ್ನು ಒಮಾನ್ ನೌಕಾಪಡೆ ರಕ್ಷಿಸಿದ್ದು, ಸದ್ಯ ಎಲ್ಲರೂ ಸುರಕ್ಷಿತರಾಗಿದ್ದಾರೆ. ರಚನ್ ಕುಟುಂಬ ನಿಟ್ಟುಸಿರು ಬಿಟ್ಟಿದೆ.

ಹಡಗುಗಳ ಮೇಲಿನ ಇರಾನ್ ದಾಳಿಯಿಂದ ಪಾರಾದ ಮಂಗಳೂರಿನ ಯುವಕ: ಜೀವ ಉಳಿಸಿಕೊಳ್ಳಲು ಮಾಡಿದ್ದೇನು ನೋಡಿ
ರಚನ್ ಪೂಜಾರಿ ಬಂಟ್ವಾಳ
Edited By:

Updated on: Jul 15, 2026 | 3:56 PM

ಮುಖ್ಯಾಂಶಗಳು

  • ಒಮಾನ್ ಕರಾವಳಿ ತೀರದಲ್ಲಿ ಇರಾನ್ ಪಡೆಗಳು ನಡೆಸಿದ ಭೀಕರ ಕ್ಷಿಪಣಿ ದಾಳಿ
  • ದಾಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಯುವಕ ಪಾರು
  • ವಾಣಿಜ್ಯ ಹಡಗು ಯುಎಇ ಬಂದರಿನ ಕಡೆಗೆ ಪ್ರಯಾಣ ಬೆಳೆಸುತ್ತಿತ್ತು

ಮಂಗಳೂರು, ಜು.15: ಕೊಲ್ಲಿ ವಲಯದಲ್ಲಿ ಹಡಗುಗಳ ಮೇಲಿನ ದಾಳಿ ಮತ್ತಷ್ಟು ತೀವ್ರಗೊಂಡಿದ್ದು, ಒಮಾನ್ ಕರಾವಳಿ ತೀರದಲ್ಲಿ ಇರಾನ್ ಪಡೆಗಳು ನಡೆಸಿದ ಭೀಕರ ಕ್ಷಿಪಣಿ ದಾಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಯುವಕನೊಬ್ಬ ಪಾರಾಗಿದ್ದಾರೆ. ದಾಳಿಗೆ ಒಳಗಾದ ಹಡಗಿನಲ್ಲಿದ್ದ ಎಲ್ಲಾ ಭಾರತೀಯ ಸಿಬ್ಬಂದಿಯನ್ನು ಸದ್ಯ ರಕ್ಷಿಸಲಾಗಿದ್ದು, ಇವರಲ್ಲಿ ಜಿಲ್ಲೆಯ ಪೆರ್ನೆ ನಿವಾಸಿ ರಚನ್ ಪೂಜಾರಿ ಕೂಡ ಸೇರಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಮರ್ಚೆಂಟ್ ನೇವಿ ಹಡಗಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಂಟ್ವಾಳ ತಾಲೂಕಿನ ಪೆರ್ನೆ ಬಿಳಿಯೂರು ನಿವಾಸಿ ರಚನ್ ಪೂಜಾರಿ ಅವರು ಭಾನುವಾರ ನಡೆದ ಈ ದೊಡ್ಡ ದುರಂತದಿಂದ ಪಾರಾದವರು. ಭಾನುವಾರ ಮಧ್ಯರಾತ್ರಿ ಸುಮಾರು 2 ಗಂಟೆಯ ವೇಳೆಗೆ ‘ಜೆಎಫ್ ಎಸ್ ಗ್ಯಾಲಕ್ಸಿ’ ಹೆಸರಿನ ವಾಣಿಜ್ಯ ಹಡಗು ಯುಎಇ ಬಂದರಿನ ಕಡೆಗೆ ಪ್ರಯಾಣ ಬೆಳೆಸುತ್ತಿತ್ತು.

ಹಡಗು ಭೂಭಾಗದಿಂದ ಕೇವಲ ಕೆಲವೇ ಕಿಲೋಮೀಟರ್ ದೂರದಲ್ಲಿದ್ದಾಗ ಇರಾನ್ ಪಡೆಗಳು ಹಡಗನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿವೆ. ಹಡಗು ಮುಂದೆ ಚಲಿಸದಂತೆ ತಡೆಯಲು ಇರಾನ್ ಪಡೆಗಳು ನೇರವಾಗಿ ಹಡಗಿನ ಎಂಜಿನ್ ಕೊಠಡಿಯನ್ನೇ ಗುರಿಯಾಗಿಸಿ ದಾಳಿ ನಡೆಸಿದ್ದವು. ಕ್ಷಿಪಣಿ ಅಪ್ಪಳಿಸುತ್ತಿದ್ದಂತೆ ಎಂಜಿನ್ ರೂಂನಲ್ಲಿ ಭಾರಿ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ.

ಹಡಗಿನಲ್ಲಿ ಬೆಂಕಿ ಆವರಿಸಿ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿ ಮಾರ್ಪಟ್ಟಾಗ, ಹಡಗಿನಲ್ಲಿದ್ದ ಭಾರತೀಯರು ಸೇರಿದಂತೆ ಎಲ್ಲಾ ಸಿಬ್ಬಂದಿ ಸಮಯಪ್ರಜ್ಞೆ ಮೆರೆದಿದ್ದಾರೆ. ತಕ್ಷಣವೇ ಎಲ್ಲರೂ ಜೀವ ರಕ್ಷಕ ದೋಣಿಗೆ ಜಿಗಿದು ಹಡಗಿನಿಂದ ದೂರ ಸರಿದು ಪ್ರಾಣ ಉಳಿಸಿಕೊಂಡಿದ್ದಾರೆ. ದಾಳಿಯ ನಂತರ ತಕ್ಷಣವೇ ಸಿಬ್ಬಂದಿ ಒಮಾನ್ ನೌಕಾಪಡೆಯನ್ನು (Oman Navy) ಸಂಪರ್ಕಿಸಿ ನೆರವಿಗಾಗಿ ಕೋರಿದ್ದಾರೆ. ತಕ್ಷಣ ಕಾರ್ಯಾಚರಣೆಗೆ ಇಳಿದ ಒಮಾನ್ ನೌಕಾಪಡೆಯು ಸಮುದ್ರದ ಮಧ್ಯೆ ಸಿಲುಕಿದ್ದ ಎಲ್ಲಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿ ತನ್ನ ಸೇನಾ ನೆಲೆಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ: ಏರ್ ಇಂಡಿಯಾ ಅಪಘಾತ: ಬ್ಲ್ಯಾಕ್ ಬಾಕ್ಸ್ ಆಡಿಯೋ ಬಹಿರಂಗಪಡಿಸಲು ಸಾಧ್ಯವಿಲ್ಲ, ಸುಪ್ರೀಂಗೆ ತನಿಖಾ ಸಂಸ್ಥೆಯ ಉತ್ತರ

ಕರಾವಳಿಯ ಯುವಕ ರಚನ್ ಪೂಜಾರಿ ಸೇರಿದಂತೆ ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿ ಸದ್ಯ ಒಮಾನ್‌ನಲ್ಲಿದ್ದು, ಹಡಗು ಕಂಪನಿಯ ಅಧಿಕಾರಿಗಳ ನೇರ ಮೇಲ್ವಿಚಾರಣೆ ಹಾಗೂ ಸುರಕ್ಷಿತ ಕಾವಲಿನಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಯುವಕ ಪ್ರಾಣಾಪಾಯದಿಂದ ಪಾರಾಗಿರುವ ಸುದ್ದಿ ಕೇಳಿ ಬಂಟ್ವಾಳದ ಬಿಳಿಯೂರಿನ ಅವರ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us